ಆಪರೇಷನ್ ಸಿಂದೂರ: ಅಭಿಪ್ರಾಯಗಳು

KannadaprabhaNewsNetwork |  
Published : May 13, 2025, 01:31 AM IST
ಆಪರೇಷನ್ ಸಿಂದೂರ ಅಭಿಪ್ರಾಯಕ್ಕೆ ಫೋಟೋಗಳು | Kannada Prabha

ಸಾರಾಂಶ

ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿಗೆ ಸಿಂದೂರ ತುಂಬಾ ಮುಖ್ಯವಾದುದು. ಆಪರೇಷನ್ ಸಿಂದೂರವನ್ನು ಯಾವುದೇ ಕಾರಣಕ್ಕೂ ನಿಲ್ಲದಿರಲಿ. ಯೋಧರು ಇಟ್ಟ ಗುರಿ ಯಶಸ್ವಿಯಾಗಲಿ. ಪಾಕಿಸ್ತಾನದ ಪಾಪಿಗಳು ಸಾಯುವವರೆಗೂ ವೈರಿಗಳೇ ಎಂಬುದನ್ನು ಮರೆಯಬಾರದು.

ಪಾಕಿಸ್ತಾನವನ್ನು ಬಗ್ಗು ಬಡಿಯಲು ಒಳ್ಳೆಯ ಅವಕಾಶ ಸಿಕ್ಕಿದೆ. ಟ್ರಂಪ್ ಮಾತು ಕೇಳಿ ಕೇಂದ್ರ ಸರ್ಕಾರ ತಪ್ಪು ಮಾಡಿದೆ. ಕದನ ವಿರಾಮ ಘೋಷಿಸುವ ಮುಂಚೆ ಉಗ್ರರನ್ನು ಒಪ್ಪಿಸಲು ಪಾಕ್‌ಗೆ ಪಟ್ಟು ಹಾಕಬೇಕಿತ್ತು. ಕಾಲ ಮಿಂಚಿಲ್ಲ. ಮೊದಲು ಪಿಒಕೆ ವಶಕ್ಕೆ ಪಡೆದು, ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಬೇಕು. ಅಮೆರಿಕಾದಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಭಾರತೀಯರಿಗೆ ಪ್ರವಾಸಿ ವೀಸಾ ರದ್ದು ಮಾಡಿದ್ದು ಸೇರಿದಂತೆ ಅನೇಕ ಕಾಟ ಕೊಟ್ಟಿದ್ದು ಜಗತ್ತಿಗೇ ಗೊತ್ತಿದೆ. ಅಂತಹ ಟ್ರಂಪ್ ಹೇಳಿದಂತೆ ಕೇಳಿ ಯುದ್ದದಿಂದ ಹಿಂದೆ ಸರಿದಿದ್ದು ಉತ್ತಮ ನಡೆಯಂತೂ ಅಲ್ಲ.

- ಕೆ.ಜಿ.ಯಲ್ಲಪ್ಪ, ರಾಜ್ಯಾಧ್ಯಕ್ಷ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ

(-12ಕೆಡಿವಿಜಿ1)

- - -

ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣಿಗೆ ಸಿಂದೂರ ತುಂಬಾ ಮುಖ್ಯವಾದುದು. ಆಪರೇಷನ್ ಸಿಂದೂರವನ್ನು ಯಾವುದೇ ಕಾರಣಕ್ಕೂ ನಿಲ್ಲದಿರಲಿ. ಯೋಧರು ಇಟ್ಟ ಗುರಿ ಯಶಸ್ವಿಯಾಗಲಿ. ಪಾಕಿಸ್ತಾನದ ಪಾಪಿಗಳು ಸಾಯುವವರೆಗೂ ವೈರಿಗಳೇ ಎಂಬುದನ್ನು ಮರೆಯಬಾರದು. ಪ್ರಧಾನಿ ಮೋದಿಜೀಯವರು ಪಾಕ್ ವಿರುದ್ಧ ಕಠಿಣ ಹಾಗೂ ಗಟ್ಟಿ ನಿರ್ಧಾರ ಕೈಗೊಂಡು, ಉಗ್ರರ ದಮನ ಮಾಡಬೇಕು. ಭಾರತೀಯ ಸೇನೆ ಮೇಲೆ ದೇಶದ ಮಹಿಳೆಯರಿಗೆ ಸಂಪೂರ್ಣ ವಿಶ್ವಾಸವಿದೆ. ಪಾಕ್‌ನ ಸರ್ವನಾಶಕ್ಕೆ ಒಂದು ಸಲ ಅವಕಾಶ ನೀಡಲೆಂದು ಒತ್ತಾಯಿಸುವೆ.

- ಪುಷ್ಪಾ ಬಿ.ವಾಲಿ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಹಿಳಾ ಮೋರ್ಚಾ

(12ಕೆಡಿವಿಜಿ2)

- - -

ಪಾಕಿಸ್ತಾನ ವಿರುದ್ಧದ ಯುದ್ಧ ಮುಂದುವರಿಯಬೇಕು. ಸಾವಿರಾರು ವರ್ಷಗಳಿಂದಲೂ ಯಾರ ತಂಟೆಗೂ ಹೋಗದ, ತಾನಾಗಿ ದಾಳಿ ಮಾಡದ ದೇಶ ನಮ್ಮದು. ಪದೇಪದೇ ಭಾರತದ ಮೇಲೆ ಎರಗಿ ಬರುತ್ತಿರುವ, ಭಯೋತ್ಪಾದಕರನ್ನು ದೇಶದೊಳಗೆ ನುಗ್ಗಿಸುತ್ತಿರುವ ಪಾಕ್‌ಗೆ ತಕ್ಕ ಪಾಠ ಕಲಿಸುವ ಸಮಯ ಇದಾಗಿದೆ. ವಿಶ್ವ ಭೂಪಟದಲ್ಲಿ ಪಾಕ್‌ ನಕ್ಷೆಯೇ ಇಲ್ಲದಂತೆ ಮಾಡುವ ಲೋಕ ಕಲ್ಯಾಣದ ಕೆಲಸ ಭಾರತೀಯ ಸೇನೆಗಳು ಮಾಡಲಿ. ಪಾಕಿಗಳಂತಹ ಕ್ರೂರತ್ವ ಇರುವ ಮನುಷ್ಯರು ಭೂಮಿ ಮೇಲೆ ನೆಲೆಸುವುದಕ್ಕೂ ಬಿಡಬಾರದು.

- ಶೃತಿ ಸಂತೋಷಕುಮಾರ ಕಬ್ಬೂರು, ಗೃಹಿಣಿ, ದಾವಣಗೆರೆ

(-12ಕೆಡಿವಿಜಿ3)

- - -

ಭಾರತದ ಪಾಲಿಗೆ ಸದಾ ಸಮಸ್ಯೆ ತಂದೊಡ್ಡುತ್ತಿರುವ ಪಾಕಿಸ್ತಾನವನ್ನು ಸದೆಬಡಿದು, ಪಾಕ್ ಆಕ್ರಮಿಕ ಕಾಶ್ಮೀರವನ್ನು ಭಾರತ ತನ್ನ ತೆಕ್ಕೆಗೆ ಪಡೆಯಲು ಇದು ಸುಸಂದರ್ಭ. ದಶಕಗಳ ಕಾಲ ಉಗ್ರರು, ಪಾಕಿಗಳ ಉಪಟಳದಿಂದ ಹುತಾತ್ಮರಾದ ಯೋಧರು, ಭಾರತೀಯರು, ಕೈ-ಕಾಲು ಕಳೆದುಕೊಂಡು, ಕಣ್ಣುಗಳನ್ನು ಕಳೆದುಕೊಂಡ ಯೋಧರು, ಜನರಲ್ಲಿ ಒಂದಿಷ್ಟು ನೆಮ್ಮದಿ ಸಿಗಬೇಕೆಂದರೆ ಪಾಕಿಸ್ತಾನವನ್ನು ಸಂಪೂರ್ಣ ಬಗ್ಗುಬಡಿಸುವ ಕೆಲಸ ನಿಲ್ಲಬಾರದು. ದೇಶಕ್ಕಾಗಿ ಪಕ್ಷಬೇಧ, ಜಾತಿ-ಮತ ಭೇದ ಮರೆತು, ಭಾರತೀಯ ಸೇನೆಯ ಬೆನ್ನಿಗೆ ನಿಲ್ಲೋಣ.

- ರವಿಕುಮಾರ ನುಗ್ಗೇಹಳ್ಳಿ, ಖಜಾಂಚಿ, ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ

(-12ಕೆಡಿವಿಜಿ4)

- - -

ಉಗ್ರರ ಜನಕ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಕಪಾಳಕ್ಕೆ ಹೊಡೆದಂತೆ ನಾಲ್ಕೈದು ದಿನಗಳಿಂದಲೂ ಪಾಠ ಕಲಿಸುವ ಕೆಲಸವನ್ನು ಭಾರತೀಯ ಸೇನೆ, ನಮ್ಮ ವೀರ ಯೋಧರು ಮಾಡುತ್ತಿದ್ದಾರೆ. ಪಾಕ್‌ ಜೊತೆ ಯಾವುದೇ ಕಾರಣಕ್ಕೂ ಮಾತುಕತೆ ಸಲ್ಲದು. ಭಾರತೀಯ ಸೇನೆಯ ಟ್ರೈಲರ್‌ಗೆ ಇಷ್ಟು ಪೆಚ್ಚಾಗಿರುವ ಪಾಕಿಸ್ತಾನ ಅಸಲಿ ಯುದ್ಧಕ್ಕೆ ಭಾರತ ಇಳಿದರೆ, ಕೆಲವೇ ಗಂಟೆಗಳಲ್ಲಿ ವಿಶ್ವ ಭೂಪಟದಿಂದ ಆ ದೇಶ ಕಣ್ಮರೆಯಾಗುವುದು ನಿಶ್ಚಿತ. ಧರ್ಮ ಬಿಟ್ಟರೂ ಕರ್ಮ ಬಿಡದೆಂಬುದಕ್ಕೆ ಪಾಕ್‌ ಉತ್ತಮ ನಿದರ್ಶನ.

- ಪಿ.ಎನ್. ಜಗದೀಶ ಕುಮಾರ ಪಿಸೆ, ಸ್ವಉದ್ಯೋಗಿ, ದಾವಣಗೆರೆ

(-12ಕೆಡಿವಿಜಿ5)

- - -

ತ್ರೇತಾಯುಗದಲ್ಲಿ ಸೀತೆಯನ್ನು ಅಪಹರಿಸಿ ರಾವಣ ಸತ್ತ, ದ್ವಾಪರ ಯುಗದಲ್ಲಿ ದ್ರೌಪದಿಯ ಸೀರೆಗೆ ಕೈ ಹಾಕಿ ಕೌರವರು ನಾಶವಾದರು. ಕಲಿಯುಗದಲ್ಲಿ ನಮ್ಮ ಸಹೋದರಿಯರ ಸಿಂದೂರ ಅಳಿಸಿದ ಪಾಕಿಸ್ತಾನ ನಾಶವಾಗುತ್ತಿದೆ. ಭಾರತೀಯ ಸೇನೆ ಪಾಕ್‌ ಮಗ್ಗಲು ಮುರಿಯುತ್ತಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿ, ಇಸ್ಲಾಮಾಬಾದ್ ನಗರಗಳು, ಇನ್ನಿತರ ಊರುಗಳು, ಉಗ್ರರ ಆಶ್ರಯ ತಾಣಗಳ ಮೇಲೆ ಭಾರತ ನಿಖರ ದಾಳಿ ನಡೆಸಿದೆ. ಪಾಪಿಗಳ ರಾಷ್ಟ್ರ ಪಾಕ್‌ ಸರ್ವನಾಶ ಆಗುವವರೆಗೂ ಆಪರೇಷನ್ ಸಿಂದೂರ ನಿಲ್ಲಬಾರದು.

- ನಾಗರಾಜ ಸುರ್ವೆ, ಸಾಮಾಜಿಕ ಕಾರ್ಯಕರ್ತ

(12ಕೆಡಿವಿಜಿ6)

- - -

ಯುದ್ಧದಾಹಿತ್ವ ತೋರಿ ಎರಗಿ ಬಂದ ಭಯೋತ್ಪಾದಕರನ್ನು ಮಣಿಸಲು ಶಸ್ತ್ರ ಕೈಗೆತ್ತಿಕೊಳ್ಳದೇ ಅನ್ಯಮಾರ್ಗವಿಲ್ಲ. ಆದರೂ, ಯುದ್ಧಭೀಷಣತೆ ನೆನೆದರೆ ಮನ ತಲ್ಲಣಿಸುತ್ತದೆ. ಜೀವಗಳು ಅಮೂಲ್ಯ. ಪರಸ್ಪರ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಮನ್ನಣೆ ನೀಡಿ, ರಾಷ್ಟ್ರಗಳ ಸಮಾನತೆ, ಸಹಬಾಳ್ವೆ, ವಿಶ್ವ ಬಂಧುತ್ವಕ್ಕೆ ನಾಂದಿಯಾಗಬೇಕು. ದಯವಿಲ್ಲದ ಧರ್ಮವಾವುದಯ್ಯ ಅಂತಾ ಬಸವಣ್ಣ ಹೇಳಿದ್ದಾರೆ. ಮಾನವತೆಯು ದ್ವೇಷ ಮತ್ತು ಸಂಘರ್ಷದಿಂದ ಮುಕ್ತವಾಗಿರಬೇಕು.

- ಡಾ.ಪಿ.ವೀಣಾ, ಉಪನ್ಯಾಸಕಿ, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ದಾವಣಗೆರೆ.

(-12ಕೆಡಿವಿಜಿ7)

- - -

ಭಾರತ ಮತ್ತು ಪಾಕಿಸ್ತಾನ ನಡುವಣ ಕದನ ವಿರಾಮ ಘೋಷಣೆಯಾಗಿದೆ‌. ಏಷಿಯಾದ ಪ್ರಬಲ ದೇಶವಾಗಿ ಭಾರತ ಬೆಳೆಯಲು ಈ ಕದನ ವಿರಾಮ ಅನುಕೂಲವಾಗಲಿದೆ. ಗಡಿಯಲ್ಲಿ‌ ಶಾಂತಿ ನೆಲೆಸುವುದರಿಂದ ಭಾರತದ ಷೇರು ಮಾರುಕಟ್ಟೆಗೆ ವಿದೇಶಿ ಹಣದ ಒಳಹರಿವು ಹೆಚ್ಚಾಗಿ ಭಾರತದ ಏಳಿಗೆಗೆ ಅನುಕೂಲವಾಗಲಿದೆ. ನಾವೆಲ್ಲರೂ ಭಾರತದ ಸೇನೆಯ ಶೌರ್ಯಕ್ಕೆ ತಲೆಬಾಗುತ್ತೇವೆ. ಐದಾರು ದಿನಗಳಿಂದ ಪಾಕಿಸ್ತಾನದ ಯೋಗ್ಯತೆ ಏನೆಂಬುದು ಜಾಗತಿಕ ಮಟ್ಟದಲ್ಲಿ ಜಗಜ್ಜಾಹೀರಾಗಿದೆ.

- ಕೆ.ಸೌಮ್ಯ ಗಣೇಶ, ಗೃಹಿಣಿ, ದಾವಣಗೆರೆ

(-12ಕೆಡಿವಿಜಿ8)

- - -

ಭಾರತೀಯ ವೀರಯೋಧರ ಶೌರ್ಯ, ಸಾಹಸ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಉಗ್ರ ತಾಣಗಳ ಮೇಲೆ ಮಾಡಿದ ದಾಳಿಯಿಂದಾಗಿ ಭಾರತದಲ್ಲಿ ತಂಗಾಳಿ ಬೀಸಿದಂತಾಯಿತು. ಭಯೋತ್ಪಾದನೆ ನಾಶವಾಗಿ ಭಾರತೀಯರು ನೆಮ್ಮದಿ ಕಾಣಬೇಕು. ಎಲ್ಲ ಕಾಲಕ್ಕೂ ಶಾಂತಿಮಂತ್ರ ಫಲಿಸದು. ದಂಡ ದಶಗುಣಂ ಎಂಬಂತೆ ಉಗ್ರರ ದಮನಕ್ಕೆ ಯುದ್ಧವಾಗಲೇಬೇಕು. ವೈರಿಗಳ ನಾಶದಿಂದ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಿಂದೂರ ಕಳೆದುಕೊಂಡ ಭಾರತೀಯ ನಾರಿಯರ ಕಣ್ಣೀರನ್ನು ಒಂದಿಷ್ಟು ಒರೆಸಿದಂತಾಗುತ್ತದೆ.

- ಜಿ.ಎಸ್.ಗಾಯತ್ರಿ, ಶಿಕ್ಷಕಿ, ಬಾಪೂಜಿ ಶಾಲೆ, ಹರಿಹರ.

(-12ಕೆಡಿವಿಜಿ9)

- - -

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ಭಾರತದ ತೆಕ್ಕೆಗೆ ಪಡೆಯಲು ಇದೊಂದು ಸುವರ್ಣಾವಕಾಶ. ನಮ್ಮ ವೀರಯೋಧರು ಪಿಒಕೆಯನ್ನು ಮರಳಿ ಪಡೆಯುವ ಮೂಲಕ ಭಾರತೀಯರು ಆ ನೆಲದಲ್ಲಿ ತಲೆಎತ್ತಿ ಓಡಾಡುವಂತೆ ಮಾಡುತ್ತಾರೆಂಬ ಸಂಪೂರ್ಣ ನಂಬಿಕೆ 140 ಕೋಟಿ ಭಾರತೀಯರಲ್ಲಿದೆ. ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಇಂದಿರಾ ಗಾಂಧಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದರು. ಪ್ರಧಾನಿ ಮೋದಿ ಅವರಿಗೂ ಅಂಥ ಅವಕಾಶ ಈಗ ಲಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕದನ ವಿರಾಮ, ಶಾಂತಿ ಮಾತುಕತೆ ಸರಿಯಲ್ಲ. ಯಾವುದೇ ಕಾರಣಕ್ಕೂ ಆಪರೇಷನ್ ಸಿಂದೂರ ನಿಲ್ಲಬಾರದು. ನಮ್ಮ ಸೇನೆಗೆ ಮುಕ್ತ ಅಧಿಕಾರ ನೀಡಿ, ಪಾಕ್ ಸರ್ವನಾಶ ಮಾಡಲಿ.

-ಮಲ್ಲಿಕಾರ್ಜುನ ಇಂಗಾಳೇಶ್ವರ, ಸಾಮಾಜಿಕ ಕಾರ್ಯಕರ್ತ

(-12ಕೆಡಿವಿಜಿ10)

- - -

ಕೇವಲ ನಾಲ್ಕೈದು ದಿನಗಳ ದಾಳಿಯಿಂದ ಕಂಗಾಲಾಗಿರುವ ಪಾಕಿಸ್ತಾನಕ್ಕೆ ಅಮಾಯಕರ ಪ್ರಾಣಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ಭಾರತ ತಿಳಿಸಿಕೊಟ್ಟಿದೆ. ಭಾರತದ ಯೋಧರ ಏಟಿಗೆಗೆ ಪ್ರತ್ಯುತ್ತರ ನೀಡಲಾಗದ ಹೇಡಿ ಪಾಕಿಸ್ತಾನ ಕದನ ವಿರಾಮವೆಂದು ಅಮೆರಿಕಾ ಅಧ್ಯಕ್ಷರಿಂದ ಹೇಳಿಸಿ, ರಾತ್ರೋರಾತ್ರಿ ಮತ್ತೆ ಗುಂಡು ಹಾರಿಸಿ, ತಾನು ನಂಬಿಕೆಗೆ ಅರ್ಹವಲ್ಲದ ದೇಶ ಎಂಬುದನ್ನು ಸಾಬೀತುಪಡಿಸಿದೆ. ನಮ್ಮೆಲ್ಲಾ ಸೇನೆಗಳಿಗೆ, ಯೋಧರಿಗೆ ದೊಡ್ಡ ಸಲಾಂ. ನರಿಬುದ್ಧಿಯ ಪಾಕಿಸ್ತಾನಕ್ಕೆ ಇಷ್ಟಕ್ಕೆ ಬಿಡಬಾರದು. ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ್ ಮುಂದುವರಿಯಲಿ.

- ಡಿ.ಎನ್.ಶಾಂಭವಿ, ಅಧ್ಯಕ್ಷ, ಹರಿಹರ ತಾಲೂಕು ಕಾನಿಪಸಂ,

(-12ಕೆಡಿವಿಜಿ11)

- - -

ವಿಶ್ವಕ್ಕೆ ಪಾಕಿಸ್ತಾನದ ನರಿಬುದ್ಧಿ ತೋರಿಸುವ ಸಲುವಾಗಿ ಸದ್ಯಕ್ಕೆ ಭಾರತ ಕದನ ವಿರಾಮ ಘೋಷಣೆಗೆ ಒಪ್ಪಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನ ರಾತ್ರೋರಾತ್ರಿ ದಾಳಿ ಸಹ ಮಾಡಿ, ಭಾರತದಿಂದ ಬೆಂಕಿಯುಂಡೆ ಬೀಳುತ್ತಿದ್ದಂತೆ ಬಾಲ ಮುದುರಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಕದನ ವಿರಾಮದ ವೇಳೆ ಪಾಕಿಸ್ತಾನದಿಂದ ಒಂದೇ ಒಂದು ಗುಂಡು ಬಿದ್ದರೂ, ಅದನ್ನು ಯುದ್ಧ ಘೋಷಿಸಿದಂತೆಯೇ ಎಂಬುದಾಗಿ ಪರಿಗಣಿಸುವುದಾಗಿ, ಒಂದು ಗುಂಡು ಹಾರಿ ಬಂದರೂ ಇತ್ತಲಿಂದ ಬಾಂಬ್ ಸಿಡಿಯುತ್ತವೆಂಬ ಎಚ್ಚರಿಕೆ ನೀಡಿದ್ದಾರೆ.

- ಗಿರೀಶ ಎಸ್.ದೇವರಮನಿ, ಅಧ್ಯಕ್ಷ, ಪರಿಸರ ಸಂರಕ್ಷಣಾ ವೇದಿಕೆ

(12ಕೆಡಿವಿಜಿ12)

- - -

ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ನಡೆಗೆ ವಿಶ್ವದ ಎಲ್ಲ ದೇಶಗಳೂ ವಿರೋಧಿಸುತ್ತಿವೆ. ಉಗ್ರರ ನಿಗ್ರಹಕ್ಕೆ ಪಣತೊಟ್ಟಿರುವ ಭಾರತದ ನಿಲುವಿಗೆ ಬಹುತೇಕ ಎಲ್ಲ ದೇಶಗಳೂ ಬೆಂಬಲಿಸುತ್ತಿವೆ. ನಮ್ಮ ಸಮರ್ಥ ಸೇನೆಗಳು, ವೀರಯೋಧರು ಶತ್ರುರಾಷ್ಟ್ರ ಪಾಕಿಸ್ತಾನವನ್ನು ಸಂಪೂರ್ಣ ಸದೆಬಡಿಯುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಆಪರೇಷನ್ ಸಿಂದೂರ ಅರ್ಧಕ್ಕೆ ನಿಲ್ಲಬಾರದು. ಕದನ ವಿರಾಮದ ನೆಪದಲ್ಲಿ ಬೀಸೋ ದೊಣ್ಣೆಯಿಂದ ಪಾಕಿಸ್ತಾನ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಬಿಡಬಾರದು.

- ಎ.ಜೆ.ರವಿಕುಮಾರ, ಜಿಲ್ಲಾಧ್ಯಕ್ಷ, ರಾಜ್ಯ ಅಸಂಘಟಿಕ ಕಾರ್ಮಿಕರ ಸಂಘ.

(-12ಕೆಡಿವಿಜಿ13)

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಗಕ್ಕೆ ವಿಶ್ವಪ್ರಸಿದ್ಧಿ ಪಡೆದ ಧರ್ಮರಾಯ ದೇಗುಲ ಚಿನ್ನ ಕಳವು
ಸಿ.ಟಿ.ರವಿ ‘ಪಾಕ್‌ ನಾಲಿಗೆ’ ಹೇಳಿಕೆಗೆ ಸದನವೇ ಬಲಿ