ಹರಪನಹಳ್ಳಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಗ್ರಾಪಂ ಅಭಿವೃದ್ದಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಂಗಳವಾರ ಪಟ್ಟಣದ ತಾಪಂನ ರಾಜೀವಗಾಂಧಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡರೆ ಖಾಸಗಿ ಕೊಳವೆ ಬಾವಿ ಮಾಲೀಕರ ಜತೆ ಒಪ್ಪಂದ ಮಾಡಿ ಬಾಡಿಗೆ ಆಧಾರದಲ್ಲಿ ನೀರು ಪಡೆಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಕಳೆದ 2 ತಿಂಗಳ ಹಿಂದೆ ಜಿಲ್ಲಾಧಿಕಾರಿಯವರು ಹಾಗೂ ನಾನು ಸಹ ಸಭೆ ನಡೆಸಿ ಸೂಚನೆ ಕೊಟ್ಟಿದ್ದೇವೆ. ಆದರೂ ನೀವು ಈವರೆಗೂ ಖಾಸಗಿಯನವರ ಜತೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅವರು ಪಿಡಿಒಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಿಮಗೆ ಕೆಲಸ ಮಾಡಲು ಆಸಕ್ತಿ ಇದೆಯೊ, ಇಲ್ಲವೊ ಹೀಗಾದರೆ ನಾನು ಏಕೆ ಮೀಟಿಂಗ್ ಮಾಡಬೇಕು ಎಂದು ಕಾರವಾಗಿ ಪಿಡಿಒಗಳಿಗೆ ಶಾಸಕರು ಪ್ರಶ್ನಿಸಿದರು.ತೌಡೂರು, ನಿಟ್ಟೂರು, ಅಲಗಿಲವಾಡ, ಚಿರಸ್ಥಹಳ್ಳಿ, ಶ್ರೀಕಂಠಪುರ, ನಂದ್ಯಾಲ ಕ್ಯಾಂಪ್, ನಾಗರಕೊಂಡ, ಕುಣೇಮಾದಿಹಳ್ಳಿ, ಜಂಬುಲಿಂಗನಹಳ್ಳಿ, ಮಾಡ್ಲಗೇರಿ ತಾಂಡಾ, ಎನ್. ಶೀರನಹಳ್ಳಿ, ಕಣವಿಹಳ್ಳಿ, ಕಡೇಕಲ್ ತಾಂಡಾ ಮುಂತಾದ ಗ್ರಾಮಗಳಲ್ಲಿ ವಿವಿಧ ಸಮಸ್ಯೆಗಳಿಂದ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಪಿಡಿಒಗಳಿಂದ ಮಾಹಿತಿ ಪಡೆದ ಶಾಸಕರು ಕೂಡಲೇ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಿ ಎಂದು ಸೂಚಿಸಿದರು.
ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಮಾತನಾಡಿ, ಖಾಸಗಿಯವರ ಬೋರ್‌ವೆಲ್‌ನಿಂದ ಗ್ರಾಮಕ್ಕೆ ಕುಡಿಯುವ ನೀರು ಪಡೆದರೆ ನಮಗೆ ಮಾಹಿತಿ ಕೊಡಿ ಎಂದರು. ಅದಕ್ಕೆ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಿರಣನಾಯ್ಕ ಧ್ವನಿಗೂಡಿಸಿದರು.ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲು ಗ್ರಾಪಂ ಮಟ್ಟದಲ್ಲಿ ಕೋಟೇಷನ್ ತರಿಸಿಕೊಂಡು ಅಂತಿಮಗೊಳಿಸಿ ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ ವಹಿಸಿ ಎಂದು ತಹಸೀಲ್ದಾರ್ ಪಿಡಿಒಗಳಿಗೆ ಸೂಚಿಸಿದರು.
7 ಕೋವಿಡ್ ಪ್ರಕರಣಗಳು ಪತ್ತೆ: ತಾಲೂಕಿನಲ್ಲಿ ಈವರೆಗೂ 7 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸ್‌ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ದೂರಿದೆ. ಸರಿಪಡಿಸಿ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಂಕರನಾಯ್ಕ ಅವರಿಗೆ ಶಾಸಕರು ಸೂಚಿಸಿದರು.ಮೇವು ಬ್ಯಾಂಕ್: ತಾಲೂಕಿನಲ್ಲಿ ಫೆಬ್ರವರಿ ಅಂತಿಮಕ್ಕೆ ಎರಡು ಮೇವು ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಲು ಕ್ರಮ ವಹಿಸುತ್ತೇವೆ ಎಂದು ಪಶುಸಂಗೋಪನಾ ಸಹಾಯಕ ನಿರ್ದೇಶಕ ಶಿವಕುಮಾರ ಮಾಹಿತಿ ನೀಡಿದರು.
ತಾಲೂಕಿನ ಕೆಲವೊಂದು ಶಾಲೆಗಳಲ್ಲಿ ನರೇಗಾದಡಿ ಶೌಚಾಲಯ, ಬಿಸಿಯೂಟ ಕೊಠಡಿ ಹಾಗೂ ಕಾಂಪೊಂಡ್ ನಿರ್ಮಾಣ ಕಾಮಗಾರಿ ಆರಂಭವಾಗದಿರುವ ಕುರಿತು ಪಿಡಿಒಗಳಿಗೆ ತಿಳಿಸಿ ಬೇಗ ಆರಂಭಿಸಿ ಎಂದು ಸೂಚಿಸಿದರು.ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಆರ್‌ಎಫ್‌ಒ ಮಲ್ಲಪ್ಪ, ಎಇಇ ಕಿರಣ್ ನಾಯ್ಕ, ಸಹಾಯಕ ಕೃಷಿ ನಿರ್ದೆಶಕ ಉಮೇಶ, ತೋಟಗಾರಿಕೆಯ ಜಯಸಿಂಹ, ಸಮಾಜ ಕಲ್ಯಾಣ ಇಲಾಖೆಯ ಎಡಿ ರೇಣುಕಾದೇವಿ, ಬಿಸಿಎಂನ ವಿಜಯಲಕ್ಷ್ಮಿ, ಬೆಸ್ಕಾಂನ ಎಇಇ ವಿರುಪಾಕ್ಷಪ್ಪ, ನರೇಗಾ ಎಡಿ ಸೋಮಶೇಖರ, ಬಿಆರ್‌ಸಿ ಹೊನ್ನತ್ತೆಪ್ಪ ಮತ್ತಿತರರು ಇದ್ದರು.