ಬಂಗಾರಪೇಟೆಯಲ್ಲಿ ಕೆರೆಗಳು ಖಾಲಿ ಖಾಲಿ: ಬರದ ಆತಂಕ

KannadaprabhaNewsNetwork |  
Published : Aug 13, 2026, 02:00 AM IST
11ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನಲ್ಲಿ ಮಳೆಯಿಲ್ಲದೆ ಕರೆಗಳು ಖಾಲಿಯಾಗಿರುವುದು. | Kannada Prabha

ಸಾರಾಂಶ

ಬಂಗಾರಪೇಟೆ ತಾಲೂಕಿನಲ್ಲಿ ಈಗ ಯಾವ ಕೆರೆಯಲ್ಲಿಯೂ ಹನಿ ನೀರಿಲ್ಲದೆ ಎಲ್ಲಾ ಬಹುತೇಕ ಕೆರೆಗಳು ಬಾಯ್ತೆರೆದು ನಿಂತಿದೆ.

ಯರಗೋಳ್ ಅಣೆಕಟ್ಟೆಯಲ್ಲೂ ನೀರಿನ ಪ್ರಮಾಣ ಕಡಿಮೆ । ಜನ, ಜನುವಾರುಗಳಿಗೆ ನೀರಿನ ಅಭಾವ

ರಮೇಶ್ ಕೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಿಲ್ಕ್, ಸಿಲ್ಕ್‌ಗೆ ಹೆಸರುವಾಸಿಯಾಗಿರುವ ತಾಲೂಕಿನಲ್ಲಿ ಕುಡಿಯುವ ನೀರಿಗೆ ಈಗ ಬರ ಎದುರಾಗುವಂತ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ದಶಕದ ಹಿಂದೆ ಕ್ಷೇತ್ರ ಬರಪೀಡಿವಾಗಿತ್ತು, ಆದರೆ ಬಳಿಕ ಸಮೃದ್ಧವಾಗಿ ಮಳೆಯಾದ ಕಾರಣ ಬರ ಮಾಯವಾಯಿತು. ಈಗ ಮತ್ತೆ ಮಳೆ ಕೊರತೆಯಿಂದ ಬರ ಎದುರಾಗಿದೆ. ಕೆರೆಗಳ ತವರೂರು ಎಂಬ ಹೆಸರು ಗಳಿಸಿರುವ ಬಂಗಾರಪೇಟೆ ತಾಲೂಕಿನಲ್ಲಿ ಈಗ ಯಾವ ಕೆರೆಯಲ್ಲಿಯೂ ಹನಿ ನೀರಿಲ್ಲದೆ ಎಲ್ಲಾ ಬಹುತೇಕ ಕೆರೆಗಳು ಬಾಯ್ತೆರೆದು ನಿಂತಿದೆ. ಇದರಿಂದ ಬರೀ ಮನುಷ್ಯರಿಗಲ್ಲದೆ ಜಾನುವಾರುಗಳಿಗೂ ಕುಡಿಯುವ ನೀರಿನ ಅಭಾವ ಕಾಡಲಾರಂಭಿಸದೆ.

ತಾಲೂಕು ಆಡಳಿತದ ಅಂಕಿ ಅಂಶಗಳ ಪ್ರಕಾಶ ಕ್ಷೇತ್ರದಲ್ಲಿ ೬೦ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಮಳೆರಾಯ ಹೀಗೆ ಕೈಕೊಟ್ಟರೆ ಎಲ್ಲಾ ಹಳ್ಳಿಗಳಿಗೂ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಮಳೆಯಿಲ್ಲದೆ ಅಂತರ್ಜಲ ಕುಸಿದಿದೆ. ಕಳೆದ ವರ್ಷ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಇಲ್ಲಿಯವರೆಗೂ ನೀರಿನ ಸಮಸ್ಯೆ ಎಲ್ಲಿಯೂ ಕಂಡಿಲ್ಲ. ಈಗ ಕಾಡುತ್ತಿದೆ. ಮಳೆ ಅಭಾವದಿಂದಾಗಿ ಪ್ರಸಕ್ತ ವರ್ಷ ಬಿತ್ತನೆ ಕಾರ್ಯ ಸಹ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿಕೊಂಡು ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ರೈತರು ಸ್ವಲ್ಪ ಉಸಿರಾಡುವಂತೆ ಮಳೆರಾಯ ಆಗೆ ಬಂದು ಹೀಗೆ ಹೋಗಿದ್ದಾನೆ. ಇದರಿಂದ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದೆ, ಮತ್ತೆ ಮಳೆ ಹಿಂದಕ್ಕೆ ಹೋಗಿದ್ದರಿಂದ ಮತ್ತೆ ಆತಂಕ ಶುರುವಾಗಿದೆ. ಬಂಗಾರಪೇಟೆ, ಕೋಲಾರ, ಮಾಲೂರು ನಗರದ ಜನರಿಗೆ ಕುಡಿಯುವ ನೀರು ಪೂರೈಸಲು ಯರಗೋಳ್ ಅಣೆಕಟ್ಟು ಮೂರು ವರ್ಷಗಳ ಹಿಂದೆ ಲೋಕಾರ್ಪಣೆ ಮಾಡಿದರು. ಇಲ್ಲಿಯವರೆಗೂ ಸಮಸ್ಯೆಯಾಗದಂತೆ ನೀರು ಪೂರೈಕೆಯಾಗುತ್ತಿತ್ತು. ಈಗ ಅಲ್ಲಿಯೂ ನೀರಿನ ಮಟ್ಟ ಕುಸಿದಿದೆ, ಇನ್ನೇನಿದ್ದರೂ ೨೦ ದಿನದೊಳಗೆ ಯರಗೋಳ್ ಅಣೆ ಕಟ್ಟಿನಲ್ಲಿ ನೀರೂ ಬತ್ತಿ ಹೋಗಲಿದೆ. ಆಗ ಮತ್ತೆ ಬೋರ್ ನೀರನ್ನು ಆಶ್ರಯಿಸುವಂತಾಗಲಿದೆ. ಬೋರ್‌ನಲ್ಲಿಯೂ ನೀರಿನ ಅಭಾವವಿರುವುದರಿಂದ ಮನುಷ್ಯರೇನೋ ಹಣಕೊಟ್ಟು ನೀರು ಖರೀದಿಸಿ ಕುಡಿಯುವರು, ಆದರೆ ಮೂಖ ಪ್ರಾಣಿಗಳ ಪಾಡು ದೇವರಿಗೆ ಪ್ರೀತಿ.

ಒಂದು ಕಡೆ ನೀರಿಲ್ಲದೆ ರೈತರು ಕೃಷಿಯತ್ತ ಮುಖ ಮಾಡದಿರುವಾಗ ಮತ್ತೊಂದು ಕಡೆ ಹೈನೋದ್ಯಮಕ್ಕೂ ಬರದಿಂದ ಹೊಡೆತ ಬೀಳಲಿದೆ. ಹಸುಗಳೀಗೆ ಮೇವು, ನೀರು ಅಭಾವ ಉಂಟಾಗಿ ಹೈನೋದ್ಯಮಕ್ಕೂ ಹೊಡೆದ ಬೀಳುವ ಲಕ್ಷಣಗಳು ಇವೆ. ಕೆಸಿ ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಜೀವ ತುಂಬಿತ್ತು, ಆದರೆ ಈಗ ಆ ನೀರೂ ಯಾವ ಕೆರೆಗೂ ಹರಿಯದ ಕಾರಣ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ದಶಕದಿಂದ ಟ್ಯಾಂಕರ್‌ಗಳ ಸದ್ದಿಲ್ಲದೆ ಇತ್ತು. ಈಗ ಮತ್ತೆ ಹೋಟೆಲ್ ಮಾಲೀಕರು, ಉದ್ಯಮಿಗಳು ಹಾಗೂ ಮನೆಗಳಿಗೆ ಮತ್ತೆ ಟ್ಯಾಂಕರ್ ನೀರನ್ನು ಆಶ್ರಯಿಸುವಂತ ಕಾಲ ಸಮೀಪಿಸುತ್ತಿದೆ ಎನ್ನಲಾಗಿದೆ. ಹತ್ತಾರು ವರ್ಷಗಳ ಹಿಂದೆ ಗ್ರಾಮಗಳಲ್ಲಿ ಸಾರ್ವಜನಿಕರ ಕೊಳಾಯಿಗಳ ಮುಂದೆ ಮಹಿಳೆಯರು ಬಿಂದಿಗೆ ನೀರಿಗಾಗಿ ಕೊಳಿ ಜಗಳವಾಡುತ್ತಿದ್ದರು. ಗ್ರಾಪಂಗಳ ಕಚೇರಿ ಎದುರು ಪ್ರತಿಭಟನೆಗಳು ನಡೆಯುತ್ತಿದ್ದರು. ಈಗ ಮತ್ತೆ ಅಂತದ್ದೇ ಘಟನಾವಳಿಗಳು ಮರುಕಳಿಸುವ ಭೀತಿಯನ್ನು ಮಳೆ ಕೊರತೆ ತಂದೊಡ್ಡಬಹುದು ಎನ್ನಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆವಿಮೆ ಪರಿಹಾರಕ್ಕಾಗಿ ಗುತ್ತಲದಲ್ಲಿ ಧರಣಿ ಕುಳಿತ ರೈತರು
ತುರ್ತಾಗಿ ಕಲಾಭವನ ತೆರೆಯುವಂತೆ ಕ್ರಮ: ಬೆಲ್ಲದ