ಹುಬ್ಬಳ್ಳಿ:
ಯುವಜನಾಂಗ ಮಾದಕ ವಸ್ತುಗಳ ವ್ಯಸನಿಯಾಗಿ ಕ್ಷಯಿಸಿ ಹೋಗದೇ ತಂಬಾಕು ಉತ್ಪನ್ನಗಳಿಂದ ದೂರವಾಗಿರಬೇಕೆಂದು ವಿಜ್ಞಾನ ಸಂವಹನಾಕಾರ ಸಂಜೀವಕುಮಾರ ಭೂಶೆಟ್ಟಿ ಹೇಳಿದರು.ಅವರು ತಾಲೂಕಿನ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ ಸಿ.ವಿ. ರಾಮನ್ ವಿಜ್ಞಾನ ಜಗತ್ತು, ಡಾ. ಜಗದೀಶ ಚಂದ್ರ ಬೋಸ್ ವಿಜ್ಞಾನ ಸಂಘ ಹಾಗೂ ಡಾ. ಸಲೀಂ ಅಲಿ ಇಕೋ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಂಬಾಕು ಉತ್ಪನ್ನಗಳು ಮತ್ತು ಯುವಜನಾಂಗ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆಯ ಕಳವಳಕಾರಿ ವರದಿಯಲ್ಲಿ ಭಾರತದಲ್ಲಿ ತಂಬಾಕು ಉತ್ಪನ್ನ ಸೇವಿಸಲು 15 ವರ್ಷದಿಂದ ಆರಂಭಗೊಂಡು ಕನಿಷ್ಠ 250 ಮಿಲಿಯನ್ ಗಿಂತಲೂ ಅಧಿಕರು ವ್ಯಸನಿಗಳಾಗಿದ್ದಾರೆ. ಕನಿಷ್ಠ 200 ಮಿಲಿಯನ್ ಜನರು ಹೊಗೆರಹಿತ ತಂಬಾಕು ಸೇವಿಸುತ್ತಿದ್ದಾರೆ. ಪ್ರಸ್ತುತ ಕ್ಯಾನ್ಸರ್ ಹರಡುವಿಕೆಯು ಶೇ. 77 ರಷ್ಟು ಜಾಗತಿಕ ಏರಿಕೆ ಕಾಣುತ್ತಿರುವುದು ಅತ್ಯಂತ ವಿಷಾದಕರ ಮತ್ತು ಚಿಂತಿಸಬೇಕಾದ ಸಂಗತಿ ಎಂದರು.ಗುಟ್ಕಾ, ಪಾನ್ ಮಸಾಲ, ಖೈನಿ, ಕಚ್ಚಾ ತಂಬಾಕು, ಬೀಡಿ, ಸಿಗರೇಟು ಮುಂತಾದ ತಂಬಾಕು ಉತ್ಪನ್ನಗಳನ್ನು ಎಲ್ಲೆಂದರಲ್ಲಿ ಸೇವಿಸುವುದನ್ನು ನೋಡುತ್ತಿದ್ದೇವೆ. ಇದರಿಂದ ಮಾರಣಾಂತಿಕ ಬಾಯಿ, ಶ್ವಾಸಕೋಶ, ಕಿಡ್ನಿ, ಸ್ತನ ಮುಂತಾದ ಕ್ಯಾನ್ಸರ್ ಬೆಳೆಯುತ್ತಿದೆ, ಹಲ್ಲು ಕಲೆಗಳು, ಒಸಡು ಸವೆತ, ಒಣಗಿದ ಬಾಯಿ ಅಂಗಳ, ಮಾನಸಿಕ ತುಮುಲಗಳಂತಹ ಕಾಯಿಲೆಗಳು ವ್ಯಾಪಕವಾಗಿ ಪಸರಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯ ಶಿಕ್ಷಕ ಐ.ಎಂ. ಇಳಕಲ್ಲ ಮಾತನಾಡಿದರು. ಶಿಕ್ಷಕಿ ಅಮೀರಾಬಾನು ದಲಾಲ, ಪ್ರೀತಾ ಫರ್ನಾಂಡಿಸ್, ಪಿ.ಕೆ. ಪತ್ತಾರ, ಸುಮಾ, ದೇವಿಪ್ರಸಾದ, ವಿಜಯಲಕ್ಷ್ಮಿ, ಶ್ವೇತಾ ಹುಯಿಲಗೋಳ, ಬಸಣ್ಣ ನವಲಗುಂದ ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಸುರೇಶ ನಾಯಕ ಸ್ವಾಗತಿಸಿ, ನಿರೂಪಿಸಿದರು.