ವಿದ್ಯುತ್‌ ಸಂಪರ್ಕಕ್ಕೆ ಕೆಡಿಎ ಎನ್‌ಒಸಿ ಕಡ್ಡಾಯ

KannadaprabhaNewsNetwork |  
Published : Jul 03, 2025, 11:47 PM ISTUpdated : Jul 03, 2025, 11:48 PM IST
3ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ಹೊಸ ಕಟ್ಟಡಗಳು ವಿದ್ಯುತ್‌ ಸಂರ್ಪಕ್ಕಾಗಿ ಕಾಯುತ್ತಿರುವುದು. | Kannada Prabha

ಸಾರಾಂಶ

ಹಳೇ ಬಡಾವಣೆಗಳು ಕೆಡಿಎ ಪ್ರಕಾರ ರಚನೆಯಾಗಿಲ್ಲ, ಯಾವುದೇ ಪ್ಲ್ಯಾನ್ ಇಲ್ಲ, ರಸ್ತೆಗಳು ಸಣ್ಣದಾಗಿವೆ, ಚರಂಡಿ ವ್ಯವಸ್ಥೆ ಮೊದಲೇ ಇಲ್ಲ ಹೀಗಿರುವಾಗ ಸ್ವಾಧೀನಾನುಭವ ಪತ್ರ (ಓಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರ ಕಡ್ಡಾಯಗೊಳಿಸಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಸೋಲಾರ್‌ ಅಳವಡಿಕೆಗೂ ಸರ್ಕಾರದ ಅನುಮತಿ ಅಗತ್ಯ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಹೊಸ ಮನೆ ನಿರ್ಮಾಣ ಮಾಡುವ ಮಾಲೀಕರಿಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಕೆಡಿಎ ನಿಯಮದಂತೆ ಮನೆ ನಿರ್ಮಾಣ ಮಾಡಿದ್ದರೆ ಮಾತ್ರ ಹೊಸ ಸಂಪರ್ಕ ನೀಡಬೇಕೆಂದು ಸರ್ಕಾರ ಶಾಕ್ ನೀಡಿದೆ. ತಾಲೂಕುನಾದ್ಯಂತ ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಸುಮಾರು ೧೫೦೦ ಗ್ರಾಹಕರು ಶಬರಿಯಂತೆ ಎದುರು ನೋಡುತ್ತಿದ್ದಾರೆ.ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಸರ್ಕಾರ ಎರಡು ತಿಂಗಳಿಂದ ಹೊಸ ಮನೆ, ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡುವವರಿಗೆ ಹಾಗೂ ಇತರೇ ಹೊಸ ಕಟ್ಟಡ ನಿರ್ಮಾಣ ಮಾಡುವ ಮಾಲೀಕರಿಗೆ ಸರ್ಕಾರ ಕೆಡಿಎಯಿಂದ ಎನ್‌ಒಸಿ ತಂದರೆ ಮಾತ್ರ ಹೊಸ ಸಂಪರ್ಕ ನೀಡಲಾಗುವುದು ಇಲ್ಲದಿದ್ದರೆ ಇಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿರುವುದರಿಂದ ಈಗಾಗಲೇ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಮಾಲೀಕರಿಗೆ ಪರ್ಮನೆಂಟ್ ವಿದ್ಯುತ್ ಸಂಪರ್ಕ ಸಿಗದೆ ಪರದಾಡುವಂತಾಗಿದೆ.ಕೆಡಿಎ ಮಾರ್ಗಸೂಚಿ ಪಾಲಿಸಿಲ್ಲ

ತಾಲೂಕಿನಲ್ಲಿ ಇರುವ ಬಡಾವಣೆಗಳು ಯಾವುದೂ ಕೆಡಿಎ ಮಾರ್ಗಸೂಚಿಯಂತೆ ಮನೆಗಳನ್ನು ನಿರ್ಮಾಣ ಮಾಡಿಲ್ಲ,ಈಗ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡುವವರು ಮಾತ್ರ ಕೆಡಿಎ ಮಾರ್ಗಸೂಚಿಯಂತೆ ಮಾಡಲಾಗುತ್ತಿದಾರೆ, ಆದರೆ ಹಳೇ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಈಗ ಹೊಸ ಮನೆ ಕಟ್ಟಲು ಹೋದರೆ ಅವರಿಗೆ ವಿದ್ಯುತ್ ಸಂಪರ್ಕಸಿಗದೆ ಪರದಾಡುವಂತಾಗಿದೆ. ಕಳೆದ ಎರಡು ತಿಂಗಳಿಂದ ಈಚೆಗೆ ಹೊಸ ಮನೆಗಳನ್ನು ನಿರ್ಮಾಣ ಮಾಡಿರುವವರು ಮನೆ ಗೃಹ ಪ್ರವೇಶ ಮಾಡಿದ್ದಾರೆ, ಆದರೆ ಪರ್ಮನೆಂಟ್ ಸಂಪರ್ಕಸಿಗದೆ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿದೆ. ಇದು ದುಬಾರಿಯಾಗಿದ್ದು, ನಿತ್ಯ ಬೆಸ್ಕಾಂ ಕಚೇರಿ ಸುತ್ತ ಅಲೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.ಹಳೇ ಬಡಾವಣೆಗಳು ಕೆಡಿಎ ಪ್ರಕಾರ ರಚನೆಯಾಗಿಲ್ಲ, ಯಾವುದೇ ಪ್ಲ್ಯಾನ್ ಇಲ್ಲ, ರಸ್ತೆಗಳು ಸಣ್ಣದಾಗಿವೆ, ಚರಂಡಿ ವ್ಯವಸ್ಥೆ ಮೊದಲೇ ಇಲ್ಲ ಹೀಗಿರುವಾಗ ಸ್ವಾಧೀನಾನುಭವ ಪತ್ರ (ಓಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರ ಕಡ್ಡಾಯಗೊಳಿಸಿರುವುದು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ವಿದ್ಯುತ್ ಸಹವಾಸವೇ ಬೇಡವೆಂದು ಸೋಲಾರ್ ಅಳವಡಿಕೆಗೆ ಮುಂದಾದರೂ ಅದಕ್ಕೂ ಸರ್ಕಾರದ ಅನುಮತಿ ಅಗತ್ಯ.ಸಣ್ಣ ಮನೆಗೆ ಅನ್ವಯ ಇಲ್ಲ?

ನಗರ ಹಾಗೂ ಗ್ರಾಮೀಣ ಬಾಗದಲ್ಲಿ ಬಹುತೇಕ ಆಸ್ತಿಗಳು ಕಂದಾಯ ಹಾಗೂ ಬಿ ಖಾತಾ ನಿವೇಶನಗಳು,ಅವುಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ನೀಡುವಂತಿಲ್ಲ, ನಕ್ಷೆ ಮಂಜೂರಾತಿ ಇಲ್ಲದ ಕಟ್ಟಗಳಿಗೆ ಓಸಿ ಹಾಗೂ ಸಿಸಿ ನೀಡಲು ಅವಕಾಶವಿಲ್ಲ, ಓಸಿ ಹಾಗೂ ಸಿಸಿ ಇಲ್ಲದಿದ್ದರೆ ವಿದ್ಯುತ್ ನೀಡಲ್ಲ, ಇದರಿಂದ ಸಾಲ ಮಾಡಿ ಲಕ್ಷಾಂತರ ರೂ ಖರ್ಚು ಮಾಡಿ ಮನೆಗಳನ್ನು ಕಟ್ಟಿಕೊಂಡಿರುವ ಬಡವರು, ಮಧ್ಯಮವರ್ಗದವರು ಅತಂತ್ರರಾಗಿದ್ದಾರೆ. ಸಣ್ಣ ಮನೆಗಳ ನಿರ್ಮಾಣ ಮಾಡುವವರಿಗೆ ಓಸಿ, ಸಿಸಿ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದರೂ ಅದಕ್ಕೂ ಸರ್ಕಾರದ ಮಾರ್ಗಸೂಚಿ ಬಂದಿಲ್ಲ ಎನ್ನಲಾಗಿದೆ.

PREV