ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಅಧಿಕಾರಿಗಳ ಬೆಂಬಲ: ಮುತಾಲಿಕ್

KannadaprabhaNewsNetwork |  
Published : Aug 13, 2026, 02:00 AM IST
ಪ್ರಮೋದ್‌ ಮುತಾಲಿಕ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಬಾಂಗ್ಲಾದೇಶ ಮೂಲದ ಅಕ್ರಮ ವಾಸಿಗಳನ್ನು ಗುರುತಿಸಿ ಹೊರಹಾಕಲು ರಾಜ್ಯ ಗೃಹ ಇಲಾಖೆ ಕೈಗೊಂಡಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಕೆಲವು ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಬಾಂಗ್ಲಾ ಅಕ್ರಮ ವಾಸಿಗಳೇ ಇಲ್ಲ ಎಂದು ಉತ್ತರಿಸಿದ್ದಾರೆ.

ಹುಬ್ಬಳ್ಳಿ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಹಿರಿಯ ಶ್ರೇಣಿಯ ಅಧಿಕಾರಿಗಳೇ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಾಂಗ್ಲಾದೇಶ ಮೂಲದ ಅಕ್ರಮ ವಾಸಿಗಳನ್ನು ಗುರುತಿಸಿ ಹೊರಹಾಕಲು ರಾಜ್ಯ ಗೃಹ ಇಲಾಖೆ ಕೈಗೊಂಡಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಕೆಲವು ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಬಾಂಗ್ಲಾ ಅಕ್ರಮ ವಾಸಿಗಳೇ ಇಲ್ಲ ಎಂದು ಉತ್ತರಿಸಿದ್ದಾರೆ. ಹಾಗಿದ್ದರೆ ಇದೀಗ ಪೊಲೀಸರು ಅಕ್ರಮ ವಾಸಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುತ್ತಿರುವುದು ಹೇಗೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.

ಮೈಸೂರು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಂದ ಅಕ್ರಮ ವಾಸಿಗಳಿಲ್ಲ ಎಂಬ ಉತ್ತರ ಬಂದಿದೆ. ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಬಾಂಗ್ಲಾ ಮಾರುಕಟ್ಟೆ, ಬೆಂಗಳೂರಿನಲ್ಲಿ ಬಾಂಗ್ಲಾ ಕ್ಯಾಂಟೀನ್‌ಗಳಿವೆ. ಅಕ್ರಮ ವಾಸಿಗಳು ಟೆಂಡರ್‌ಗಳಿಗೆ ಅರ್ಜಿ ಸಲ್ಲಿಸುವುದು, ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗುವುದು ಹಾಗೂ ಮಾದಕ ವಸ್ತುಗಳ ಜಾಲದಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಪುಷ್ಕರಣಿ ಅತಿಕ್ರಮಣ ಖಂಡನೀಯ:ಹಳೇ ಹುಬ್ಬಳ್ಳಿಯ ಭವಾನಿಶಂಕರ ದೇವಸ್ಥಾನದ ಐತಿಹಾಸಿಕ ಪುಷ್ಕರಣಿ ಅತಿಕ್ರಮಿಸಿ ರಸ್ತೆ ನಿರ್ಮಿಸಿರುವುದು ಖಂಡನೀಯ. ಈ ಕುರಿತು ಎಲ್ಲ ಹಿಂದೂ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸುತ್ತಿವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಚಾಲುಕ್ಯರ ಆಡಳಿತದ ಕುರುಹು ಹೊಂದಿರುವ ಪುಷ್ಕರಣಿಯನ್ನೇ ಅತಿಕ್ರಮಿಸಿರುವುದು ದುರದೃಷ್ಟಕರ. ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳ ಸಂರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.2017ರಲ್ಲಿ ಹಿಂದೂ ಸಂಘಟನೆಗಳ ವೇದಿಕೆಯೊಂದು ಆರ್‌ಟಿಐ ಮೂಲಕ ಮಾಹಿತಿ ಕೇಳಿದಾಗ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಪುಷ್ಕರಣಿಯ ಉಲ್ಲೇಖವಿತ್ತು. ಆದರೆ, ಇದೀಗ ಪುರಾತತ್ವ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳು ಯಾವುದೇ ದಾಖಲೆಗಳಿಲ್ಲ ಎಂದು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಪುಷ್ಕರಣಿ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ತಂತ್ರಜ್ಞಾನ ಆಧಾರಿತ ಸರ್ವೇ ನಡೆಸಬೇಕು ಎಂದು ಒತ್ತಾಯಿಸಿದರು.

ಸಂರಕ್ಷಿತ ಸ್ಮಾರಕಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮಾಂಸದಂಗಡಿ, ಬಾರ್ ಸೇರಿದಂತೆ ಹಲವು ಅಕ್ರಮ ಕಟ್ಟಡಗಳಿದ್ದು, ಈ ಕೂಡಲೇ ಅವುಗಳನ್ನು ತೆರವುಗೊಳಿಸಿ ತಂತಿಬೇಲಿ ಅಳವಡಿಸಬೇಕು ಎಂದರು.ವಾರದೊಳಗೆ ಹೈಕೋರ್ಟ್‌ಗೆ:

ದೇವಸ್ಥಾನದ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಮುತಾಲಿಕ್ ತಿಳಿಸಿದರು. ಪಾಲಿಕೆ ಆಯುಕ್ತರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧ ಒಂದು ವಾರದೊಳಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ವೀರಯ್ಯ ಸಾಲಿಮಠ, ಬಸವರಾಜ ದುರ್ಗದ್, ಗಣೇಶ ಲದ್ವಾ, ಅಣ್ಣಪ್ಪ ದಿವಟಗಿ, ಮಂಜುನಾಥ ಕಾಟ್ಕರ್ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆವಿಮೆ ಪರಿಹಾರಕ್ಕಾಗಿ ಗುತ್ತಲದಲ್ಲಿ ಧರಣಿ ಕುಳಿತ ರೈತರು
ತುರ್ತಾಗಿ ಕಲಾಭವನ ತೆರೆಯುವಂತೆ ಕ್ರಮ: ಬೆಲ್ಲದ