ಹಾವೇರಿ: ನಾಡಪ್ರಭು ಕೆಂಪೇಗೌಡರು ಮಾಡಿದ ಜನೋಪಯೋಗಿ ಕಾರ್ಯಗಳು ಇಂದಿಗೂ ಜೀವಂತವಾಗಿವೆ.
ಅವರು ಕೈಗೊಂಡ ಜನಪರ ಕಾರ್ಯಗಳು ಇಂದಿಗೂ ಮಾದರಿಯಾಗಿ ನಿಂತಿದೆ ಎಂದು ಉಪನ್ಯಾಸಕ ಮಂಜುನಾಥ ಹತ್ತಿಯವರ ಅಭಿಪ್ರಾಯಪಟ್ಟರು.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಇಷ್ಟೊಂದು ತಂತ್ರಜ್ಞಾನ ಇಲ್ಲದ ಕಾಲದಲ್ಲೂ ಕೆಂಪೇಗೌಡರು ಪ್ರಜೆಗಳ ಅನುಕೂಲಕ್ಕಾಗಿ, ಅವರ ಬದುಕು ಸುಗಮಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಸಾಕರಗೊಳಿಸಿದರು. ಅವರು ನಾಡನ್ನು ಕಟ್ಟಿದ ರೀತಿ ಬೆರಗುಗೊಳಿಸುವಂತದ್ದು. ಪ್ರಜೆಗಳ ಕುರಿತು ಅಪಾರ ಕಾಳಜಿ ಹೊಂದಿದ್ದ ಕೆಂಪೇಗೌಡರು ನೂರಾರು ಕೆರೆಕಟ್ಟೆಗಳನ್ನು, ದೇವಸ್ಥಾನಗಳು, ಕೋಟೆ ಕೊತ್ತಲುಗಳನ್ನು ಕಟ್ಟಿಸಿದರು. ಅರಣ್ಯವನ್ನು ಬೆಳೆಸಿ ಪಶುಪಕ್ಷಿಗಳಿಗೂ ಆಶ್ರಯ ಕಲ್ಪಿಸಿದರು. ಮಳೆ ನೀರಿನಿಂದ ಕೆರೆಕಟ್ಟೆಗಳನ್ನು ತುಂಬಿಸಿ ಅಂತರ್ಜಲವನ್ನು ಹೆಚ್ಚಿಸುವ ಮೂಲಕ ಕೃಷಿ ಚಟುವಟಿಕೆಗೆ ಉತ್ತೇಜನ ನೀಡಿದರು. ಅಂದು ಜನರ ಬದುಕನ್ನು ಕಟ್ಟಿಕೊಟ್ಟ ಕೆಂಪೇಗೌಡರು ಇಂದಿಗೂ ಜನರ ಮನದಲ್ಲಿ ನಾಡಪ್ರಭುವಾಗಿ ಕಂಗೊಳಿಸುತ್ತಿರುವರು ಎಂದರು.
ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಮಾತನಾಡಿ, ಕೆಂಪೇಗೌಡರು ತಮಗೆ ದೊರೆತ ಅಧಿಕಾರವನ್ನು ಜನಪರ ಮತ್ತು ಜೀವಪರ ಕಾರ್ಯಗಳಿಗೆ ಬಳಸಿಕೊಂಡು ಅವರ ಬದುಕು ರೂಪಿಸುವ ಅಭಿವೃದ್ಧಿಗೆ ಒತ್ತು ನೀಡಿದರು. ಇತಿಹಾಸದಲ್ಲಿ ಅನೇಕ ರಾಜರು, ಸಾಮಂತರು, ಮಾಂಡಲೀಕರು, ಪಾಳೇಗಾರರು ಅಧಿಕಾರ ನಡೆಸಿದ್ದಾರೆ. ಆದರೆ ಎಲ್ಲರನ್ನೂ ಸ್ಮರಿಸುವುದಿಲ್ಲ.ಯಾರು ಜನರಿಗಾಗಿ, ಜನರಿಗೋಸ್ಕರ ಆಡಳಿತ ನಡೆಸಿ ಅವರ ಬದುಕನ್ನು ಕಟ್ಟಿಕೊಡಲು ಶ್ರಮಿಸಿರುವರೋ ಅಂತಹ ಮಹನೀಯರನ್ನು ಸದಾಕಾಲ ಸ್ಮರಿಸುತ್ತೇವೆ. ಅಂಥವರಲ್ಲಿ ಕೆಂಪೇಗೌಡರು ಅಗ್ರಗಣ್ಯರು. ಆದ್ದರಿಂದಲೇ ಅವರನ್ನು ''''''''ನಾಡಪ್ರಭು'''''''' ಎಂದು ಕರೆಯುತ್ತೇವೆ. ಇಂದು ನಮ್ಮ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಗರವಾಗಿದೆ. ಈ ನಗರದ ನಿರ್ಮಾಣಕ್ಕೆ ಶ್ರೀಕಾರ ಹಾಕಿದವರೇ ಕೆಂಪೇಗೌಡರು. ಅಂದು ಅವರು ನಿರ್ಮಿಸಿದ ಸುಂದರ ಬೆಂಗಳೂರನ್ನು ಕಾಂಕ್ರೀಟ್ ಕಾಡಾಗಿ ಮಾರ್ಪಡಿಸಿರುವುದು ನೋವಿನ ಸಂಗತಿ. ಕೆಂಪೇಗೌಡರ ಇತಿಹಾಸ ಮತ್ತು ಅವರ ಆಡಳಿತ ವೈಖರಿ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯಬೇಕು ಎಂದು ತಿಳಿಸಿದರು.ಕೆಂಪೇಗೌಡರ ಜಯಂತಿ ನಿಮಿತ್ತ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡಿದ್ದ ಪ್ರಬಂಧ, ಛದ್ಮವೇಷ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಮಂಜುನಾಥ ಹತ್ತಿಯವರನ್ನು ಸತ್ಕರಿಸಲಾಯಿತು.
ಹಿರಿಯ ಉಪನ್ಯಾಸಕ ಎಸ್. ಸಿ. ಮರಡಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರಗೌಡ ಪಾಟೀಲ ಸ್ವಾಗತಿಸಿದರೆ, ಶೇಖರ ಭಜಂತ್ರಿ ನಿರೂಪಿಸಿ, ವಿರುಪಾಕ್ಷಗೌಡ ಪಾಟೀಲ ವಂದಿಸಿದರು.