ಗುರುಶಾಂತ ಜಡೆಹಿರೇಮಠ
ಇದು ತಾಲೂಕಿನ ಪ್ರಸಿದ್ಧ ಶಿವತಾಣ. ಅಂಬಿಕಾನಗರದ ನಾಗಝರಿ ಕೆಪಿಸಿ ವಿದ್ಯುತ್ ಉತ್ಪಾದನ ಘಟಕದಿಂದ ಸುಮಾರು ಒಂದು ಸಾವಿರ ಮೆಟ್ಟಿಲುಗಳನ್ನು ಇಳಿದರೆ ಶಿವದೇವರ ಲಿಂಗ ದರ್ಶನ ಪಡೆಯಬಹುದು. ವರ್ಷಕ್ಕೊಮ್ಮೆ, ಶಿವರಾತ್ರಿಯಂದು ಮಾತ್ರ ಇಲ್ಲಿಗೆ ಪ್ರವೇಶವಿರುತ್ತದೆ.
ಶಿವರಾತ್ರಿಯಂದು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತರು ಇಲ್ಲಿಗೆ ಆಗಮಿಸಿ ಶಿವಲಿಂಗ ದರ್ಶನ ಪಡೆದು, ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.ಬೃಹದಾಕಾರದ ಕಲ್ಲಿನ ಗುಹೆಯಲ್ಲಿ ಕಪ್ಪು ಮತ್ತು ನೇರಳೆ ಬಣ್ಣದಿಂದ ಕೂಡಿದ ಕವಳೇಶ್ವರ ಲಿಂಗವಿದೆ. ಕವಳಾ ಗುಹೆಗೆ ಸಾಗಲು ಎರಡು ಮಾರ್ಗಗಳಿವೆ. ಒಂದು ಫನಸೋಲಿ ಗ್ರಾಮದಿಂದ ಕಾಡಿನ ಮಧ್ಯದಿಂದ ಇಳಿಜಾರು ರಸ್ತೆಯಿಂದ ಸಾಗಿ ಮೆಟ್ಟಿಲು ಇಳಿದು ಹೋಗುವುದು ಹಾಗೂ ಇನ್ನೊಂದು ಅಂಬಿಕಾನಗರ ನಾಗಝರಿ ಭಾಗದಿಂದ ಮೆಟ್ಟಿಲುಗಳನ್ನು ಇಳಿದು ಹೋಗಬೇಕಾಗುತ್ತದೆ. ಕವಳಾ ಗುಹೆಯೊಳಗೆ ಶಿವಲಿಂಗ ದರ್ಶನ ಪಡೆಯಲು ಇಕ್ಕಟ್ಟಾದ ದಾರಿ ಇದ್ದು, ಇನ್ನೊಂದು ದಾರಿಯಿಂದ ಸಾಗಿ ಗುಹೆಯಿಂದ ಹೊರ ಬರಬೇಕಾಗುತ್ತದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿವರಾತ್ರಿಗೆ ಬಂದು ಬೆಳಗ್ಗೆಯಿಂದ ಸಂಜೆ ವರೆಗೆ ಕಾಯಬೇಕಾಗುತ್ತದೆ.
ಕಾಡಿಗೆ ಯಾರೂ ಬೆಂಕಿ ಹಾಕಬಾರದು ಎಂದು ತಿಳಿವಳಿಕೆ ಫಲಕವನ್ನು ಅರಣ್ಯ ಇಲಾಖೆಯವರು ಅಳವಡಿಸುವ ಜತೆಗೆ ಧ್ವನಿವರ್ಧಕದ ಮೂಲಕ ಭಕ್ತರಿಗೆ ತಿಳಿವಳಿಕೆ ಮೂಡಿಸುತ್ತಾರೆ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗುತ್ತದೆ. ಕವಳಾ ಜಾತ್ರೆಗೆ ದಾಂಡೇಲಿಯಿಂದ ಅಷ್ಟೇ ಅಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಶಿವರಾತ್ರಿಯಂದು ಜನರು ಆಗಮಿಸುತ್ತಾರೆ. ಹಿಂದೆ ಜಾತ್ರೆಗೆ ಒಂದೆರಡು ಸಾವಿರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ಆದರೆ ಈಗ ಸುಮಾರು ಐವತ್ತು ಸಾವಿರ ಭಕ್ತರು ಶಿವರಾತ್ರಿ ದಿನ ಶಿವಲಿಂಗ ದರ್ಶನಕ್ಕೆ ಬರುತ್ತಾರೆ.