ಉಡಾನ್‌ ವಿಮಾನ ಸೇವೆ ಪುನಾರಂಭಕ್ಕೆ ಕೆಸಿಸಿಐ ಒತ್ತಾಯ

KannadaprabhaNewsNetwork |  
Published : Aug 13, 2026, 02:00 AM IST
ಫೋಟೋ ಆ.೧೧ ವೈ.ಎಲ್.ಪಿ. ೦೪ | Kannada Prabha

ಸಾರಾಂಶ

ಉಡಾನ್‌ ಯೋಜನೆಯಡಿ ಈ ಹಿಂದೆ ಹುಬ್ಬಳ್ಳಿಯಿಂದ ಹಲವು ಪ್ರಾದೇಶಿಕ ವಿಮಾನ ಮಾರ್ಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದವು. ಪ್ರಸ್ತುತ ಸೇವೆಗಳು ಸ್ಥಗಿತಗೊಂಡಿರುವುದರಿಂದ ಉದ್ಯಮಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಹುಬ್ಬಳ್ಳಿ:

ಉತ್ತರ ಕರ್ನಾಟಕದ ವಾಣಿಜ್ಯ, ಕೈಗಾರಿಕೆ, ಶಿಕ್ಷಣ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಸಂಪರ್ಕ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಡಾನ್‌ ಯೋಜನೆಯಡಿ ಸ್ಥಗಿತಗೊಂಡಿರುವ ಪ್ರಾದೇಶಿಕ ವಿಮಾನ ಸೇವೆಗಳನ್ನು ಪುನರಾರಂಭಿಸುವಂತೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಸಲ್ಲಿಸಿ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಉಡಾನ್‌ ಯೋಜನೆಯಡಿ ಆದ್ಯತೆಯಿಂದ ಪರಿಗಣಿಸುವಂತೆ ಕೋರಲಾಗಿದೆ.

ಉಡಾನ್‌ ಯೋಜನೆಯಡಿ ಈ ಹಿಂದೆ ಹುಬ್ಬಳ್ಳಿಯಿಂದ ಹಲವು ಪ್ರಾದೇಶಿಕ ವಿಮಾನ ಮಾರ್ಗಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದವು. ಪ್ರಸ್ತುತ ಸೇವೆಗಳು ಸ್ಥಗಿತಗೊಂಡಿರುವುದರಿಂದ ಉದ್ಯಮಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಪ್ರಮುಖ ಕೈಗಾರಿಕಾ, ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿದ್ದು, ಸಾವಿರಾರು ಎಂಎಸ್‌ಎಂಇ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಐಐಟಿ ಧಾರವಾಡ, ಐಐಐಟಿ ಧಾರವಾಡ ಹಾಗೂ ಕೆಎಂಸಿಆರ್‌ಐ ಸೇರಿದಂತೆ ಪ್ರಮುಖ ಸಂಸ್ಥೆಗಳಿವೆ. ಹೀಗಾಗಿ ವಿಶ್ವಾಸಾರ್ಹ ವಿಮಾನ ಸಂಪರ್ಕ ಆರ್ಥಿಕ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.

ಪರಿಷ್ಕೃತ ಉಡಾನ್‌ ಯೋಜನೆಯಡಿ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಮುಂದಿನ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಆದ್ಯತೆಯಿಂದ ಸೇರಿಸಿ, ಹೊಸ ಪ್ರಾದೇಶಿಕ ಮಾರ್ಗ ಆರಂಭಿಸಬೇಕು. ಹುಬ್ಬಳ್ಳಿಯಿಂದ ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ, ಪುಣೆ, ಗೋವಾ, ತಿರುಪತಿ, ಅಹಮದಾಬಾದ್, ವಾರಾಣಸಿ ಹಾಗೂ ಅಯೋಧ್ಯೆಗೆ ನೇರ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದೆ.

ಉತ್ತರ ಕರ್ನಾಟಕದ ಕೈಗಾರಿಕಾ-ವಾಣಿಜ್ಯ ಬೆಳವಣಿಗೆಗೆ ಉತ್ತಮ ವಿಮಾನ ಸಂಪರ್ಕ ಅನಿವಾರ್ಯ. ಉಡಾನ್‌ ಯೋಜನೆಯಡಿ ಸೇವೆ ಪುನರಾರಂಭಿಸುವ ಮೂಲಕ ಆರ್ಥಿಕ ಅಭಿವೃದ್ಧಿಗೆ ವೇಗ ನೀಡಬೇಕು ಎಂದು ಕೆಸಿಸಿಐ ಗೌರವ ಕಾರ್ಯದರ್ಶಿ ಉದಯ ರೇವಣಕರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆವಿಮೆ ಪರಿಹಾರಕ್ಕಾಗಿ ಗುತ್ತಲದಲ್ಲಿ ಧರಣಿ ಕುಳಿತ ರೈತರು
ತುರ್ತಾಗಿ ಕಲಾಭವನ ತೆರೆಯುವಂತೆ ಕ್ರಮ: ಬೆಲ್ಲದ