ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಹುಲಿಗಳು ಖಾಸಗಿ ಜಮೀನಿನಲ್ಲಿ ಕಾಣಿಸಿಕೊಂಡಿರುವ ಕಾರಣ ಜನರು ಭಯಭೀತರಾಗಿದ್ದು, ಅಮೂಲ್ಯವಾದ ಜೀವಹಾನಿ ಆಗದ ರೀತಿಯಲ್ಲಿ ಮತ್ತು ವನ್ಯಜೀವಿಗಳಿಗೂ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಹುಲಿಗಳ ಚಲನವಲನದ ಮೇಲೆ ಸತತ ನಿಗಾ ಇಡುವುದು ಅತ್ಯಗತ್ಯವಾಗಿದ್ದು, ಡ್ರೋನ್ ಕ್ಯಾಮರಾಗಳು, ಥರ್ಮಲ್ ಕ್ಯಾಮರಾಗಳನ್ನು ಬಳಸಿ ಹುಲಿಗಳು ಎಲ್ಲಿವೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಗ್ರಾಮಸ್ಥರಿಗೆ ಕೂಡಲೇ ಮಾಹಿತಿ ನೀಡಬೇಕು. ಅಲ್ಲಿಗೆ ಅರಣ್ಯ ಇಲಾಖೆಯ ತಂಡಗಳನ್ನು ಕಳುಹಿಸಿ ಯಾವುದೇ ಅನಾಹುತ ಆಗದಂತೆ ಕ್ರಮ ವಹಿಸಬೇಕು ಎಂದರು.೫ ಹುಲಿಗಳ ಕಾರ್ಯಾಚರಣೆ ಸುಲಭದ ಕಾಯಕವಲ್ಲ ಎಂಬುದು ತಮಗೂ ಅರಿವಿದೆ. ಹುಲಿಗಳನ್ನು ಹಿಡಿಯುವಾಗ ಹುಲಿಗಳು ಕಾರ್ಯಾಚರಣೆ ತಂಡದ ಮೇಲೆ ದಾಳಿ ಮಾಡದಂತೆ ಮತ್ತು ಬಡಗಲಪುರದಲ್ಲಿ ಹುಲಿ ರಕ್ಷಣೆ ಕಾರ್ಯಾಚರಣೆ ವೇಳೆ ವ್ಯಕ್ತಿಯ ಮೇಲೆ ದಾಳಿ ಆದಂತಹ ಪ್ರಕರಣಗಳು ಮರುಕಳಿಸದಂತೆ ಹಿರಿಯ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದರು.
೫ ಹುಲಿಗಳ ರಕ್ಷಣೆ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ಸಲಕರಣೆ, ಹೆಚ್ಚುವರಿ ಪಶುವೈದ್ಯರು, ಶಾರ್ಪ್ ಶೂಟರ್ ಗಳನ್ನು ಸಹ ನಿಯೋಜನೆ ಮಾಡುವಂತೆ ಹಾಗೂ ಹೆಚ್ಚುವರಿಯಾಗಿ ಆನೆಗಳನ್ನು ತಕ್ಷಣವೇ ತರಿಸಿಕೊಳ್ಳುವಂತೆಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟವಾಗಿ ತಿಳಿಸಿದರು.
ಜನರ ಜೀವದ ಸುರಕ್ಷತೆ ಅತ್ಯಂತ ಪರಮೋಚ್ಚವಾದ್ದು, ಅದೇ ವೇಳೆ ವನ್ಯಜೀವಿಗಳ ರಕ್ಷಣೆಯೂ ಅಷ್ಟೇ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಬೇಕು, ಸಿಬ್ಬಂದಿಯ ಸುರಕ್ಷತೆಗೆ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಜೊತೆಗೆ ಜನರು ಯಾರೂ ಕಾರ್ಯಾಚರಣೆ ಸ್ಥಳಕ್ಕೆ ಬಾರದಂತೆ ಸೆಕ್ಷನ್ ೧೪೪ ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಿದರು.
ಈಗ ನಾವು ಕೈಗೊಳ್ಳುತ್ತಿರುವುದೆಲ್ಲವೂ ತಾತ್ಕಾಲಿಕ ಕ್ರಮಗಳಾಗಿದ್ದು, ವನ್ಯಜೀವಿಗಳು ಕಾಡಿನಿಂದ ನಾಡಿನತ್ತ ಬಾರದಂತೆ ಶಾಶ್ವತ ಪರಿಹಾರ ಏನು ಎಂಬ ಬಗ್ಗೆ ಅಧಿಕಾರಿಗಳು ತಜ್ಞರೊಂದಿಗೆ ಚರ್ಚಿಸಿ ರೂಪುರೇಶೆ ತಯಾರಿಸಿ ವರದಿ ಸಲ್ಲಿಸಲು ಸೂಚಿಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಹಿರಿಯ ಅಧಿಕಾರಿಗಳಾದ ಮನೋರ್ ರಾಜನ್, ಬಿಸ್ವಜಿತ್ ಮಿಶ್ರಾ ಮತ್ತು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತಿತರರು ಪಾಲ್ಗೊಂಡಿದ್ದರು.