ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳಾ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಡಿ ಕೆರಗೋಡು ಗ್ರಾಮದಲ್ಲಿ ಶಿಬಿರ ಹಮ್ಮಿಕೊಂಡಿದ್ದ ಸಮಯದಲ್ಲಿ ಶಾಸಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳಿಂದ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ ಹಾಗೂ ಕಲ್ಯಾಣಿ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಿ ಗಿಡ-ಮರಗಳನ್ನು ನೆಟ್ಟು ಸೌಂದರ್ಯವನ್ನು ಹೆಚ್ಚಿಸಿದ್ದಾರೆ.
ಮೂರು ದಿನ ಸ್ವಚ್ಛತಾ ಕಾರ್ಯ:೨೦೦೯- ೧೦ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ನಿರ್ವಹಣೆ ಕೊರತೆಯಿಂದ ಕೆಲವೇ ವರ್ಷಗಳಲ್ಲಿ ಕಲ್ಯಾಣಿ ಮತ್ತೆ ಹಾಳಾಗಿತ್ತು. ಕಲ್ಯಾಣಿಯೊಳಗೆ ಎಲೆಗಳು ಉದುರಿ, ಗಿಡ- ಮರಗಳು ಬೆಳೆದುಕೊಂಡು ನೀರು ಕೂಡ ಬಳಕೆಗೆ ಯೋಗ್ಯವಿಲ್ಲದಂತಾಗಿತ್ತು. ವಿಷಜಂತುಗಳ ಆವಾಸಸ್ಥಳದಂತೆ ಕಲ್ಯಾಣಿ ಕಂಡುಬರುತ್ತಿತ್ತು.
ದೇವಾಲಯದ ಸುತ್ತ ಹಸಿರ ಸಿರಿ:
ಈ ಕಲ್ಯಾಣಿ ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಸೇರಿದ್ದಾಗಿದೆ. ಕಲ್ಯಾಣಿಗೆ ಕೆರೆಯಿಂದ ನೀರು ಹರಿದುಬರುವಂತೆ ವ್ಯವಸ್ಥೆ ಮಾಡಲಾಗಿದೆ. ಕೆರೆ ತುಂಬಿದಾಗಲೆಲ್ಲಾ ಕಲ್ಯಾಣಿಯೂ ತುಂಬಿರುತ್ತದೆ. ಸದಾಕಾಲ ಕಲ್ಯಾಣಿಯೊಳಗೆ ನೀರು ಇದ್ದಂತೆಯೇ ಇರುತ್ತದೆ. ಕಲ್ಯಾಣಿ ದೇವಾಲಯಕ್ಕೆ ಸೇರಿದ್ದರೂ ಇದರಲ್ಲಿರುವ ನೀರನ್ನು ದೇವರ ಅಭಿಷೇಕ ಸೇರಿದಂತೆ ಇತರೆ ಯಾವುದಕ್ಕೂ ಬಳಸುವುದಿಲ್ಲ.
ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದ ಕಲ್ಯಾಣಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಹೋಗುವಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರಲ್ಲಿ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ. ೨೦೦೯- ೧೦ರಲ್ಲೇ ನರೇಗಾ ಯೋಜನೆಯಡಿ ಕಲ್ಯಾಣಿ ಪುನಶ್ಚೇತನಗೊಳಿಸಿದ್ದರೂ ನಿರ್ವಹಣೆಯಿಲ್ಲದೆ ಕೆಲವೇ ವರ್ಷಗಳಲ್ಲಿ ಹಾಳಾಗಿತ್ತು. ಈಗ ಮಹಿಳಾ ಸರ್ಕಾರಿ ಕಾಲೇಜಿನ ಎನ್‌ಎಸ್ಎಸ್ ತಂಡದವರಿಂದ ಕಲ್ಯಾಣಿಗೆ ಕಾಯಕಲ್ಪ ನೀಡಲಾಗಿದೆ. ಈಗಲೂ ಸರಿಯಾದ ನಿರ್ವಹಣೆ ಮಾಡದಿದ್ದರೆ ಕಲ್ಯಾಣಿ ಮತ್ತೆ ಪಾಳು ಬೀಳುವುದು ನಿಶ್ಚಿತ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮಸ್ಥರು ಮತ್ತೆ ಅವಕಾಶ ನೀಡಬಾರದು. ಕಲ್ಯಾಣಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಹೋಗುವ ಮನಸ್ಥಿತಿಯನ್ನು ಎಲ್ಲರೂ ಪ್ರದರ್ಶಿಸಿದಾಗ ಇಂತಹ ಶ್ರಮದಾನಗಳು ಸಾರ್ಥಕತೆಯನ್ನು ಪಡೆದುಕೊಳ್ಳುತ್ತವೆ.
ಪಂಚಾಯಿತಿಯಿಂದ ಹದಿನೈದು ವರ್ಷಗಳ ಹಿಂದೆ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಲಾಗಿತ್ತು. ಈಗ ವಿದ್ಯಾರ್ಥಿಗಳಿಂದ ಶ್ರಮದಾನ ನಡೆಸಿ ಸ್ವಚ್ಛಗೊಳಿಸಲಾಗಿದೆ. ಮುಂದೆ ದೇವಸ್ಥಾನದ ಆಡಳಿತ ಮಂಡಳಿ, ಗ್ರಾಮಸ್ಥರಿಗೆ ಸ್ವಚ್ಛತೆ ಕಾಯ್ದುಕೊಳ್ಳುವಂತೆ ತಿಳಿಸಿದ್ದೇವೆ. ಶಾಸಕರೂ ಕಲ್ಯಾಣಿ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ.
----------------------------
- ನವೀನ್‌ಕುಮಾರ್, ಅಧ್ಯಕ್ಷರು, ಕೆರಗೋಡು ಗ್ರಾಪಂ