ಕೆಆರ್‌ಎಸ್‌ನಲ್ಲಿ ಡಿಕೆಶಿಯಿಂದ ಕಾವೇರಿ ಆರತಿ

KannadaprabhaNewsNetwork |  
Published : Oct 17, 2026, 01:45 AM IST
ಡಿಕೆಶಿಯಿಂದ ಕಾವೇರಿ ಆರತಿ | Kannada Prabha

ಸಾರಾಂಶ

ದಕ್ಷಿಣ ಗಂಗೆ ಎಂದೇ ಪ್ರಸಿದ್ಧವಾಗಿರುವ ಕಾವೇರಿ ಮಾತೆಗೆ ಶುಕ್ರವಾರ ಸಂಜೆ ಕೆಆರ್‌ಎಸ್‌ನ ಬೃಂದಾವನದಲ್ಲಿ ಅದ್ಧೂರಿ ಆರತಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಡ್ಯ:

ದಕ್ಷಿಣ ಗಂಗೆ ಎಂದೇ ಪ್ರಸಿದ್ಧವಾಗಿರುವ ಕಾವೇರಿ ಮಾತೆಗೆ ಶುಕ್ರವಾರ ಸಂಜೆ ಕೆಆರ್‌ಎಸ್‌ನ ಬೃಂದಾವನದಲ್ಲಿ ಅದ್ಧೂರಿ ಆರತಿ ನೆರವೇರಿತು.

ವಿವಿಧ ಸಂಘಟನೆಗಳ ವಿರೋಧದ ನಡುವೆಯೂ 2ನೇ ವರ್ಷವೂ ಕೃಷ್ಣರಾಜಸಾಗರ ಜಲಾಶಯದ ಬೃಂದಾವನ- ದೋಣಿ ವಿಹಾರ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕಾವೇರಿ ಮಾತೆಗೆ ಸ್ಥಳೀಯ 15 ಮಂದಿ ವೈದಿಕರ ತಂಡ ಮೊದಲ ಆರತಿ ಸಲ್ಲಿಸಿತು. ಸಂಜೆ 7.30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪತ್ನಿ ಸಮೇತ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ವೈದಿಕರ ತಂಡ ಧೂಪಾರತಿ, ಕರ್ಪೂರದಾರತಿ, ಪುಷ್ಪಾರ್ಚನೆ ಸಲ್ಲಿಸಿ ನಂತರ ಮಹಾಮಂಗಳಾರತಿಯನ್ನು ನಾದ, ಸಂಗೀತ ಸಂಯೋಜನೆಯೊಂದಿಗೆ ನೆರವೇರಿಸಿದರು.

ನಂತರ ವಾರಣಾಸಿಯಿಂದ ಬಂದಿದ್ದ ಓಂ ಮಿಶ್ರಾ ವೈದಿಕರ 13 ಮಂದಿಯ ತಂಡ ಗಂಗಾರತಿ ಮಾದರಿ ಕಾವೇರಿ ಮಾತೆಗೆ ಆರತಿ ನೆರವೇರಿಸಿತು. ಇನ್ನೂ 5 ದಿನ ಕಾವೇರಿ ಆರತಿ ನಡೆಯಲಿದೆ.

ಕಳೆದ ವರ್ಷ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಆರತಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದರು. ಈ ಬಾರಿ ಮುಖ್ಯಮಂತ್ರಿಯಾಗಿ ‘ಜೀವನದಿ’ ಕಾವೇರಿ ಮಾತೆಗೆ ಶಾಸ್ತ್ರೋಕ್ತವಾಗಿ ಪುಚ್ಪಾರ್ಚನೆ ನೆರವೇರಿಸಿ, ಆರತಿ ಮಾಡುವ ಮೂಲಕ‌ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಈ ವೇಳೆ ನಾದಸ್ವರ, ಗಂಟೆ‌ ಮತ್ತು ಶಂಖನಾದ‌ ಮೊಳಗಿಸಲಾಯಿತು. ನೆರೆದಿದ್ದ ಸಾರ್ವಜನಿಕರು ಕೈಯಲ್ಲಿ ಹಿಡಿದಿದ್ದ ಹೂವಿನ ಎಸಳುಗಳನ್ನು ಕಾವೇರಿ ಪ್ರತಿಮೆ ಮತ್ತು ನೀರಿಗೆ ಅರ್ಪಿಸಿದರು. ಆ ಸಂದರ್ಭದಲ್ಲಿ ಪೇಪರ್ ಬ್ಲಾಸ್ಟ್ ಯಂತ್ರದ ಮೂಲಕ ಹೂವು ಹಾಗೂ ಕಾಗದ ಚೂರುಗಳನ್ನು ಕಾವೇರಿ ಪ್ರತಿಮೆ ಮೇಲೆ ಚಿಮ್ಮಿಸಲಾಯಿತು.

ಕೆ.ಆರ್.ಎಸ್. ಬೃಂದಾವನವು ಜಗಮಗಿಸುವ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಸರ್ವಾಲಂಕಾರಗೊಂಡಿತ್ತು. ಕಣ್ಣು ಕೋರೈಸುವ ಲೇಸರ್ ಬೆಳಕು, ಹೈಬೀಮ್ ಲೈಟ್‌ ಗಳ ಬೆಳಕು ನೆರೆದಿದ್ದ ಜನರ ಮನಸೂರೆಗೊಂಡಿತು.

ಇದಕ್ಕೂ ಮೊದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಾದಸ್ವರ ಹಾಗೂ ಜನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಸ್ವಾಗತಿಸಲಾಯಿತು. ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಚಂಡೆಮದ್ದಳೆ, ಮಹಿಳಾ ನಗಾರಿ, ಜಗ್ಗಲಗಿ ಸೇರಿದಂತೆ ನಾನಾ ಜನಪದ ಕಲಾತಂಡಗಳ ಕಲಾವಿದರು ಕಲಾ ಪ್ರದರ್ಶನ ನೀಡಿ ಗಮನ ಸೆಳೆದರು.

ಇವರಿಗೆ ಸುತ್ತೂರು ಮಠದ ಡಾ.ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ। ನಿಶ್ಚಲಾನಂದನಾಥ ಸ್ವಾಮೀಜಿ, ಕಲಬುರ್ಗಿ ಜಿಲ್ಲೆ ಉರಿಲಿಂಗಪೆದ್ದೀಶ್ವರ ಮಹಾಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಚಿವ ಶಿವಲಿಂಗೇಗೌಡ, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ, ಬಿ.ಎಸ್.ಶಿವಣ್ಣ, ಕರ್ನಾಟಕ ರಾಜ್ಯ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ: ಬಿ.ಕೆ. ಶಿವಕುಮಾರ್
ಧಾರವಾಡದಲ್ಲೂ ದಸರಾ ಗೊಂಬೆ ಸಂಪ್ರದಾಯ ಶುರು