ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಮಾತ್ರವಲ್ಲ, ಇಡೀ ವಿಶ್ವಕ್ಕೆ ಪರಿಚಯವಾಗಿರುವ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡ ಅವರದ್ದು ಸರ್ವಶ್ರೇಷ್ಠ ವ್ಯಕ್ತಿತ್ವ. ಕೆಂಪೇಗೌಡರು ದಾರ್ಶನಿಕ, ಅಪ್ರತಿಮ ಹಾಗೂ ದಕ್ಷ ಆಡಳಿತಗಾರರಾಗಿದ್ದರು. ಅವರ ಸ್ಫೂರ್ತಿಯುತ ಜೀವನ ಸಾಧನೆಯನ್ನು ಇಂದು ಎಲ್ಲರು ಅರಿಯಬೇಕಾಗಿದೆ. ಕೆಂಪೇಗೌಡರನ್ನು ಸ್ಮರಿಸುವ ಸಲುವಾಗಿ ೨೦೧೭ರಿಂದ ಸರ್ಕಾರದ ವತಿಯಿಂದ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.ಕುಡಿಯುವ ನೀರು ಹಾಗೂ ಕೃಷಿಗಾಗಿ ಅಂತರ್ಜಲ ವೃದ್ಧಿಯ ದೂರದೃಷ್ಠಿ ಚಿಂತನೆ ಹೊಂದಿದ್ದ ಕೆಂಪೇಗೌಡರು ಬೆಂಗಳೂರಿನಾದ್ಯಂತ ಸಾಕಷ್ಟು ಕೆರೆಗಳನ್ನು ಕಟ್ಟಿಸಿದರು. ರಾಜಕಾಲುವೆಗಳನ್ನು ನಿರ್ಮಿಸಿದರು. ಸಾಮಾಜಿಕ ಸುಧಾರಣೆಗೆ ಹೆಚ್ಚು ಒತ್ತು ನೀಡಿದ್ದ ಕೆಂಪೇಗೌಡರು ಮಹಿಳೆಯರಿಗೆ ಸಮಾನ ಗೌರವಯುತ ಸ್ಥಾನಮಾನ ನೀಡಿದ್ದರು. ಇಂದಿನ ಯುವಜನರು ಕೆಂಪೇಗೌಡರ ಆದರ್ಶವನ್ನು ಅನುಸರಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಅಸಹಾಯಕರಿಗೆ ಸಹಾಯಹಸ್ತ ಚಾಚಬೇಕು ಎಂದು ಅವರು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಮೈಸೂರಿನ ದಕ್ಷಿಣ ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ.ಬಿ.ಸಿ.ವಿಜಯ್‌ಕುಮಾರ್ ಬಲ್ಲೇನಹಳ್ಳಿ ಮಾತನಾಡಿ, ಬದುಕು ಪ್ರದರ್ಶನಕ್ಕಾಗಿ ಅಲ್ಲ, ನಿದರ್ಶನಕ್ಕಾಗಿ. ವಿಲಾಸಕ್ಕಲ್ಲ, ವಿಕಾಸಕ್ಕಾಗಿ ಎಂಬುದನ್ನು ಸಾಧಿಸಿ ತೋರಿಸಿದವರು ನಾಡಪ್ರಭು ಕೇಂಪೇಗೌಡರು. ವಿಜಯನಗರದ ಸಾಮಂತ ರಾಜರಾಗಿದ್ದ ಕೆಂಪೇಗೌಡರು ವಿಜಯನಗರದ ಮಾದರಿಯಲ್ಲಿಯೇ ಬೆಂಗಳೂರನ್ನು ಕಟ್ಟುವ ಆಶಯ ಹೊಂದಿದ್ದರು.
ಪ್ರಜೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕೆಂಪೇಗೌಡರು ಪಟ್ಟಣದ ಅಭ್ಯುದಯಕ್ಕಾಗಿ ೩ ಸಾವಿರ ಕೆರೆಗಳನ್ನು ಕಟ್ಟಿಸಿದರು. ಸಮಾಜಮುಖಿಯಾಗಿದ್ದ ಅವರು ಆಡಳಿತಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಪರಿಕಲ್ಪನೆ ಹೊಂದಿದ್ದರು. ಎಲ್ಲಾ ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಗಳೂರನ್ನು ಕಟ್ಟಿದರು. ಸಿಲಿಕಾನ್ ಸಿಟಿ ಬೆಂಗಳೂರು ಇಂದು ವಿಸ್ತಾರವಾಗಿ ಬೆಳೆಯುತ್ತಿದೆ. ಅವರ ಸಾಮಾಜಿಕ ಪ್ರಜ್ಞೆ, ಸರ್ವಧರ್ಮ ಸಹಿಷ್ಣುತೆ ಇತರೆ ನಾಯಕರಿಗೂ ಆದರ್ಶಪ್ರಾಯವಾಗಿದೆ ಎಂದರು.ಸಮಾಜದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿದರು. ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಜೀವನ ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಜಿಪಂ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ಸಮಾಜದ ಎಲ್ಲಾ ಮುಖಂಡರು, ಕನ್ನಡ ಪರ ಸಂಘಟನೆಗಳ ಮುಖಂಡರು, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ಬೆಳ್ಳಿರಥದಲ್ಲಿ ಅಲಂಕೃತ ಕೆಂಪೇಗೌಡ ಅವರ ಭಾವಚಿತ್ರ ಮೆರವಣಿಗೆಯನ್ನು ವಿವಿಧ ಆಕರ್ಷಕ ಕಲಾತಂಡಗಳೊಂದಿಗೆ ಆಯೋಜಿಸಲಾಗಿತ್ತು.