ಮಂಡ್ಯ: ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ನಮ್ಮ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ನಾರಾಯಣಗೌಡ ಸೇರ್ಪಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಶೀಘ್ರದಲ್ಲೇ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ, ಅವರ ಜತೆಗೆ ಕೆ.ಆರ್.ಪೇಟೆ ಭಾಗದ ಬಿಜೆಪಿ ಮುಖಂಡರೂ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂದರು.ಸುಮಲತಾ ಜತೆ ಮಾತನಾಡಿಲ್ಲ: ಯುದ್ಧಕ್ಕೆ ನಿಂತಾಗ ಎದುರಾಳಿ ಯಾರೆಂದು ನೋಡುವುದಿಲ್ಲ. ನಾವು ಯಾರನ್ನೋ ಸೋಲಿಸಲು ಇನ್ಯಾರನ್ನೋ ತಂದು ನಿಲ್ಲಿಸುವುದೂ ಇಲ್ಲ. ಸಂಸದೆ ಸುಮಲತಾರನ್ನು ಪಕ್ಷೇತರವಾಗಿ ಕಣಕ್ಕಿಳಿಯುವಂತೆ ನಾವಂತು ಹೇಳಿಲ್ಲ. ಕಳೆದ ಚುನಾವಣೆಯಿಂದ ಇಲ್ಲಿಯವರೆಗೂ ಅವರ ಜೊತೆ ರಾಜಕೀಯವಾಗಿ ನಾವು ಮಾತಾಡಿಯೂ ಇಲ್ಲ. ಅವರ ನಿಲುವುಗಳ ಬಗ್ಗೆ ಪ್ರಶ್ನೆಯನ್ನೂ ಮಾಡಿಲ್ಲ. ಅವರು ಯಾವ ನಿರ್ಧಾರ ಕೈಗೊಂಡರೂ ನಮ್ಮ ಅಭ್ಯಂತರವಿಲ್ಲ ಎಂದು ಇದೇ ವೇಳೆ ಚಲುವರಾಯಸ್ವಾಮಿ ಹೇಳಿದರು.ವೈಯಕ್ತಿಕವಾಗಿ ಸುಮಲತಾ ಮತ್ತು ನಾವು ವಿಶ್ವಾಸದಿಂದ ಇದ್ದೇವೆ. ಸದ್ಯ ಸುಮಲತಾ ಅವರ ನಡುವೆ ರಾಜಕೀಯ ಮಾತುಕತೆ ನಡೆಸುವ ಪ್ರಮೇಯ ಇಲ್ಲ. ಮುಂದೆ ಏನಾಗುತ್ತೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಚ್ಡಿಕೆ ನಿರ್ಧಾರ ಕಾದು ನೋಡಬೇಕಿಡೆ: ಚಲುವರಾಯಸ್ವಾಮಿಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಒಂದು ಕಡೆ ಹೋದಾಗ ಆ ಸ್ಥಳವನ್ನು ನನ್ನ ಕರ್ಮಭೂಮಿ ಎನ್ನುತ್ತಾರೆ. ರಾಮನಗರ, ಮಂಡ್ಯ, ಚನ್ನಪಟ್ಟಣದಲ್ಲೂ ಅದೇ ಮಾತು ಹೇಳುತ್ತಾರೆ ಎಂದು ಚಲುವರಾಯಸ್ವಾಮಿ ಹೇಳಿದರು. ಇದೀಗ ರಾಮನಗರವನ್ನು ಪೂರ್ಣವಾಗಿ ತಿರಸ್ಕರಿಸಿ ಮಂಡ್ಯಕ್ಕೆ ಬರುವರೋ ಅಥವಾ ಅರ್ಧಕ್ಕೇ ಬಿಟ್ಟು ಇಲ್ಲಿಗೆ ಬರುವರೋ ಅಥವಾ ಕೊನೇ ಘಳಿಗೆಯಲ್ಲಿ ಬೇರೆ ಯಾರನ್ನಾದರೂ ಕಣಕ್ಕಿಳಿಸುವರೋ ಗೊತ್ತಿಲ್ಲ. ಮೂರು ಬಾರಿ ಮುಖ್ಯಮಂತ್ರಿ ಮಾಡಿದ ರಾಮನಗರವನ್ನು ನನ್ನ ಪ್ರಾಣ ಇರೋವರೆಗೂ ಬಿಟ್ಟುಹೋಗಲ್ಲ ಎನ್ನುತ್ತಿದ್ದರು. ಈಗ ರಾಮನಗರ ಬಿಟ್ಟು ಮಂಡ್ಯಕ್ಕೆ ಹೋಗುತ್ತಿದ್ದಾರೆ ಎಂದು ಅಲ್ಲಿಯ ಜನರೇ ಹೇಳುತ್ತಿದ್ದಾರೆ. ಈಗ ಏನು ನಿರ್ಧಾರ ಮಾಡುವರೋ ನೋಡಬೇಕಿದೆ ಎಂದರು.ಲಘುವಾಗಿ ಮಾತನಾಡಲ್ಲ: ಕುಮಾರಸ್ವಾಮಿ ಅವರು ದೇವೇಗೌಡರ ಮಗ, ಮಾಜಿ ಮುಖ್ಯಮಂತ್ರಿ. ಅಲ್ಲದೆ, ರಾಜ್ಯ ನಾಯಕ. ಅವರ ಬಗ್ಗೆ ಗೌರವವಿದೆ. ನಾವು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಮಂಡ್ಯ ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ನಮ್ಮ ಚುನಾವಣೆ ನಾವು ಮಾಡುತ್ತೇವೆ ಎಂದರು.