ಕನ್ನಡಪ್ರಭ ವಾರತೆ ಕಲಬುರಗಿ
ನಿರಂತರ ಕಲಿಯಿರಿ, ಅಹಂಕಾರವಿಲ್ಲದೆ ಬದುಕಿರಿ, ಪ್ರಶ್ನಿಸುವುದನ್ನು ನಿಲ್ಲಿಸದಿರಿ ಎಂದು ಭಾರತದ ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ನವ ಪದವೀಧರರಿಗೆ ಕಿವಿಮಾತು ಹೇಳಿದ್ದಾರೆ.ಕರ್ನಾಟಕ ಕೇಂದ್ರೀಯ ವಿವಿ ಅಂಗಳದಲ್ಲಿ 9ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಬೆಳವಣಿಗೆ ಎಂದಿಗೂ ಪ್ರತ್ಯೇಕತೆಯಲ್ಲಿ ಮಾತ್ರ ಸಂಭವಿಸುವುದಿಲ್ಲ, ಅದು ಅನೇಕ ಅಂಶಗಳಲ್ಲಿ ಬೇರೂರಿರುತ್ತದೆ. ಪರಂಪರಾಗತವಾಗಿ ಬಳುವಳಿಯಾಗಿ ಬಂದ ಸಂಸ್ಕೃತಿ, ಬೇರುಗಳು, ಪರಿಸರ ಮತ್ತು ರೆಕ್ಕೆಗಳು ನಿಮ್ಮನ್ನು ರೂಪಿಸುತ್ತವೆ. ನಿಮ್ಮ ವ್ಯಕ್ತಿತ್ವವನ್ನು ಮತ್ತು ನಿಮ್ಮ ನಡತೆಯನ್ನು ರೂಪಿಸಲು ಇವೆರಡೂ ಬಹಳ ಅಗತ್ಯ ಎಂದರು.
ಪ್ರೊ. ಬಟು ಸತ್ಯನಾರಾಯಣ ಮಾತನಾಡಿದರು. ಕುಲಸಚಿವ ಆರ್ ಆರ್ ಬಿರಾದಾರ್ ಅವರು ರ್‍ಯಾಂಕ್ ವಿಜೇತರನ್ನು ಪರಿಚಯಿಸಿದರು.ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ ನವ ಪದವೀಧರರನ್ನು ಸಭೆಗೆ ಪರಿಚಯಿಸಿದರು. ಡಾ.ಚನ್ನವೀರ ಆರ್.ಎಂ., ಸಮಾಜ ನಿಕಾಯದ ಡೀನ್ ಡಾ. ಪವಿತ್ರಾ ಆಲೂರ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಬಿ ಸಿನ್ನೂರ, ಘಟಿಕೋತ್ಸವ ಮಾಧ್ಯಮ ಉಸ್ತುವಾರಿ ಡಾ.ಜೋಹೆರ್, ಡಾ.ಪ್ರಕಾಶ ಬಾಳಿಕಾಯಿ ಇದ್ದರು.
ಘನತೆ ನಿತ್ಯ ಬದುಕಿನ ಅಂಗವಾಗಲಿ
ತಂತ್ರಜ್ಞಾನ ಯುಗದಲ್ಲಿ ಮಾನವ ಘನತೆಯ ಮಾನದಂಡಗಳು ‘ನಿಜವಾಗಿಯೂ ನಾವು ಯಾರು’ ಎಂಬುದರಿಂದ ‘ಲೋಕದ ಕಣ್ಣಿಗೆ ನಾವು ಹೇಗೆ ಕಾಣಿಸುತ್ತೇವೆ’ ಎಂಬುದರತ್ತ ಬದಲಾಗಿವೆ. ಈ ಬದಲಾವಣೆಯ ಪಯಣದಲ್ಲಿ ನಾವು ನಿಜವಾದ ಅಸ್ತಿತ್ವವನ್ನು ಬಿಟ್ಟು, ಕೃತಕ ಲೋಕದ ಮೌಲ್ಯಮಾಪನಕ್ಕಾಗಿ ಹುಡುಕಾಟ ನಡೆಸುತ್ತಿದ್ದೇವೆ. ಘನತೆ ಹೊಸ ಪೀಳಿಗೆಗೆ ಕೇವಲ ಒಂದು ತತ್ವವಾಗದೆ ನಿತ್ಯಜೀವನದ ಅವಿಭಾಜ್ಯ ಅಂಗವಾಗಬೇಕು, ವ್ಯಕ್ತಿಗೆ ಘನತೆಯ ಭರವಸೆ ನೀಡುವ “ಸಹೋದರತ್ವ” ಎಂಬ ಮಹೋನ್ನತ ವಾಕ್ಯ ಸಂವಿಧಾನದ ಸುವರ್ಣಾಕ್ಷರಗಳಲ್ಲಿ ಶೋಭಿಸುತ್ತದೆ. ಅದು ಕೇವಲ ಒಂದು ತತ್ವವಲ್ಲ, ನಮ್ಮ ರಾಷ್ಟ್ರದ ಆತ್ಮಕ್ಕೆ ದಿಕ್ಕು ತೋರಿಸುವ ಶಾಶ್ವತ ದಾರಿದೀಪ. ಪ್ರತಿಯೊಬ್ಬರ ಘನತೆ, ಪರಸ್ಪರ ಗೌರವ ಮತ್ತು ಏಕತೆಯ ನಾಡಿಯನ್ನು ಸದಾ ಜಾಗೃತಗೊಳಿಸುತ್ತದೆ. ಸಂಸ್ಕೃತಿ, ಪರಿಸರ ಮತ್ತು ಸಾಮೂಹಿಕ ಮನಸಾಕ್ಷಿಯ ಮೂಲಕ ಬೆಳವಣಿಗೆ ಸಾಧ್ಯವೆಂದು ದಿನೇಶ ಮಹೇಶ್ವರಿ ಅಭಿಪ್ರಾಯಪಟ್ಟರು.ಭರತನ ಆದರ್ಶ ಶಾಶ್ವತ ದೀಪಸ್ತಂಭವಾಗಲಿ
ರಾಮಾಯಣದ ಭರತ ನೀಡಿದ ಆದರ್ಶ ಶಾಶ್ವತ ದೀಪಸ್ತಂಭವಾಗಿದೆ. ಕೈಕೇಯಿ ತನ್ನ ಬುದ್ಧಿವಂತಿಕೆಯಿಂದ ರಾಮನ ವನವಾಸದ ವಾಗ್ದಾನ ಮತ್ತು ಭರತನ ಪಟ್ಟಾಭಿಷೇಕದ ಸೌಲಭ್ಯ ದೊರಕಿಸಿಕೊಂಡರೂ ಭರತ ಆಯೋಧ್ಯೆಯ ಸಿಂಹಾಸನವನ್ನು ಏರಲು ನಿರಾಕರಿಸಿದ. ಅವನು ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ, ತಾನು ಕೇವಲ ನಾಮಮಾತ್ರ ರಾಜನಾಗಿ ರಾಮನು ವನವಾಸದಿಂದ ಮರಳುವವರೆಗೆ ನಿಷ್ಠೆಯಿಂದ ರಾಜ್ಯಭಾರ ಮಾಡಿದ. ಭರತ ಮಾನವನಿಗೆ ಮಾದರಿಯಾಗುವ ಎರಡು ಶಾಶ್ವತ ಮೌಲ್ಯಗಳನ್ನು ಬದುಕಿ ತೋರಿಸಿದ. ಅನ್ಯಾಯದಿಂದ ದೊರೆತ ಅಧಿಕಾರವನ್ನು ತ್ಯಜಿಸುವ ಧೈರ್ಯ ಮತ್ತು ತಾಂತ್ರಿಕ ನಿಯಮಗಳಿಗಿಂತ ಮೇಲಾಗಿ ಧರ್ಮದ ಅಂತರಾರ್ಥವನ್ನು ಗೌರವಿಸುವ ವಿವೇಕ. ಇವು ಜ್ಞಾನದಿಂದ ಅರಿವಿನೆಡೆಗೆ ಸಾಗುವ ನಿಜವಾದ ದಾರಿಗಳೂ ಅಂತರಂಗದ ದೀಪ ಬೆಳಗಿಸುವ ಪಥಗಳೂ ಆಗಿವೆ ಎಂದು ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಪ್ರತಿಪಾದಿಸಿದರು.