ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಟಿವಿ, ಮೊಬೈಲ್‌ಗಳನ್ನು ಬದಿಗೊತ್ತಿ, ಸಾಮಾಜಿಕ ಮಾಧ್ಯಮಗಳಲ್ಲಿ ತಲ್ಲೀನರಾಗುವ ಬದಲು ವಿದ್ಯಾರ್ಥಿಗಳು ಪುಸಕ್ತಗಳನ್ನು ಸ್ನೇಹಿತರಾಗಿ ಮಾಡಿಕೊಂಡು, ಸತತ ಅಭ್ಯಾಸ ಮಾಡುವ ಮೂಲಕ ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ತಾಲೂಕಿನ ಹಿರಿಸಾವೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಮತ್ತು ಎನ್‌ಎಸ್‌ಎಸ್, ಸೈಟ್ಸ್ ಅಂಡ್ ರೆಡ್ ಗೈಡ್ಸ್, ರೆಡ್ ರಿಬ್ಬನ್ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಗ್ರಾಮೀಣ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ಮಾಡುವ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ, ಉನ್ನತ ಸ್ಥಾನವನ್ನು ಪಡೆದಿದ್ದಾರೆ. ನಮ್ಮ ಸಂಸ್ಕೃತಿಯನ್ನು ಹಲವು ದೇಶಗಳು ಅನುಕರಣೆ ಮಾಡುತ್ತಿವೆ. ನಾವುಗಳು ಅವುಗಳನ್ನು ಉಳಿಸಿ ಬೆಳೆಸುವ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ದೇವರ ಸೇವೆಗಿಂತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುವುದು ಉತ್ತಮ ಎಂದು ನಾವು ತಿಳಿದುಕೊಂಡು, ತಾಲೂಕಿನಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ. ಕಾಲೇಜಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸುವುದಾಗಿ ಶಾಸಕರು ಹೇಳಿದರು.ಸಾಹಿತಿ ಹೆರಗನಹಳ್ಳಿ ದಿನೇಶ್ ಮಾತನಾಡಿ, ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಬಿಹಾರ ರಾಜ್ಯದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಪರೀಕ್ಷೆಗಳ ಸಿದ್ಧತೆಯ ಬಗ್ಗೆ ಉಪನ್ಯಾಸಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನವನ್ನು ಪಡೆಯಬೇಕು. ಸಳೀಯ ವಾಗಿರುವ ಜಾನಪದ, ಸಾಹಿತ್ಯ, ಕ್ರೀಡೆ, ರಾಜಕೀಯ ಸೇರಿದಂತೆ ಎಲ್ಲ ವಿಷಯಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಹೇಳಿದರು.ಪ್ರಾಂಶುಪಾಲ ಬಿ.ಎಚ್.ಲಕ್ಷ್ಮಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅನಂತ್, ಕಾಲೇಜಿನ ವಿವಿಧ ಸಮಿತಿಗಳ ಸಂಚಾಲಕರಾದ ಮಂಜುನಾಥ್, ಕುಮಾರ್, ಸುನಿಲ್ ಕುಮಾರ್, ಆಶಾ ಮಾತನಾಡಿದರು. ಮುಖಂಡರಾದ ರವಿಕುಮಾರ್, ಮಹೇಶ್, ಮರಗೂರು ಅನಿಲ್ ಕುಮಾರ್, ವಿಶ್ವನಾಥ್ ವೇದಿಕೆಯಲ್ಲಿ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.