ತಾಯಿ, ಶಿಶು ಮರಣಕ್ಕೆ ಕೆಡಿಪಿ ಸಭೇಲಿ ಮಾರ್ದನಿಸಿದ ಆಕ್ರೋಶ : ವರದಿ ಕೇಳಿದ ಉಸ್ತುವಾರಿ ಸಚಿವ ಡಿ.ಸುಧಾಕರ್

KannadaprabhaNewsNetwork |  
Published : Mar 25, 2025, 12:53 AM ISTUpdated : Mar 25, 2025, 08:11 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿದರು.

 ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಘಟಿಸುತ್ತಿರುವ ತಾಯಿ ಮತ್ತು ಶಿಶುವಿನ ಮರಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಕೆಡಿಪಿ ಸಭೆ ಇಡೀ ಆರೋಗ್ಯ ಇಲಾಖೆಯನ್ನು ತೀವ್ರ ತರಾಟೆಗೆ ಗುರಿಪಡಿಸಿತು. ಇದುವರೆಗೂ ಸಂಭವಿಸಿದ ಪ್ರತಿ ಸಾವಿನ ಪ್ರಕರಣಕ್ಕೆ ಪ್ರತ್ಯೇಕ ವಿಶ್ಲೇಷಣಾ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತು.

ಸೋಮವಾರ ಜಿಪಂ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಎಂ.ಚಂದ್ರಪ್ಪ, ರಾಜ್ಯದ ಸರಾಸರಿಗಿಂತಲೂ ಜಿಲ್ಲೆಯಲ್ಲಿ ತಾಯಿ ಮರಣ, ಶಿಶು ಮರಣ ಹಾಗೂ ಸಿಜೇರಿಯನ್ ಪ್ರಮಾಣ ಹೆಚ್ಚಳವಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಇದ್ದಾರೆ. ಜತೆಗೆ ಪೂರಕ ಪೌಷ್ಠಿಕ ಆಹಾರ, ಅಗತ್ಯ ಔಷಧಿಗಳು ಇವೆ. ಆದಾಗ್ಯೂ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಯಾಕೆ ತಾಯಿ ಮರಣ ಸಂಭವಿಸುತ್ತದೆ ಎಂದು ಪ್ರಶ್ನಿಸಿದರು.

ಬಡವರ ಹೆಣ್ಣು ಮಕ್ಕಳ ಸಾವಿಗೆ ಬೆಲೆ ಇಲ್ಲವೇ? ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅಬ್ಬರಿಸಿದರು. ಇದು ಸಾಮಾನ್ಯ ಸಂಗತಿ ಎಂದು ಭಾವಿಸುವಂತಿಲ್ಲ. ಇದಕ್ಕೊಂದು ಪೂರ್ಣ ವಿರಾಮ ಹಾಕಲೇಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಹೊಸದುರ್ಗ ತಾಲೂಕಿನಲ್ಲಿಯೂ ಗರ್ಭಿಣಿಯರ ಸಾವು ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಾಯಿ ಮರಣ, ಶಿಶು ಮರಣ ತಡೆಯುವವರು ಯಾರು ಎಂದು ಪ್ರಶ್ನಿಸಿದರು. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಸಹಜ ಹೆರಿಗೆ ಮಾಡಿಸಲು ಶಿಫಾರಸ್ಸು ಮಾಡುವಂತೆ ಗರ್ಭಿಣಿ ಮನೆಯವರು ನನ್ನ ಬಳಿ ಬಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ಸಹಜ ಹೆರಿಗೆಯ ಅರಿವು ಆಗಿದೆ. ಆದರೆ ವೈದ್ಯಾಧಿಕಾರಿಗಳೇ ಸಿಜೇರಿಯನ್‍ಗೆ ಮುಂದಾಗುತ್ತಿದ್ದಾರೆ. ಸಹಜ ಹೆರಿಗೆ ಮಾಡಿಸುವಂತೆ ಶಿಫಾರಸ್ಸು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ತಾಯಿ ಮರಣ, ಶಿಶು ಮರಣ ಹಾಗೂ ಸಿಜೇರಿಯನ್ ಹೆಚ್ಚಳ ಕುರಿತಂತೆ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಾಕೀತು ಮಾಡಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ತಾಯಿ ಮರಣ, ಶಿಶು ಮರಣಕ್ಕೆ ಸಂಬಂಧಿಸಿದಂತೆ ಪ್ರತಿ ಕೇಸ್‍ಗೂ ಪತ್ಯೇಕ ವಿಶ್ಲೇಷಣಾ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಅವರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ತಾಯಿ ಮರಣ, ಶಿಶು ಮರಣ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳು 6ನೇ ತಾರೀಖು ಹಾಗೂ 24ನೇ ತಾರೀಖು ಗರ್ಭೀಣಿಯರಿಗೆ ವಿವಿಧ ಪರೀಕ್ಷೆಗಳನ್ನು ನಡೆಸಿ, ಅವರಿಗೆ ಕಬ್ಬಿಣಾಂಶದ ಮಾತ್ರೆ ಸೇರಿದಂತೆ ವಿವಿಧ ಅಗತ್ಯ ಚಿಕಿತ್ಸೆ ಔಷಧಗಳನ್ನು ನೀಡಲಾಗುತ್ತಿದೆ ಎಂದು ಡಾ. ರೇಣುಪ್ರಸಾದ್ ಮಾಹಿತಿ ನೀಡಿದರು.

5 ಕೋಟಿ ರು.ಬಾಕಿ:

ಕಳೆದ ವರ್ಷದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಲುವಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೊರೆಯಿಸಿದ 390 ಕೊಳವೆ ಬಾವಿಗಳ ಬಾಕಿ ರು.5 ಕೋಟಿ ಯಷ್ಟಿದೆ. ಸದ್ಯ ಲಭ್ಯವಿರುವ ಅನುದಾನದಲ್ಲಿ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಈ ಬಾರಿ ಬೇಸಿಗೆ ಕಾಲದಲ್ಲಿ ಬೋರ್‌ವೆಲ್ ಕೊರೆಯಲು ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಇದರಿಂದ ಕುಡಿಯುವ ನೀರಿನ ಸರಬರಾಜಿಗೆ ತೊಂದರೆ ಎದುರಾಗುತ್ತದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸಚಿವ ಡಿ.ಸುಧಾಕರ್ ಸೇರಿದಂತೆ ಎಲ್ಲಾ ಶಾಸಕರು ಸೂಚಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ರಸ್ತೆ ಅಗಲೀಕರಣಕ್ಕೆ ಉದಾಸೀನ ಬೇಡ:

ಚಿತ್ರದುರ್ಗ ನಗರದ ಪಿಬಿ ರಸ್ತೆ ಅಗಲೀಕರಣ ಕಾರ್ಯ ನಮ್ಮ ಅಧಿಕಾರ ಅವಧಿಯಲ್ಲಿಯೇ ಪೂರ್ಣಗೊಳ್ಳಬೇಕು. ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯ್ಕ್ ಹಾಗೂ ನಗರಸಭೆ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ರಸ್ತೆ ಅಗಲೀಕರಣ ಕಾರ್ಯಕ್ಕೆ ಮುಂದಾಗಬೇಕು ಎಂದು ಸಚಿವ ಡಿ.ಸುಧಾಕರ್ ಸಭೆಯಲ್ಲಿ ನಿರ್ದೇಶನ ನೀಡಿದರು.

ಸರ್ವೋಚ್ಚ ನ್ಯಾಯಾಲಯವೇ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನೇ ರಸ್ತೆ ಅಗಲೀಕರಣಕ್ಕಾಗಿ ಮುಲಾಜು ತೋರದೆ ತೆರವುಗೊಳಿಸುವಂತೆ ಆದೇಶ ನೀಡಿದೆ. ಹಳೆಯ ಪಿಬಿ ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿದವರನ್ನು ತೆರವುಗೊಳಿಸಲು ಯಾವುದೇ ಮುಲಾಜು ತೋರಬೇಡಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ಚಳ್ಳಕೆರೆ ಹಾಗೂ ಹಿರಿಯೂರಿನಿಂದ ಚಿತ್ರದುರ್ಗ ನಗರ ಪ್ರವೇಶ ಮಾಡುವ ಪಿಬಿ ರಸ್ತೆ ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಆಸ್ಪತ್ರೆಯವರೆಗೆ ಸಾಕಷ್ಟು ವಿಸ್ತಾರವಾಗಿದೆ. ಅದರೆ ನಗರದ ಮುಖ್ಯಭಾಗದಲ್ಲಿ ಒತ್ತುವಾರಿಯಾಗಿದೆ. ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಅಧಿಕಾರಿಗಳು ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

1905ರಲ್ಲಿ ನಗರದ ಮುಖ್ಯರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಗುರುತಿಸಲಾಗಿತ್ತು. ತದನಂತರ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ಇದನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ. ಆದರೆ ಹೆದ್ದಾರಿ ಅಗಲದ ಅಳತೆಯನ್ನು ಕಡಿಮೆ ಮಾಡಿಲ್ಲ. ಒತ್ತುವರಿಯಾದ ರಸ್ತೆಯನ್ನು ಅಧಿಕಾರಿಗಳು ಗುರುತಿಸಬೇಕು. ಇದರೊಂದಿಗೆ ನಗರದ ರಾಜಕಾಲುವೆ ಮೇಲಿನ ನಿರ್ಮಾಣಗಳ ತೆರವಿಗೂ ಮುಂದಾಗಬೇಕು ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಈ ಸಂದರ್ಭದಲ್ಲಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌