ಕೆಂಪೇಗೌಡರ ಬೆಂಗಳೂರಿಗೆ ಎಲ್ಲಾ ಜಾತಿ,ಧರ್ಮದವರಿಗೂ ಸ್ಥಾನ: ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ

KannadaprabhaNewsNetwork |  
Published : Jun 28, 2025, 12:26 AM IST
೨೭ಶಿರಾ೧: ಶಿರಾ ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ರವರ ೫೧೬ನೇ ಜನ್ಮ ಜಯಂತಿ ಪ್ರಯುಕ್ತ ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ನಾಡಪ್ರಭು ಕೆಂಪೇಗೌಡರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಿದರು. | Kannada Prabha

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ೧೫೩೭ರಲ್ಲೇ ನಗರವನ್ನು ಕಟ್ಟಿದರು. ತದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬುದು ಅವರ ಮಹದಾಸೆಯಾಗಿತ್ತು. ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾ ಕುಲ ಕಸುಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು .

ಕನ್ನಡಪ್ರಭ ವಾರ್ತೆ ಶಿರಾ

ಬೆಂಗಳೂರು ಕಟ್ಟಿ ಆಧುನಿಕ ಭವಿಷ್ಯಕ್ಕೆ ನಾಂದಿ ಹಾಡಿದ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಬದ್ಧತೆ, ನಿಷ್ಠೆ ಹಾಗೂ ಜನಾನುರಾಗಿ ಕಾರ್ಯಗಳನ್ನು ಸ್ಮರಿಸೋಣ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.

ತಾಲೂಕಿನ ಚಿಕ್ಕಹುಲಿಕುಂಟೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತಿ ಪ್ರಯುಕ್ತ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ೧೫೩೭ರಲ್ಲೇ ನಗರವನ್ನು ಕಟ್ಟಿದರು. ತದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕೆಂಬುದು ಅವರ ಮಹದಾಸೆಯಾಗಿತ್ತು. ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾ ಕುಲ ಕಸುಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು, ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಟ್ಟಿದ್ದರು ಎಂದು ಹೇಳಿದರು.

ಬೆಂಗಳೂರು ಕೆಂಪೇಗೌಡರ ಕಾಲದಲ್ಲೂ ವಾಣಿಜ್ಯ ಕೇಂದ್ರವಾಗಿತ್ತು. ವೃತ್ತಿಯ ಹೆಸರಿನಲ್ಲಿ ೫೪ ಪೇಟೆಗಳನ್ನು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಅರಳೇಪೇಟೆ, ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ, ಮಂಡಿ ಪೇಟೆ, ಬಳೇಪೇಟೆ, ಅಂಚೆಪೇಟೆ, ಹಳೇತರುಗುಪೇಟೆ, ಹೊಸತರುಗುಪೇಟೆ, ಸುಣಕಲ್‌ ಪೇಟೆ, ಕುರುಬರಪೇಟೆ, ಕುಂಚಟಿಗರ ಪೇಟೆ, ಮುತ್ಯಾಲಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಹತ್ತಿಪೇಟೆ, ತಾರಾಮಂಡಲಪೇಟೆ, ದರ್ಜಿಪೇಟೆ, ಕಲಾರಪೇಟೆ, ಮೇದಾರಪೇಟೆ, ಹಳೆ ಪಟ್ನೂಲು ಪೇಟೆಗಳು ನಗರದ ಜೀವನಾಡಿಯಾಗಿದ್ದವು ಎಂದು ತಿಳಿಸಿದರು. ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುದಿ ಕೆರೆ, ಕೆಂಪಾಂಬುದಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ- ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಕೆಂಪೇಗೌಡರು ಹಲವಾರು ದೇವಸ್ಥಾನಗಳನ್ನು ನಿರ್ಮಿಸಿದರು. ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯಗಳನ್ನು ನಿರ್ಮಿಸಿ, ಅವರಿಗೆ ದೇವರ ಮೇಲಿದ್ದ ಭಕ್ತಿಯನ್ನು ತೋರ್ಪಡಿಸಿದ್ದರು ಎಂದರು.

ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ ಎಂದರು.

ಮುಖಂಡರಾದ ಹಲಗುಂಡೆಗೌಡ, ಕೆಂಪೇಗೌಡ ಯುವಕ ಸಂಘದ ನಟರಾಜ, ದಯಾನಂದಗೌಡ, ರವಿಕುಮಾರ್, ಲಕ್ಷ್ಮಣ್, ಮಂಜುನಾಥ್, ಸಿದ್ದೇಶ್ವರಪ್ಪ, ಗೋವಿಂದರಾಜು, ಈರಣ್ಣ, ಅರುಣ್ ಕುಮಾರ್, ಪುನೀತ್ ಸೇರಿ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ