ಕನ್ನಡಪ್ರಭ ವಾರ್ತೆ ಗೋಕಾಕ
ಧರ್ಮವನ್ನು ಮನೆ ಬಾಗಿಲಿಗೆ ತರದೆ ಮನದ ಬಾಗಿಲಿಗೆ ತಂದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಅಡಿವಿಸಿದ್ದೇಶ್ವರ ಮಠ ಅಂಕಲಗಿ-ಕುಂದರಗಿಯ ಅಮರಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.ನಗರದಲ್ಲಿ ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಮಹಾದೇವ ಅಜ್ಜನವರ 86ನೇ ಜಯಂತಿ ಮತ್ತು 20ನೇ ಕನ್ನಡ ಜಾತ್ರೆ ಸಮಾರಂಭದಲ್ಲಿ ಕಾಯಕಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದಲ್ಲಿ ನೀಡುವ ಗೌರವಗಳು, ಪ್ರಶಸ್ತಿಗಳು ಮನುಷ್ಯನ ಜವಾಬ್ದಾರಿಗಳನ್ನು ಹೆಚ್ಚು ಮಾಡುತ್ತವೆ. ಧರ್ಮ ಈ ಜಗತ್ತಿನಲ್ಲಿ ಅಮೃತವಾಗಿದೆ. ಜಾತಿಯನ್ನು ಮೀರಿ, ನೀತಿ ಮತ್ತು ಪ್ರೀತಿಯಿಂದ ಬದುಕುವುದುದೇ ಧರ್ಮ ಇಂದು ಮನುಷ್ಯ ಇದನ್ನು ಮರೆತ್ತಿದ್ದಾನೆ. ಸಮಾಜದಲ್ಲಿ ಮನುಷ್ಯ, ಮನುಷ್ಯನ ನಡುವೆ ಜಗಳಗಳು ನಡೆಯುತ್ತಿವೆ. ಇದರಿಂದ ಸಮಾಜದಲ್ಲಿ ಕುಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಸಮೃದ್ಧಿ ಸಮಾಜ ನಿರ್ಮಿಸುವಲ್ಲಿ ಇಂತಹ ವೈಚಾರಿಕ ಕಾರ್ಯಗಳು ನಡಿಯಬೇಕು ಇದನ್ನು ಕಪರಟ್ಟಿ ಮಠ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇಂದು ಸಮಾಜದಲ್ಲಿ ಜನರ ಮನಸ್ಸುಗಳು ವಿಷವಾಗುತ್ತಿವೆ ಮಾನವನಲ್ಲಿ ನೋಡುವ ಭಾವ ಇದ್ದಾಗ ದೇವರು ಕಾಣಲು ಸಾಧ್ಯ. ಬಸವಾದಿ ಶರಣರು ಇದನ್ನು ನಾಡಿಗೆ ತೋರಸಿದ್ದಾರೆ. ನಮಗೆ ಕೆಟ್ಟದನ್ನು ಮಾಡಿದವರಿಗೂ ಒಳ್ಳೆಯದನ್ನು ಬಯಸಬೇಕು ಅಂದಾಗ ನಾವು ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ ಆ ದಿಸೆಯಲ್ಲಿ ನಾವೆಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.ಬೆಂಗಳೂರಿನ ಬಾಲ ವಾಗ್ಮಿ ಕುಮಾರಿ ಹಾರಿಕ ಮಂಜುನಾಥ್ ಅವರು ಕನ್ನಡ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ನಾಡಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಗನೀಯ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಸತ್ಕರಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿಜಯಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಅವಧೂತ ಮಹಾರಾಜರು ಆರ್ಶೀರ್ವಚನ ನೀಡಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಸವರಾಜ ಶ್ರೀಗಳು, ಡಾ.ರಾಜೇಂದ್ರ ಸಣ್ಣಕ್ಕಿ, ಡಾ.ವಿಜಯ ಜಂಬಗಿ, ಸಾದಿಕ ಹಲ್ಯಾಳ, ಕೆಂಪಣ್ಣ ಚೌಕಾಶಿ, ಲಕ್ಷ್ಮಣ ಯಮಕನಮರಡಿ, ಮಹಾಲಿಂಗ ಹೊಸಕೋಟೆ, ಆನಂದ ಸೋರಗಾವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.