ಕೆಂಪೇಗೌಡ ದೂರದೃಷ್ಟಿ ಆಡಳಿತಗಾರ: ಶಾಸಕ ಪಿ.ರವಿಕುಮಾರ್‌

KannadaprabhaNewsNetwork |  
Published : Jul 01, 2026, 01:30 AM IST
30ಕೆಎಂಎನ್‌ಡಿ-9ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್‌ ಉದ್ಘಾಟಿಸಿದರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಡಾ.ಕುಮಾರ, ಡಾ.ವಿ.ಜೆ.ಶೋಭಾರಾಣಿ ಇತರರಿದ್ದರು. | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಲಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮಂಡ್ಯವನ್ನು ಹೊಸ ನಗರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯುಳ್ಳ ಆಡಳಿತಗಾರ. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಉತ್ತಮ ನಗರವಾಗಿ ಬೆಳವಣಿಗೆ ಕಂಡಿತು ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ಎಲ್ಲ ಸಮುದಾಯದವರಿಗೂ ಒಂದೊಂದು ಪೇಟೆ ನಿರ್ಮಿಸಿಕೊಟ್ಟು ಸಾಮಾಜಿಕ ನ್ಯಾಯ ಒದಗಿಸಿದರು. ಅವರ ತತ್ವ ಆದರ್ಶಗಳು ಹಾಗೂ ಅವರ ಸಾಧನೆಗಳು ಆಡಳಿತ ನಡೆಸುವವರಿಗೆ ಮಾದರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡುವುದು ನನ್ನ ಬಹು ದೊಡ್ಡ ಕನಸು. ಅದಕ್ಕಾಗಿ 2 ಕೋಟಿ ರು. ಅನುಧಾನ ಬಿಡುಗಡೆಯಾಗಿದೆ. ಕೇವಲ 6 ತಿಂಗಳಲ್ಲಿ ಉದ್ಘಾಟನೆ ಮಾಡುವ ಆಶಯ ವ್ಯಕ್ತಪಡಿಸಿದರು.

ಜಿಲ್ಲೆಯ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಲಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮಂಡ್ಯವನ್ನು ಹೊಸ ನಗರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಾಧನೆ, ಕೊಡುಗೆಗಳು ಇನ್ನು ಜೀವಂತವಾಗಿವೆ.

ಕೆಂಪೇಗೌಡರ ಆದರ್ಶ, ತತ್ವಗಳು, ಸಾಧನೆ ಮತ್ತು ಕೊಡುಗೆಗಳನ್ನು ಸ್ಮರಿಸಬೇಕು. ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಅವರ ಆದರ್ಶಗಳನ್ನು ತಿಳಿಸಬೇಕು ಎಂದರು.

ಬೆಂಗಳೂರು ನಗರದಲ್ಲಿ ಉದ್ಯಾನವನ ನಿರ್ಮಿಸಿ ಹಸಿರಿನಿಂದ ಕೂಡಿದ ನಗರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಾಗೂ ನೀರಿನ ಕೊರತೆಯನ್ನು ನಿವಾರಿಸಲು ಅನೇಕ ಕೆರೆಗಳನ್ನು ನಿರ್ಮಿಸಿ ಕೃಷಿ ಮತ್ತು ಜನಜೀವನಕ್ಕೆ ಅನುಕೂಲ ಮಾಡಿಕೊಟ್ಟರು ಅವರು ಎಂದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಬೆಂಗಳೂರಿನ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡರು ಬೃಹತ್ ಬೆಂಗಳೂರು ನಿರ್ಮಾಣ ಮಾಡುವಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ನಗರವನ್ನು ಸ್ಥಾಪಿಸಿದವರು. ಅವರು ಉತ್ತಮ ಆಡಳಿತಗಾರ ಹಾಗೂ ಜನಪರ ಚಿಂತಕರು ಮತ್ತು ಸಮರ್ಥ ನಾಯಕರಾಗಿದ್ದರು ಎಂದು ತಿಳಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಯಲಹಂಕವನ್ನು ಆಳಿದ ಪ್ರಸಿದ್ಧ ನಾಯಕರು. ಇವರ ದೂರದೃಷ್ಟಿಯ ಆಡಳಿತದಿಂದ ಬೆಂಗಳೂರಿನ ಬೆಳವಣಿಗೆ ಸಾಧ್ಯವಾಯಿತು. ಬೆಂಗಳೂರು ನಗರದ ಸಂಸ್ಥಾಪಕರಾಗಿ ಸುಂದರ ನಗರವನ್ನು ಕಟ್ಟಿದರು. ವಿವಿಧ ಸಮುದಾಯದ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ವಿಶೇಷ ಪೇಟೆಗಳನ್ನು ಸ್ಥಾಪಿಸಿ ನಗರವನ್ನು ಪ್ರಮುಖ ವಾಣಿಜ್ಯ ಕೇಂದ್ರವನ್ನಾಗಿ ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ವಿ. ನಂದೀಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು: ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ
ಸರ್ಕಾರಿ ಶಾಲೆ ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ ಚಾಲನೆ