ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ 2024ರ ಮೇ ತಿಂಗಳಿಂದ ಕುಡಿಯಲು ಕಾವೇರಿ ನೀರು ಪೂರೈಸಲಾಗುವುದು ಎಂದು ಜಲಮಂಡಳಿ ತಿಳಿಸಿದೆ.ಕಾವೇರಿ ನೀರು ಸರಬರಾಜು 5 ನೇ ಹಂತದ ಯೋಜನೆಯಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಜೈಕಾ ಅನುದಾನದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮಾರ್ಚ್ ವೇಳೆಗೆ ಕಾಮಗಾರಿ ಸಂಪೂರ್ಣವಾಗಿ ಅಂತ್ಯಗೊಳಲಿದೆ. ಏಪ್ರಿಲ್‌ನಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆಗೆ ಚಾಲನೆ ನೀಡಲಾಗುವುದು. ನಂತರ ಮೇ ತಿಂಗಳಿಂದ ಅಧಿಕೃತವಾಗಿ ನೀರು ಪೂರೈಕೆಯಾಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
₹5550 ಕೋಟಿ ವೆಚ್ಚ:775 ದಶಲಕ್ಷ ಲೀಟರ್ ನೀರು ಒದಗಿಸುವ ಯೋಜನೆ ಇದಾಗಿದೆ. 225 ಚ.ಕಿ.ಮೀ ವ್ಯಾಪ್ತಿಯಲ್ಲಿ ಇರುವ 110 ಹಳ್ಳಿಗಳ 50 ಲಕ್ಷ ನಾಗರಿಕರಿಗೆ ಶುದ್ಧ ಕಾವೇರಿ ನೀರು ಪೂರೈಸಲಾಗುವುದು. ಇದರಿಂದ ಈ ಪ್ರದೇಶದ ನಾಗರಿಕರ ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಸುಧಾರಿಸಲಿದೆ. ಈ ಯೋಜನೆಗೆ ಅಂದಾಜು 5550 ಕೋಟಿ ರು. ವೆಚ್ಚವಾಗಲಿದೆ. ಜೈಕಾ ಸಂಸ್ಥೆಯ ಆರ್ಥಿಕ ನೆರವಿನಿಂದ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯ ಕಾಮಗಾರಿಯನ್ನು 10 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ.
ತೊರೆಕಾಡನಹಳ್ಳಿಯಲ್ಲಿ (ಟಿಕೆಹಳ್ಳಿ) 775 ದಶಲಕ್ಷ ಲೀಟರ್ ನೀರನ್ನು ಶುದ್ಧೀಕರಿಸುವ ಜಲಸಂಗ್ರಹಗಾರ ಮತ್ತು ಜಲರೇಚಕ ಯಂತ್ರಾಗಾರ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ. ಅಲ್ಲದೆ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಜಲಸಂಗ್ರಾಹಗಾರ ಮತ್ತ ಜಲರೇಚಕ ಯಂತ್ರಗಾರ ವಿನ್ಯಾಸ ಹಾಗೂ ನಿರ್ಮಾಣ ಕಾಮಗಾರಿ, ಟಿ.ಕೆಹಳ್ಳಿಯಿಂದ ಹಾರೋಹಳ್ಳಿವರೆಗೆ 3 ಸಾವಿರ ಮಿ.ಮೀ. ವ್ಯಾಸದ ಕೊಳವೆ ಮಾರ್ಗದ ಕಾಮಗಾರಿ, ಬೆಂಗಳೂರು ನಗರದ ಪೂರ್ವ ಹಾಗೂ ಪಶ್ಚಿಮ ಭಾಗದಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಹಾಗೂ ಜಲ ಸಂಗ್ರಹಾರಗಳ ಕಾಮಗಾರಿ ನಡೆಯುತ್ತಿವೆ. ಮಾರ್ಚ್ ವೇಳೆಗೆ ಅಂತ್ಯಗೊಳ್ಳಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.=