ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಹಲಗೂರು ಹೋಬಳಿಯ ತೊರೆಕಾಡನಹಳ್ಳಿಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಗಾಗಿ ವಿಶೇಷ ಪೂಜಾ ಕೈಂಕರ್ಯ ಹಾಗೂ ಹೋಮ ಹವನ ನಡೆದವು.ಬೆಳಗ್ಗೆಯಿಂದಲೇ ಜಲಮಂಡಳಿ ಆವರಣದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಶೈವಾಗಮ ವಿಶಾರಾಧ ಜ್ಞಾನ ಸ್ಕಂದ ದೀಕ್ಷಿತರ ನೇತೃತ್ವದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ರಾಜೇಶ್ವರ ದೀಕ್ಷಿತರು ಸೇರಿ 10 ಅರ್ಚಕರು ವಿಶೇಷ ಪೂಜೆ ನಡೆಸಿದರು.
ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಮೊದಲಾದ ಸಪ್ತ ನದಿಗಳ ಕಳಸ ಸ್ಥಾಪನೆ ಮಾಡಲಾಗಿತ್ತು.ಮೊದಲು ಚಂಡಿಕಾ ಹೋಮ, ಗಣಪತಿ ಪೂಜೆ, ಯಜಮಾನ ಸಂಕಲ್ಪ, ಮಹಾ ಸುದರ್ಶನ ಚಕ್ರ ಪೂಜೆ, ಸುದರ್ಶನ ಹೋಮ, ಮಹಾಚಂಡಿ ಕಳಾಸರಾಧನೆ, ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ಜರುಗಿತು.
ನಂತರ ಮಹಾಸಂಕಲ್ಪ, ಚಂಡಿ ನವ ಬ್ರಹ್ಮ ಪೂಜೆ, ದುರ್ಗಾ ಸಪ್ತ ಸತಿ ನಾರಾಯಾಣ, 13 ಅಧ್ಯಾಯ ಹೋಮಗಳು ನಡೆದು ತರುವಾಯ ಮಹಾ ಪೂರ್ಣಾವತಿ, ಮಂಗಳ ದ್ರವ್ಯ ಸಮರ್ಪಣೆ ಮಹಾಮಂಗಳಾರತಿ ನೆರವೇರಿತು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಥಳೀಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಲಮಂಡಳಿ ಅಧಿಕಾರಿಗಳು, ಜಪಾನ್ ದೇಶದ ಜನಪ್ರತಿನಿಧಿಗಳು ಹೋಮ, ಹವನ, ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು.
ವಿದ್ಯುತ್ ಅಲಂಕಾರ:ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮದುವಣಗಿತ್ತಿಯಂತೆ ಬೆಂಗಳೂರು ಜಲಮಂಡಳಿ ಆವರಣ ಸಿಂಗಾರಗೊಂಡಿತ್ತು. ರಾತ್ರಿ ವಿದ್ಯುತ್ ದೀಪಾಲಂಕಾರ, ಹೂವು, ತಳಿರು ತೋರಣಗಳ ಅಲಂಕಾರ ಮಾಡಲಾಗಿತ್ತು.
ತೊರೆಕಾಡನಹಳ್ಳಿ ಹಲವಡೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದವು. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಜಪಾನ್ ದೇಶದ ಪ್ರತಿನಿಧಿಗಳಿಗೆ ಅಭಿನಂದನೆಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆಯಲ್ಲಿ ಪಾಲ್ಗೊಂಡಿದ್ದ ಜಪಾನ್ ದೇಶದ ಪ್ರತಿನಿಧಿಗಳನ್ನು ಸಿಎಂ, ಡಿಸಿಎಂ ಮೈಸೂರು ಪೇಟಾ ತೊಡಿಸಿ ಅಭಿನಂದಿಸಿದರು.
ಜಪಾನ್ ದೇಶದ ಆರ್ಥಿಕ ಮಂತ್ರಿಗಳಾದ ಕೊಕೋಕೊ ಚೀಕೋ ಜೀಕಾ ಕಂಪನಿಯ ಮುಖ್ಯಸ್ಥರಾಗಿದ್ದು, ಈ ವೇಳೆ ಮೈಸೂರು ಪೇಟಾದ ಬಗ್ಗೆ ಸಿದ್ದರಾಮಯ್ಯ ಮಾಹಿತಿ ನೀಡಿದರು. ಜಪಾನ್ ದೇಶದ ಮಂತ್ರಿಗಳು ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರಗಳು ಎಂದು ಹೇಳುವುದರ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು. ಸಭಿಕರ ಶಿಳ್ಳೆ, ಚಪ್ಪಾಳೆ ನೀಡಿ ಗೌರವಿಸಿದರು.ಮೂರನೇ ಬಾರಿ ಹೊಡೆದ ಕಾಯಿ:
ಕಾರ್ಯಕ್ರಮ ಉದ್ಘಾಟಿಸಿದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೆಂಗಿನ ಕಾಯಿ ಈಡುಗಾಯಿ ಹೊಡೆಯಲು ಮುಂದಾದರು. ಎರಡು ಬಾರಿ ಕಾಯಿ ಹೊಡೆಯಲ್ಲಿಲ್ಲ. ಮೂರನೇ ಬಾರಿ ಕೈ ಮುಗಿದು ಹೊಡೆದ ತಕ್ಷಣವೇ ಕಾಯಿ ನುಚ್ಚು ನೂರಾಯಿತು.