ಕನ್ನಡಪ್ರಭ ವಾರ್ತೆ ಯಾದಗಿರಿ
ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮದ ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತಗಳಿಗೆ ವಹಿಸಿಕೊಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.ಡಾ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯ ಅನ್ವಯ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವೈದ್ಯರ ವಸತಿ ನಿಲಯ, ಶಾಲಾ ಕೋಣೆ, ಅಂಗನವಾಡಿ, ಗ್ರಂಥಾಲಯ ಕಟ್ಟಡ, ಗ್ರಾಮೀಣ ಸಂಪರ್ಕ ರಸ್ತೆ ಡಾಂಬರೀಕರಣ, ಸಿಸಿ ರಸ್ತೆ, ಶಾಲಾ ಸುತ್ತುಗೋಡೆ ನಿರ್ಮಾಣ ಮೊದಲಾದ ಮಂಡಳಿಯ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಮತ್ತು ಭೂಸೇನಾ ನಿಗಮ ನಿಯಮಿತಗಳ ಮೂಲಕವೇ ಅನುಷ್ಠಾನಗೊಳಿಸುತ್ತಿರುವುದು ಖಂಡನೀಯ ಎಂದು ಹೇಳಿದರು.ಈ ಭಾಗದ ಕೆಲವು ಜನಪ್ರತಿನಿಧಿಗಳು ತಮ್ಮ ಸ್ವಾರ್ಥಕ್ಕೆ ಅನುದಾನ ದುರುಪಯೋಗ ಪಡೆಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ ಬರುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳನ್ನು ಕೇಂದ್ರ ಹಾಗೂ ನಿಗಮಗಳ ಮೂಲಕವೇ ಅನುಷ್ಠಾನಗೊಳಿಸಲು ಮುಂದಾಗಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.ಕೇವಲ ಇವೆರಡು ಇಲಾಖೆಗಳಿಂದ ನೂರಾರು ಕೋಟಿ ಕಾಮಗಾರಿಗಳನ್ನು ಕೈಗೊಳ್ಳಲು ಆಗುವುದಿಲ್ಲ. ಈಗಾಗಲೇ ನಿರ್ಮಿತಿ ಕೇಂದ್ರ ಮತ್ತು ಭೂ ಸೇನಾ ನಿಗಮದ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಮಂಡಳಿಯ ಅನುದಾನದ ಕಾಮಗಾರಿಗಳನ್ನು ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಆಯಾ ಇಲಾಖೆಗಳಿಂದ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.ಈ ಕೂಡಲೇ ಕೆ.ಕೆ.ಆರ್.ಡಿ.ಬಿ. ಇಲಾಖೆಯು ಎಚ್ಚೆತ್ತುಕೊಂಡು ನಿರ್ಮಿತಿ ಕೇಂದ್ರ ಮತ್ತು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತಗಳ ಕೈಬಿಟ್ಟು ಈ ಹಿಂದೆ ಯಾವ ರೀತಿಯಾಗಿ ಎಲ್ಲಾ ಇಲಾಖೆಗಳಿಗೆ ಕಾಮಗಾರಿಗಳನ್ನು ವಹಿಸುತ್ತಿದ್ದಿರೋ ಅದೇರೀತಿ ನಡೆದರೆ ಒಳಿತು. ಇಲ್ಲವಾದಲ್ಲಿ ಕರವೇ ಬಿದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಸಿದ್ದುನಾಯಕ ಹತ್ತಿಕುಣಿ, ಅಂಬರೇಶ ಹತ್ತಿಮನಿ, ಚೌಡಯ್ಯ ಬಾವೂರು, ವೆಂಕಟೇಶ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಬಸವರಾಜ್ ಚನ್ನೂರು, ಅಬ್ದುಲ್ ಹಾದಿಮನಿ ಇತರರಿದ್ದರು.