ಕೆಂಪೇಗೌಡರು, ನಾಡಿನ ಅಸ್ಮಿತೆಯ ಸಂಕೇತ: ಶಾಸಕ ಎಚ್‌.ಡಿ.ತಮ್ಮಯ್ಯ

KannadaprabhaNewsNetwork |  
Published : Jun 28, 2026, 02:15 AM IST
ಸಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುನಾಡಪ್ರಭು ಕೆಂಪೇಗೌಡರ ಜಯಂತಿ ಕೇವಲ ಒಬ್ಬ ವ್ಯಕ್ತಿಯ ಸ್ಮರಣೆಯಲ್ಲ. ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ ಹಾಗೂ ಐತಿಹಾಸಿಕ ಹೆಮ್ಮೆಯ ಸಂಕೇತವಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಾಡಪ್ರಭು ಕೆಂಪೇಗೌಡರ ಜಯಂತಿ ಕೇವಲ ಒಬ್ಬ ವ್ಯಕ್ತಿಯ ಸ್ಮರಣೆಯಲ್ಲ. ಅದು ನಮ್ಮ ನಾಡಿನ ಅಸ್ಮಿತೆ, ಸಂಸ್ಕೃತಿ ಹಾಗೂ ಐತಿಹಾಸಿಕ ಹೆಮ್ಮೆಯ ಸಂಕೇತವಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಕೆಂಪೇಗೌಡರು ಕೇವಲ ಒಬ್ಬ ಸಾಮಂತ ರಾಜರಾಗಿರಲಿಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಕಾಲದಲ್ಲಿ ಯಲಹಂಕ ನಾಡನ್ನು ಆಳುವಾಗ ಇಡೀ ರಾಜ್ಯವನ್ನಾಳುವ ಮಹಾರಾಜರಿಗಿಂತಲೂ ಮಿಗಿಲಾದ ವಿಶಾಲ ದೂರದೃಷ್ಟಿ ಮತ್ತು ಕನಸುಗಳನ್ನು ಹೊಂದಿದ್ದರು. ಧರ್ಮನಿಷ್ಠ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸುಧಾರಣೆ ಮೂಲಕ ಜಾತಿ-ಮತ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡ ಮಹಾನ್ ನಾಯಕ ಎಂದರು.

1537ರಲ್ಲಿ ಬೆಂಗಳೂರು ಒಂದು ಸಣ್ಣ ಪಟ್ಟಣವಾಗಿ ರೂಪುಗೊಳ್ಳುತ್ತಿದ್ದ ಕಾಲದಲ್ಲೇ ಕೆಂಪೇಗೌಡರು ನಗರದ ನಾಲ್ಕೂ ದಿಕ್ಕು ಗಳಲ್ಲಿ ಗಡಿಗೋಪುರಗಳನ್ನು ನಿರ್ಮಿಸಿ ಭವಿಷ್ಯದ ನಗರದ ವ್ಯಾಪ್ತಿಯನ್ನು ಅಂದಾಜಿಸಿದ್ದರು. ಅಂದಿನ ಅವರ ಪುರಸಭಾ ಮಾದರಿ ಆಡಳಿತ ಇಂದು ಜಗತ್ತೇ ಮೆಚ್ಚುವ ಮಹಾನಗರಕ್ಕೆ ಅಡಿಪಾಯವಾಗಿದೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಗುರುತಿಸಿಕೊಂಡಿರುವ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ‘ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'''''''' ಎಂದು ನಾಮಕರಣ ಮಾಡಿರುವುದೇ ಅವರ ಸಾಧನೆಗೆ ಹಿಡಿದ ಕೈಗನ್ನಡಿ ಎಂದು ತಿಳಿಸಿದರು. ಕೆಂಪೇಗೌಡರು ಅಂದಿನ ಕಾಲದಲ್ಲೇ ಪರಿಸರ ಹಾಗೂ ಜಲಸಂರಕ್ಷಣೆಗೆ ಆಪಾರ ಒತ್ತು ನೀಡಿದ್ದರು. ಬೆಂಗಳೂರಿನ ನಿರ್ಮಾಣದ ಸಂದರ್ಭದಲ್ಲಿ ಅವರು ನಿರ್ಮಿಸಿದ ನೂರಾರು ಕೆರೆಗಳು ಮತ್ತು ನೀರಿನ ಮೂಲಗಳು ಅವರ ಪರಿಸರ ಪ್ರೇಮ ಹಾಗೂ ದೂರದೃಷ್ಟಿಗೆ ಸಾಕ್ಷಿ. ಕೆಂಪೇಗೌಡರ ಆಡಳಿತದಲ್ಲಿ ಜಾತಿ-ಧರ್ಮದ ಭೇದವಿರಲಿಲ್ಲ. ಅವರು ಎಲ್ಲ ಧರ್ಮಗಳ ದೇವಸ್ಥಾನ ಗಳನ್ನು ನಿರ್ಮಿಸಿ ಸಮಗ್ರತೆ ಕಾಪಾಡಿದರು. ಅವರು ಕೇವಲ ಕೋಟೆ-ಕೆರೆಗಳನ್ನು ಕಟ್ಟಲಿಲ್ಲ, ಜನರ ವಿಶ್ವಾಸದ ಮೇಲೆ ನಾಡನ್ನು ಕಟ್ಟಿದರು. ಮಾತನಾಡುವುದಕ್ಕಿಂತ ಹೆಚ್ಚಾಗಿ ಕೆಲಸ ಮಾಡುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದರು.

ಕೇಂದ್ರ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ರಾಜ್ಯ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಇಡೀ ಪ್ರಪಂಚವೇ ಹೆಮ್ಮೆ ಪಡುವಂತಹ ಮತ್ತು ಎಲ್ಲರ ಕಣ್ಣು ಸೆಳೆಯುವಂತಹ ಸುಂದರ ಬೆಂಗಳೂರು ನಗರ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇ ಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಬೆಂಗಳೂರನ್ನು ನಿರ್ಮಿಸುವಾಗ ಕೆಂಪೇಗೌಡರು ಸಮಾಜದ ಎಲ್ಲಾ ವರ್ಗದವರನ್ನು ಸಮಷ್ಟಿಯಾಗಿ ಒಳಗೊಂಡಿದ್ದರು. ಜನರ ಕಸುಬು ಮತ್ತು ಜಾತಿಗೆ ಅನುಗುಣವಾಗಿ ಚಿಕ್ಕಪೇಟೆ, ಬಳೇಪೇಟೆ, ಕುರುಬರಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ ಸೇರಿ ದಂತೆ ಒಟ್ಟು 66 ವಿವಿಧ ಪೇಟೆಗಳನ್ನು ನಿರ್ಮಿಸಿದರು ಎಂದು ಹೇಳಿದರು.

ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಮಾತನಾಡಿ ಕೆಂಪೇಗೌಡರು ಅಂದಿನ ಕಾಲದಲ್ಲೇ ತಂತ್ರಜ್ಞಾನ ಹಾಗೂ ಸಮರ್ಥ ಆಡಳಿತದ ಮೂಲಕ ಒಂದು ಸುಂದರ ನಗರದ ಕನಸಿಗೆ ಜೀವ ತುಂಬಿದ್ದರು. ‘ಇಂದು ಜಾಗತಿಕ ಮಟ್ಟದಲ್ಲಿ ಬೆಂಗಳೂರು ''''''''ಸಿಲಿಕಾನ್ ವ್ಯಾಲಿ'''''''' ಹಾಗೂ ಪ್ರಮುಖ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಅಂದೇ ಕೆಂಪೇ ಗೌಡರು ಹಾಕಿದ ಭದ್ರ ಬುನಾದಿಯೇ ಕಾರಣ ಎಂದರು.

ಕೆಂಪೇಗೌಡರ ಜೀವನ ಮತ್ತು ಸಾಧನೆ ಕುರಿತು ದೀಪ ಹಿರೇಗುತ್ತಿ ಉಪನ್ಯಾಸ ನೀಡಿದರು. ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಉಪಾಧ್ಯಕ್ಷೆ ಲಲಿತಾ ರವಿನಾಯ್ಕ್, ಕೃಷಿ ಉತ್ಪನ್ನ ಸಂಸ್ಕರಣಾ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎನ್.ಹರೀಶ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಂಜೇಗೌಡ, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್.ಪ್ರದೀಪ್, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷ ರೀನಾ ಸುಚೇಂದ್ರ ಇದ್ದರು.---ಕೋಟ್‌--

ನಾಡಪ್ರಭು ಕೆಂಪೇಗೌಡ ಜಯಂತಿ ಅದ್ಧೂರಿ ಆಚರಣೆಗಾಗಿ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಪ್ರತಿ ವರ್ಷ ತಲಾ ₹5 ಲಕ್ಷ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಕೆಂಪೇಗೌಡರ ಭವ್ಯ ಪ್ರತಿಮೆ ಸ್ಥಾಪಿಸಬೇಕು

-ಟಿ.ರಾಜಶೇಖರ್, ಅಧ್ಯಕ್ಷ, ಜಿಲ್ಲಾ ಒಕ್ಕಲಿಗರ ಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ
ನಾಡಪ್ರಭುಗಳಿಂದ ಸಣ್ಣ ಸಮುದಾಯಗಳ ಏಳಿಗೆ