ಕನ್ನಡಪ್ರಭ ವಾರ್ತೆ ನಾಗಮಂಗಲ
ನಾಡಪ್ರಭು ಕೆಂಪೇಗೌಡರ ಅನನ್ಯ ದೂರದೃಷ್ಟಿಯಿಂದಾಗಿ ವಿದೇಶಿಗರೂ ಸಹ ಬೆಂಗಳೂರಿನತ್ತ ತಿರುಗಿ ನೋಡುವಂತಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಸಹ ಪ್ರಾಧ್ಯಾಪಕ ಡಾ.ಎನ್.ಜಿ.ಪ್ರಕಾಶ್ ಅಭಿಪ್ರಾಯಪಟ್ಟರು.ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ವಿಭಾಗದ ಸಹಯೋಗದೊಂದಿಗೆ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವದ ಪ್ರಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ಒಬ್ಬ ರಾಜನಷ್ಟೆ ಅಲ್ಲ. ಅವರೊಬ್ಬ ರೈತ ಕೈಗಾರಿಕೋದ್ಯಮಿ, ಎಂಜಿನಿಯರ್, ಜ್ಞಾನಿ ದಾರ್ಶನಿಕ ಸಾರ್ವಭೌಮ ಹೀಗೆ ಊಹೆಗೂ ನಿಲುಕದ ವ್ಯಕ್ತಿತ್ವ ಉಳ್ಳವರು. ಆಂಧ್ರ ಮತ್ತು ತಮಿಳುನಾಡಿನವರು ಕೆಂಪೇಗೌಡರನ್ನು ನಮ್ಮವರು ಎನ್ನುತ್ತಾರೆ. ಆದರೆ, ಮೂಲತಃ ಕೆಂಪೇಗೌಡರು ಕನ್ನಡಿಗರು. ಜಾತಿ ಆಧಾರಿತ ಪೇಟೆಗಳನ್ನು ಕಟ್ಟಲಿಲ್ಲ ವೃತ್ತಿ ಆಧಾರಿತ ಪೇಟೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್, ಆರಕ್ಷಕ ವೃತ್ತ ನಿರೀಕ್ಷಕ ಕೆ.ಎಸ್.ನಿರಂಜನ್ , ಪ್ರಾಂಶುಪಾಲ ಡಾ.ಎಚ್.ಎಸ್. ರವೀಂದ್ರ ಮಾತನಾಡಿ, ಬೇರೆಯವರಿಗೆ ಉತ್ತೇಜಿಸುವ ರೀತಿಯಲ್ಲಿ ನಮ್ಮ ವ್ಯಕ್ಯಿತ್ವ ಅನಾವರಣಗೊಳ್ಳಬೇಕು. ನಾವು ಕೆಂಪೇಗೌಡರಂತೆ ಪಟ್ಟಣ ಕಟ್ಟಲಾಗುವುದಿಲ್ಲ. ಆದರೆ, ಅಂತವರ ಬದುಕಿನ ಆದರ್ಶ ನಮ್ಮ ಬದುಕನ್ನು ಉತ್ತಮವಾಗಿ ನಿರ್ಮಿಸಬಲ್ಲದು ಎಂದರು.
ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಸ್‌ಬಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಿ.ಎಚ್.ಚೇತನ್ ಪ್ರಥಮ, ನಾಗಮಂಗಲ ಬಿಜಿಎಸ್ ಪದವಿಪೂರ್ವ ಕಾಲೇಜಿನ ಜೆ.ಶಶಾಂಕ್‌ಗೌಡ ದ್ವಿತೀಯ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೆ.ಎಸ್.ರಂಗನಾಥ ತೃತೀಯ ಬಹುಮಾನಕ್ಕೆ ಭಾಜನರಾದರು.ವಿಜೇತ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಅನುಕ್ರಮವಾಗಿ 1000, 750 ಹಾಗೂ 500 ರು. ನಗದು ನೀಡಿ ಗೌರವಿಸಲಾಯಿತು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಎಂ.ಗುಣವತಿ, ಇತಿಹಾಸ ವಿಭಾಗದ ಮುಖ್ಯಸ್ಥೆ ಎ.ಬಿ.ಪವಿತ್ರ, ಭೂಗೋಳ ವಿಭಾಗದ ಮುಖ್ಯಸ್ಥ ಹಾಗೂ ಐಕ್ಯೂ ಎಸಿ ಸಂಯೋಜಕ ಡಾ.ಎಂ.ರವಿಕುಮಾರ್ ಸೇರಿದಂತೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.