ಹೊಸಕೋಟೆ: ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಗೆ ಬೆಳಗಾವಿ ಕ್ಷೇತ್ರದ ಯಮಕನಮರಡಿ ಹಾಗೂ ನಿಪ್ಪಾಣಿ ತಾಲೂಕಿನ ಕೆಂದಲಗಾ ಗ್ರಾಪಂ ಸದಸ್ಯರು ಹಾಗೂ ಆಡಳಿತ ಮಂಡಳಿ ಭೇಟಿ ನೀಡಿದ್ದರು.
ತಾವರೆಕೆರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛತೆ ಮತ್ತು ತೆರಿಗೆ ವಸೂಲಾತಿ ಹಾಗೂ ಇನ್ನಿತರ ಕಾರ್ಯವೈಖರಿಗಳ ಬಗ್ಗೆ ಪಂಚಾಯತಿಯ ಕೆಲ ಸ್ಥಳಗಳಿಗೆ ಭೇಟಿ ನೀಡಿ, ವೀಕ್ಷಿಸಿ ಪಂಚಾಯಿತಿ ಅಭಿವೃದ್ಧಿ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಸದಸ್ಯರು ಹಾಗೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಪಿಡಿಒ ಮುನಿಗಂಗಯ್ಯ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿಪಥದಲ್ಲಿ ಸಾಗುತ್ತಿರುವ ಪಂಚಾಯಿತಿಗಳಲ್ಲಿ ಮೊದಲನೇ ಸ್ಥಾನ ತಾವರೆಕೆರೆ ಗ್ರಾಮ ಪಂಚಾಯಿತಿಗೆ ಇದೆ. ಸ್ವಚ್ಛತೆಗೆ ಆದ್ಯತೆ, ಹಾಗೂ ಕಳೆದ ಕೆಲ ತಿಂಗಳುಗಳ ಹಿಂದೆ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಗೌರವ ಸಹ ದೊರಕಿದೆ. ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಶಾಲೆ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಕುಡಿಯಲು ಫಿಲ್ಟರ್ ನೀರಿನ ವ್ಯವಸ್ಥೆ ಮಾಡಲಾಗಿದೆ. ಸರಾಸರಿ ಪಂಚಾಯಿತಿಯ ಆದಾಯ ೩ ಕೋಟಿ ಇದ್ದು ಇದರಲ್ಲಿ 1.25 ಕೋಟಿ ವೋಲ್ವೋ ಕಂಪನಿಯಿಂದ ಹಾಗೂ ಉಳಿದಂತೆ ಗ್ರಾಮಸ್ಥರಿಂದ ಕಂದಾಯದ ಮೂಲಕ ಸಂದಾಯವಾಗಿದೆ. ಕಸ ಸಂಗ್ರಹ ಮಾಡಲು ಪ್ರತಿ ಗ್ರಾಮಕ್ಕೆ ಪಂಚಾಯಿತಿ ಕಡೆಯಿಂದ ವಾಹನ ವ್ಯವಸ್ಥೆ ಇದೆ, ಕಸವಿಲೇವಾರಿ ಮಾಡಲು ಪ್ರತ್ಯೇಕ ಸ್ಥಳವಿದೆ. ಪಂಚಾಯತಿಯಲ್ಲಿ ವರ್ಷಕ್ಕೆ ಎರಡು ಗ್ರಾಮ ಸಭೆ, ಸಾಮಾನ್ಯ ಸಭೆ, ಮಕ್ಕಳ ಸಭೆ ಮಾಡಿ ಗ್ರಾಮದ ಕುಂದು ಕೊರತೆಗಳ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೆಂದಲಗ ಗ್ರಾಪಂ ಅಧ್ಯಕ್ಷ ಅಣ್ಣ ಸಾಹೇಬ್ ಪಾಟೀಲ್ ಮಾತನಾಡಿ, ನಮ್ಮ ಬೆಳಗಾವಿ ಮಹಾರಾಷ್ಟ್ರದ ಗಡಿ ಭಾಗದಲ್ಲಿದ್ದು, ಕನ್ನಡಕ್ಕಿಂತ ಬೇರೆ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚು. ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಅವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ನಾವು ಕಳೆದ ಎರಡು ದಿನಗಳಿಂದ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಚಾಲಿಗೆ, ಹೆಗ್ಗನಹಳ್ಳಿ, ತಾವರೆಕೆರೆ ಗ್ರಾಪಂಗಳಿಗೆ ಭೇಟಿ ನೀಡಿದ್ದು, ಇಲ್ಲಿನ ಅಭಿವೃದ್ಧಿಗೂ ನಮ್ಮ ಕ್ಷೇತ್ರದ ಅಭಿವೃದ್ಧಿಗೂ ವ್ಯತ್ಯಾಸವಿದೆ ಎಂದು ತಿಳಿಸಿದರು.ಯಮಕನಮರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಸ್ಮಾ ಅಹ್ಮದಸಾಬ ಫಣಿಬಂದ, ತಾವರೆಕೆರೆ ಗ್ರಾಪಂ ಅಧ್ಯಕ್ಷೆ ಪ್ರಿಯಾಂಕ ರಮೇಶ್, ಮಾಜಿ ಅಧ್ಯಕ್ಷರಾದ ರವಿಕುಮಾರ್, ರಮೇಶ್, ಮಂಜುನಾಥ್, ಬಸವಪ್ರಕಾಶ್, ಪವಿತ್ರ ಮಂಜುನಾಥ್, ಉಪಾಧ್ಯಕ್ಷರಾದ ಸುಧಾಕರ್, ಕರ ವಸೂಲಿಗಾರ ರಾಜಣ್ಣ, ಮೀನಾಕ್ಷಿ, ಬಚ್ಚೇಗೌಡ, ಮಂಜುನಾಥ್ ಇತರರು ಹಾಜರಿದ್ದರು.
ಫೋಟೋ: 17 ಹೆಚ್‌ಎಸ್‌ಕೆ 2 ಮತ್ತುಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಪಂಗೆ ಬೆಳಗಾವಿ ಕ್ಷೇತ್ರದ ಯಮಕನಮರಡಿ ಹಾಗೂ ನಿಪ್ಪಾಣಿ ತಾಲೂಕಿನ ಕೆಂದಲಗಾ ಗ್ರಾಪಂ ಸದಸ್ಯರು ಭೇಟಿ ನೀಡಿ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.