ಮದ್ದೂರು ಕೆರೆಯ ಶೂನ್ಯದಿಂದ 4 ಕಿ.ಮೀ ವ್ಯಾಪ್ತಿಯ ಚೆನ್ನೇಗೌಡ ದೊಡ್ಡಿವರೆಗೆ ಜನ- ಜಾನುವಾರುಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನೀರು ಹರಿಯುವಿಕೆಗೆ ಅವಕಾಶ ನೀಡಿದ ಬಳಿಕ ಚನ್ನೇಗೌಡ ದೊಡ್ಡಿ ಹಾಲು ಉತ್ಪಾದಕರ ಸಂಘದ ಬಳಿ ತಡೆಗೋಡೆ ನಿರ್ಮಿಸಿ ಮುಂದೆ ನೀರು ಹರಿಯದಂತೆ ತಡೆವೊಡ್ಡಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ನಾಲೆ ತಡೆಗೋಡೆ ಒಡೆದು ನೀರು ಹರಿಸಿಕೊಂಡ ಪರಿಣಾಮ ಕೆಮ್ಮಣ್ಣುನಾಲೆ ಆಧುನೀಕರಣ ಕಾಮಗಾರಿಗೆ ಅಡ್ಡಿ ಪಡಿಸಿರುವ ಘಟನೆ ಪಟ್ಟಣದ ಚನ್ನೇಗೌಡನ ದೊಡ್ಡಿ ಬಳಿ ಭಾನುವಾರ ರಾತ್ರಿ ಜರುಗಿದೆ.
ತಡೆಗೋಡೆ ಒಡೆದವರು ಯಾರೆಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ, ಬೆಳೆಗಳಿಗೆ ನೀರು ಹರಿಸಿಕೊಳ್ಳುವ ಉದ್ದೇಶದಿಂದ ರೈತರೇ ತಡೆಗೋಡೆ ಒಡೆದಿದ್ದಾರೆಯೇ ಅಥವಾ ನಾಲೆ ಆಧುನಿಕರಣ ಕಾಮಗಾರಿಗೆ ಅಡ್ಡಿ ಉಂಟು ಮಾಡುವ ಉದ್ದೇಶದಿಂದ ಈ ಕೃತ್ಯ ನಡೆದಿರಬಹುದೇ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ. ಉದಯ್ ಕಳೆದ ಶುಕ್ರವಾರ 90 ಕೋಟಿ ರು.ವೆಚ್ಚದ ಕೆಮ್ಮಣ್ಣು ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದ ಬೆನ್ನಲ್ಲೇ ಇಂತಹ ಘಟನೆ ನಡೆದಿರುವುದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಬೆಂಗಳೂರಿನ ಅಮೃತ್ ಕನ್ಸ್ಟ್ರಕ್ಷನ್ಸ್ ಕಂಪನಿ ಕೆಮ್ಮಣ್ಣು ನಾಲೆಯ ಆಧುನೀಕರಣ ಕಾಮಗಾರಿಯ ಗುತ್ತಿಗೆ ಪಡೆದುಕೊಂಡ ನಂತರ ಕೆಲ ದಿನಗಳಿಂದ ಕಾಮಗಾರಿ ಪ್ರಾರಂಭ ಮಾಡಿದೆ. ಮದ್ದೂರು ಕೆರೆಯ ಶೂನ್ಯದಿಂದ 4 ಕಿ.ಮೀ ವ್ಯಾಪ್ತಿಯ ಚೆನ್ನೇಗೌಡ ದೊಡ್ಡಿವರೆಗೆ ಜನ- ಜಾನುವಾರುಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನೀರು ಹರಿಯುವಿಕೆಗೆ ಅವಕಾಶ ನೀಡಿದ ಬಳಿಕ ಚನ್ನೇಗೌಡ ದೊಡ್ಡಿ ಹಾಲು ಉತ್ಪಾದಕರ ಸಂಘದ ಬಳಿ ತಡೆಗೋಡೆ ನಿರ್ಮಿಸಿ ಮುಂದೆ ನೀರು ಹರಿಯದಂತೆ ತಡೆವೊಡ್ಡಲಾಗಿದೆ.
ನಾಲೆಯ 4 ಕಿ.ಮೀ ನಂತರ ನೀರು ಸ್ಥಗಿತಗೊಳಿಸಿ ಮುಂದಿನ ಭಾಗದಲ್ಲಿ ನಾಲೆಯ ಹೂಳು ತೆಗೆದು ಕಾಂಕ್ರೀಟ್ ಲೈನಿಂಗ್ ನಿರ್ಮಾಣಕ್ಕೆ ಅಗತ್ಯವಾದ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೇ ತಡೆಗೋಡೆ ಧ್ವಂಸಗೊಳಿಸಿರುವುದರಿಂದ ಇನ್ನೂ ಒಂದು ವಾರ ಕಾಲ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನಾಲೆಯ ಆಧುನೀಕರಣ ಕಾಮಗಾರಿಗೆ ಅಡ್ಡಿ ಉಂಟಾಗಿರುವ ಹಿನ್ನೆಲೆಯಲ್ಲಿ ಮೂಲ ಮದ್ದೂರು ಕೆರೆಯಿಂದಲೇ ನೀರು ಹರಿಯುವಿಕೆ ಯನ್ನು ಸ್ಥಗಿತಗೊಳಿಸಿ ನಾಲೆಯ ಆಧುನೀಕರಣ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.