ನೌಕಾನೆಲೆ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ: ರಿತೀಶ್‌ ಕುಮಾರ್‌ ಸಿಂಗ್‌

KannadaprabhaNewsNetwork | Published : Jun 28, 2024 12:46 AM

ಸಾರಾಂಶ

ನೌಕಾನೆಲೆಯ ಕಾರಣದಿಂದ ಭೂಮಿ ಕಳೆದುಕೊಂಡಿರುವ 158 ಕುಟುಂಬಗಳಲ್ಲಿ ವಿವಿಧ ಕಾರಣಗಳಿಂದ ಇದುವರೆಗೆ ಪರಿಹಾರ ದೊರೆಯದ ಕುಟುಂಬಗಳಿಗೆ ಸಂಬಂಧಿಸಿದಂತೆ 1 ತಿಂಗಳ ಒಳಗೆ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ಪರಿಹಾರ ದೊರೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ರಿತೀಶ್‌ ಕುಮಾರ್‌ ಸಿಂಗ್‌ ಸೂಚನೆ ನೀಡಿದರು.

ಕಾರವಾರ: ಸೀಬರ್ಡ್ ನೌಕಾನೆಲೆ ಉದ್ದೇಶಕ್ಕಾಗಿ ಎನ್.ಕೆ. ಬೈಲು(ನೆಲ್ಲೂರು ಕಂಚಿನಬೈಲು)ನಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ 58.11 ಎಕರೆಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಇದುವರೆಗೆ ಪರಿಹಾರ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಎಲ್ಲ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ದೊರಕಿಸಲು ತಾವೇ ದೆಹಲಿಯ ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸೀಬರ್ಡ್ ಯೋಜನೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಕೆ. ಬೈಲು ಸಂತ್ರಸ್ತರಿಗೆ ಇದುವರೆಗೂ ಪರಿಹಾರ ದೊರೆತಿಲ್ಲ. ಅಲ್ಲದೇ ಈ ಭೂಮಿಯಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡಲು ಸಹ ಅನುಮತಿ ನೀಡುತ್ತಿಲ್ಲ. ಈ ಭೂಮಿಗೆ ಈಗಾಗಲೇ ₹18.91 ಕೋಟಿ ಪರಿಹಾರದ ಮೊತ್ತವನ್ನು ಬಿಡುಗಡೆಗೊಳಿಸುವಂತೆ ಬೆಂಗಳೂರಿನ ಡಿಫೆನ್ಸ್ ಎಸ್ಟೆಟ್ ಅಧಿಕಾರಿಗಳೊಂದಿಗೆ ಹಲವು ಪತ್ರ ಬರೆದರೂ ಯಾವುದೇ ಪ್ರಗತಿಯಾಗಿಲ್ಲ ಎನ್ನುವ ಬಗ್ಗೆ ತಿಳಿದುಕೊಂಡರು.

ಈ ವಿಷಯದ ಕುರಿತಂತೆ ಬೆಂಗಳೂರಿನಲ್ಲಿರುವ ಡಿಫೆನ್ಸ್ ಎಸ್ಟೆಟ್ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಈ ಕುರಿತಂತೆ ಪ್ರಸ್ತಾವನೆಯು ದೆಹಲಿಯ ರಕ್ಷಣಾ ಸಚಿವಾಲದಯಲ್ಲಿ ಬಾಕಿ ಇರುವ ಬಗ್ಗೆ ತಿಳಿದು, ರಕ್ಷಣಾ ಇಲಾಖೆಯೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳನ್ನು ಪ್ರತಿಯನ್ನು ತಮಗೆ ನೀಡುವಂತೆ ಹಾಗೂ ಈ ಪ್ರಕರಣದ ಬಗ್ಗೆ ತಾವೇ ಖುದ್ದು ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ನೌಕಾನೆಲೆಯ ಕಾರಣದಿಂದ ಭೂಮಿ ಕಳೆದುಕೊಂಡಿರುವ 158 ಕುಟುಂಬಗಳಲ್ಲಿ ವಿವಿಧ ಕಾರಣಗಳಿಂದ ಇದುವರೆಗೆ ಪರಿಹಾರ ದೊರೆಯದ ಕುಟುಂಬಗಳಿಗೆ ಸಂಬಂಧಿಸಿದಂತೆ 1 ತಿಂಗಳ ಒಳಗೆ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ಪರಿಹಾರ ದೊರೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಇದೇ ವೇಳೆ ಮುದಗಾದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಅಣೆಕಟ್ಟುನಿಂದಾಗಿ ಮಳೆಗಾಲದಲ್ಲಿ ನೌಕಾನೆಲೆಯೊಳಗೆ ನೀರು ನುಗ್ಗುತ್ತಿರುವ ಬಗ್ಗೆ ರಕ್ಷಣಾ ಇಲಾಖೆಯಿಂದ ಬರುತ್ತಿರುವ ದೂರುಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕೋಸ್ಟ್ ಗಾರ್ಡ್ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ವಾಹನಗಳ ಸಂಚಾರಕ್ಕೆ ರಸ್ತೆ ಸಂಪರ್ಕದ ಸಮಸ್ಯೆಯಿರುವ ಬಗ್ಗೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಜಿಲ್ಲಾಡಳಿದೊಂದಿಗೆ ಚರ್ಚಿಸಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಬ್ಲಾಕ್ ಸ್ಟಾಟ್‌ಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಪಘಾತಗಳನ್ನು ನಿಯಂತ್ರಿಸುವಂತೆ ಮತ್ತು ಹೆದ್ದಾರಿಯಲ್ಲಿ ಬೀದಿದೀಪಗಳನ್ನು ಅಳವಡಿಸುವಂತೆ ಐಆರ್‌ಬಿ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಉಪವಿಭಾಗಾಧಿಕಾರಿಗಳಾದ ಕನಿಷ್ಠ, ಕಲ್ಯಾಣಿ ಕಾಂಬ್ಳೆ, ನೌಕಾದಳ ಮತ್ತು ಕೋಸ್ಟ್ ಗಾರ್ಡ್‌ನ ಅಧಿಕಾರಿಗಳು ಮತ್ತಿತರರು ಇದ್ದರು.

Share this article