ಕನ್ನಡ ಭಾಷೆಗೆ ಕವಿ ರನ್ನ ಬಹುದೊಡ್ಡ ಸಂಪತ್ತು: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork | Published : Feb 23, 2025 12:31 AM

ಸಾರಾಂಶ

ಕನ್ನಡ ಭಾಷೆ, ಸಾಹಿತ್ಯ ಪರಂಪರೆ ಇರುವವರೆಗೆ ರನ್ನನ ವಿಚಾರಧಾರೆ ಹಾಗೂ ರನ್ನನ ಮಹಾಕಾವ್ಯಗಳು ಇರಲಿವೆ ಎಂದು ಪ್ರವಾಸೋಧ್ಯಮ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕನ್ನಡ ಭಾಷೆ, ಸಾಹಿತ್ಯ ಪರಂಪರೆ ಇರುವವರೆಗೆ ರನ್ನನ ವಿಚಾರಧಾರೆ ಹಾಗೂ ರನ್ನನ ಮಹಾಕಾವ್ಯಗಳು ಇರಲಿವೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರನ್ನ ಬೆಳಗಲಿಯಲ್ಲಿ ಶನಿವಾರ ರಾತ್ರಿ ನಡೆದ ರನ್ನ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕವಿರತ್ನರಲ್ಲಿ ಒಬ್ಬರಾದ ರನ್ನ ಕನ್ನಡ ಭಾಷೆಗೆ ಬಹುದೊಡ್ಡ ಸಂಪತ್ತಾಗಿದ್ದರು ಎಂದು ಬಣ್ಣಿಸಿದರು. 949 ಹಾಗೂ 1020ರ ಅವಧಿಯಲ್ಲಿ ರನ್ನನ ಕಾಲದಲ್ಲಿ ರಚಿಸಿದ ಮಹಾಕಾವ್ಯಗಳನ್ನು ಗಮನಿಸಿದರೆ ರನ್ನನ ಗಧಾಯುದ್ಧದ ರಚನೆ ಮತ್ತು ಅದರಲ್ಲಿನ ಸಾಹಿತ್ಯದ ಅನುಭಾವ ಗಮನಿಸಿದರೆ ಕನ್ನಡದ ಶ್ರೀಮಂತಿಕೆ ಅಭಿವ್ಯಕ್ತವಾಗುತ್ತದೆ. ರನ್ನ, ಪಂಪ, ಪೊನ್ನ ಮೊದಲಾದ ಕವಿಗಳ ಹಳೆಗನ್ನಡ ಸಾಹಿತ್ಯ ಯಾಕೆ ಇಂದಿಗೂ ಜೀವಂತಿಕೆ ಉಳಿಸಿಕೊಂಡಿದೆ ಎಂದರೆ ಅದಕ್ಕೆ ಇರುವ ಶಕ್ತಿ, ಕನ್ನಡ ಭಾಷೆಯಲ್ಲಿನ ಗಟ್ಟಿತನ ಕಾರಣ ಎಂದರು.

ರನ್ನ ಹಾಗೂ ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಕಾರಣವಾಗಿದ್ದು ಗದಗ ಜಿಲ್ಲೆಯ ಲಕ್ಕುಂಡಿಯ ಅತ್ತಿಮಬ್ಬೆ. ಅವರು ನೀಡಿದ ಪ್ರೇರಣೆ ರನ್ನನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತಲ್ಲದೆ, ವಾಗ್ದೇವಿ ಅನುಗ್ರಹ ರನ್ನನ ಶಬ್ಧ ಭಂಡಾರದಿಂದ ಇಂಥ ಚಾರಿತ್ರಿಕ ಸಾಹಿತ್ಯ ನೀಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ರನ್ನನ ಸಾಹಿತ್ಯ ಪರಂಪರೆಯ ಭಾಗವಾಗಿ ಬಸವಾದಿ ಶರಣರ ಸಾಹಿತ್ಯ ಹಾಗೂ ಇತ್ತೀಚಿನ ಆಧುನಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಗಣ್ಯರ ಸ್ಮರಣೆ ಅಗತ್ಯವಾಗಿದೆ. ಅದರಲ್ಲೂ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ 20 ಜನರಲ್ಲಿ 8 ಜನ ಕನ್ನಡಿಗರಿರುವುದು ಕನ್ನಡ ಸಾಹಿತ್ಯದ ಬಹುದೊಡ್ಡ ಹಿರಿಮೆ ಎಂದು ಹೇಳಿದರು.

ಸಚಿವ ತಿಮ್ಮಾಪೂರಗೆ ಅಭಿನಂದನೆ: ಮೈಸೂರು ದಸರಾ ಮೀರಿಸುವಂತೆ ಮುಧೋಳದಲ್ಲಿ ರನ್ನ ವೈಭವ ನಡೆಸುತ್ತಿರುವ ಕ್ಷೇತ್ರದ ಶಾಸಕ, ಸಚಿವ ತಿಮ್ಮಾಪೂರ ಅವರನ್ನು ಅಭಿನಂದಿಸಿದ ಸಚಿವ ಎಚ್.ಕೆ. ಪಾಟೀಲ ಇದು ಸಾಮಾನ್ಯ ಕೆಲಸವಲ್ಲ ಇದಕ್ಕೆ ಸಚಿವರ ಇಚ್ಛಾಶಕ್ತಿ ಬಹುದೊಡ್ಡದು ಎಂದರು.

ಸಚಿವ ಆರ್‌.ಬಿ. ತಿಮ್ಮಾಪೂರ ಮಾತನಾಡಿ, ರನ್ನ ವೈಭವ ಮತ್ತೆ ಆರಂಭವಾಗಲು ಹಾಗೂ ಹಣಕಾಸಿನ ನೆರವು ನೀಡಿದ ಮುಖ್ಯಮಂತ್ರಿ ಹಾಗೂ ಪ್ರವಾಸೋಧ್ಯಮ ಸಚಿವರನ್ನು ಅಭಿನಂದಿಸಿದರು.

ಶಾಸಕರಾದ ಜೆ.ಟಿ.ಪಾಟೀಲ, ಜಗದೀಶ ಎಸ್.ಗುಡಗುಂಟಿ, ವಿಜಯಾನಂದ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ರನ್ನ ಬೆಳಗಲಿ ಪಟ್ಟಣ ಪಂಚಾಯತಿ ಅಧ್ಯಕ್ಷರು ರೂಪಾ ಸದಾಶಿವ ಹೊಸಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಉಪಸ್ಥಿತರಿದ್ದರು.

Share this article