ಮಲೆನಾಡ ಜನರ ನೆತ್ತಿ ಸುಡುತ್ತಿದೆ ಬಿಸಿಲು : ಹವಾಮಾನ ವೈಪರಿತ್ಯಕ್ಕೆ ಬಲಿಯಾಗಿ ಇಲ್ಲಿ ಕಕ್ಕಾಬಿಕ್ಕಿ

KannadaprabhaNewsNetwork | Updated : Mar 25 2025, 11:36 AM IST

ಸಾರಾಂಶ

ಮಲೆನಾಡಿನ ಸೆರಗು ಎಂದೇ ಹೆಸರುವಾಸಿಯಾಗಿರುವ ಅಳ್ನಾವರ ತಾಲೂಕು ಇದೀಗ ಅಕ್ಷರಶಃ ಬೆಳವಲ ನಾಡಾಗಿ ಪರಿವರ್ತನೆಯಾಗಿದೆ. ಹವಾಮಾನ ವೈಪರಿತ್ಯಕ್ಕೆ ಬಲಿಯಾಗಿ ಇಲ್ಲಿ ಬಿಸಿಲು ಇದೀಗ ಜನರ ನೆತ್ತಿ ಸುಡುವಂತಾಗಿದೆ.

ಅಳ್ನಾವರ: ಮಲೆನಾಡಿನ ಸೆರಗು ಎಂದೇ ಹೆಸರುವಾಸಿಯಾಗಿರುವ ಅಳ್ನಾವರ ತಾಲೂಕು ಇದೀಗ ಅಕ್ಷರಶಃ ಬೆಳವಲ ನಾಡಾಗಿ ಪರಿವರ್ತನೆಯಾಗಿದೆ. ಹವಾಮಾನ ವೈಪರಿತ್ಯಕ್ಕೆ ಬಲಿಯಾಗಿ ಇಲ್ಲಿ ಬಿಸಿಲು ಇದೀಗ ಜನರ ನೆತ್ತಿ ಸುಡುವಂತಾಗಿದೆ.

ಭೂಮಿಯ ಮೇಲೆ ದುಡಿಯುವ ಪ್ರತಿಯೊಬ್ಬ ಕಾರ್ಮಿಕನಿಗೂ ನೆರಳು ಸಿಗಬಹುದು. ಆದರೆ, ರೈತ ಮತ್ತು ಕೃಷಿ ಕಾರ್ಮಿಕರು ಮಾತ್ರ ಬಿರು ಬಿಸಿಲಿನಲ್ಲಿಯೇ ಕಾಯಕ ಮಾಡಬೇಕಾದ ಆನಿವಾರ್ಯ. ಈ ಬಾರಿ ಬಿಸಿಲಿಗೆ ಅಕ್ಷರಶಃ ರೈತ ವರ್ಗ ಕಕ್ಕಾಬಿಕ್ಕಿಯಾಗಿದೆ. ಈ ಬಾರಿಯ ಸೂರ್ಯನ ವಕ್ರದೃಷ್ಟಿ ರೈತರ ಮೇಲೆ ಬಿದ್ದಿದೆ. ರೈತರು ನಿತ್ಯ ಕಾಯಕದಲ್ಲಿ ಬದಲಾವಣೆ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಹೊಲಗಳಲ್ಲಿನ ಚೂರುಪಾರು ಕೆಲಸಗಳನ್ನು ಮಾಡಿಕೊಳ್ಳುವಂತಾಗಿದೆ.

ಕಬ್ಬು, ಭತ್ತದಂತಹ ನೀರು ಅವಲಂಬಿಸಿದ ಬೆಳೆಗಳೇ ಅಳ್ನಾವರ ಭಾಗದಲ್ಲಿದ್ದು, ಕೊಳವೆ ಬಾವಿಗಳಲ್ಲಿ ನೀರು ದಿನದಿಂದ ದಿನಕ್ಕೆ ಪಾತಾಳ ಸೇರುತ್ತಿದೆ. ಕಬ್ಬು ಒಣಗುವ ಹಂತಕ್ಕೆ ಬಂದಿದೆ. ಒಂದುಕಡೆ ಬಿಸಿಲಿನ ಅವಾಂತರ ಸೃಷ್ಟಿಸಿದರೆ, ಇನ್ನೊಂದೆಡೆ ಬಿಸಿಲು ಬೆಳೆಗಳನ್ನು ಸುಟ್ಟು ಹಾಕುತ್ತಿದೆ. ವಿಪರೀತ ಬಿಸಿಲಿನ ವಾತಾವರಣದಿಂದ ಕೂಲಿ ಮಾಡಲು ಕಾರ್ಮಿಕರು ಸಿಗದಂತಾಗಿದೆ. ಒಂದುವೇಳೆ ಸಿಕ್ಕರೂ ದುಪಟ್ಟು ಕೂಲಿ ದರ ಕೊಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಬೇಗೆ ಅತಿಯಾಗುತ್ತಿದೆ. ಬಿಸಿಲಿನ ಪರಿಣಾಮ ಹೈನುಗಾರಿಕೆಗೂ ವ್ಯಾಪಿಸಿದ್ದು, ರೈತರ ಉಪ ಕಸುಬಾದ ಹೈನುಗಾರಿಕೆಯಲ್ಲಿ ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ನೀರು, ಮೇವು ಸಿಗದೇ ಹಾಲಿನ ಪ್ರಮಾಣ ಕಡಿಮೆಯಾಗಿದೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಕ್ಕಳು ಐಸ್‌ಕ್ರೀಮ್, ಜ್ಯೂಸ್‌ನಂತಹ ತಂಪು ಪಾನಿಯಗಳನ್ನು ಸೇವಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ವಾಂತಿ, ಪಿತ್ತ, ಕಫ, ನೆಗಡಿ, ಜ್ವರಗಳು ಕಾಣಿಸತೊಡಗಿವೆ. ಅಳ್ನಾವರದಲ್ಲಿ ಪೂರ್ಣಪ್ರಮಾಣದಲ್ಲಿ ತೆರೆಯುವ ಮಕ್ಕಳ ಆಸ್ಪತ್ರೆ ಇಲ್ಲದ ಕಾರಣ ಪೋಷಕರು ಮಕ್ಕಳನ್ನು ಧಾರವಾಡಕ್ಕೆ ಕರೆದುಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಕೆರೆ ಇರುವ ಗ್ರಾಮಸ್ಥರು ಮೈಮನ ತಂಪಿಗಾಗಿ ಕೆರೆಗೆ ಈಜಲು ಹೋಗುವಂತಾಗಿದೆ.

ಮರಳಿ ತವರಿಗೆ

ಇಲ್ಲಿಯ ಸಾಕಷ್ಟು ಜನರು ತವರೂರನ್ನು ಬಿಟ್ಟು ಪಕ್ಕದ ಗೋವಾ ರಾಜ್ಯಕ್ಕೆ ಕೆಲಸಗಳನ್ನರಸಿ ಹೋಗುತ್ತಾರೆ. ಆದರೆ, ಅಲ್ಲಿಯೂ ಸಹ ಬಿಸಿಲು ಮತ್ತು ಸಮುದ್ರದ ಧಗೆ ಅಧಿಕವಾಗಿದ್ದರಿಂದ ಅಲ್ಲಿಯ ಜನರು ತವರೂರ ಕಡೆಗೆ ಮುಖ ಮಾಡಿದ್ದಾರೆ. ತವರೂರಿಗೆ ಬಂದು ಕೆಲಸವಿಲ್ಲದೇ ಹಾಳು ಹರಟೆ ಹೊಡೆಯುವ ಸ್ಥಿತಿಗೆ ಬಂದಿದ್ದಾರೆ.

ಈ ಹಿಂದೆ ಮಾರ್ಚ್ ತಿಂಗಳು ಆರಂಭವಾದರೆ ಸಾಕು ಅಳ್ನಾವರದಲ್ಲಿ ಭೀಕರ ಬರಗಾಲದಂತೆ ನೀರಿನ ಅಭಾವ ಆಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಪಟ್ಟಣಕ್ಕೆ ನಿರಂತರವಾಗಿ ಕಾಳಿನದಿ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ, ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜೊತೆಗೆ ಪ್ರತಿ ಗ್ರಾಮಗಳಲ್ಲಿಯೂ ಜಲಜೀವನ ಯೋಜನೆ ಮೂಲಕ ಸುವ್ಯವಸ್ಥಿತವಾಗಿ ನೀರು ನೀಡಲಾಗುತ್ತಿದ್ದು, ಬೆಣಚಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಎರಡು ಕೊಳವೆಬಾವಿಯನ್ನು ತೆರೆಯಾಗಿದೆ. ತಾಲೂಕಿನ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ.

ಹೈನುಗಾರಿಕೆಗೆ ತೊಂದರೆ

ಈ ಬಾರಿಯ ಬಿಸಿಲಿನ ಪ್ರಕರತೆ ಅಧಿಕವಾಗಿದ್ದು ವಿಶೇಷವಾಗಿ ಕಬ್ಬು ಬೆಳೆಗೆ ತೊಂದರೆಯಾಗುತ್ತಿದೆ. ಮಲೆನಾಡಿನ ಪ್ರದೇಶವಾಗಿದ್ದು, ಹೈನುಗಾರಿಕೆಗೂ ತೊಂದರೆಯಾಗಿದೆ. ಹಾಲಿನ ಪ್ರಮಾಣ ಕಡಿಮೆಯಾಗಿದೆ.

- ಅರುಣಕುಮಾರ ಹಿರೇಮಠ, ಅಳ್ನಾವರ ಭಾಗದ ರೈತ

Share this article