ಕನ್ನಡಪ್ರಭ ವಾರ್ತೆ ಮಂಗಳೂರು
ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ವಾಸುದೇವ್ ಕಾಮತ್ ಹಾಗೂ ಆಡಳಿತ ಮಂಡಳಿಯ ಪ್ರಮುಖ ಮಂಗಲ್ಪಾಡಿ ನರೇಶ್ ಶೆಣೈ ಅವರು ಮಂಗಳೂರಿನಲ್ಲಿ ಸೋಮವಾರ ಕೇರಳ ರಾಜ್ಯಪಾಲರನ್ನು ಭೇಟಿಯಾಗಿ ಕೆನರಾ ಎಂಜಿನಿಯರಿಗ್ ಕಾಲೇಜು ಮುಂದಿನ ವರ್ಷ ಬೆಳ್ಳಿಹಬ್ಬ ಆಚರಿಸಲಿದ್ದು, ಈ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಕೋರಿಕೆ ಸಲ್ಲಿಸಿದರು. ರಾಜ್ಯಪಾಲರು ಮುಕ್ತ ಮನಸ್ಸಿನಿಂದ ಭಾಗವಹಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೆನರಾ ಶಿಕ್ಷಣ ಸಂಸ್ಥೆಗಳ ಸಮಗ್ರ ಬೆಳವಣಿಗೆಗಳ ಬಗ್ಗೆ ತಮ್ಮ ಆಡಳಿತ ಮಂಡಳಿ ಕೈಗೊಂಡ ಸುಧಾರಣಾ ಕ್ರಮಗಳು, ಆಗಿರುವ ಅಭಿವೃದ್ಧಿ, ಫಲಿತಾಂಶದಲ್ಲಿ ಪ್ರಗತಿ, ಏರುತ್ತಿರುವ ವಿದ್ಯಾರ್ಥಿ ಸಮುದಾಯದ ಸಂಖ್ಯೆ, ಹೊಸ ಕೋರ್ಸುಗಳ ಅಳವಡಿಕೆ, ಇಂಟರ್ ನ್ಯಾಶನಲ್ ಸ್ಕೂಲ್ ಆರಂಭ, ಶಿಕ್ಷಕ ವೃಂದದ ಮಾದರಿ ಪ್ರಯತ್ನಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡ ರಾಜ್ಯಪಾಲ ಅರಿಫ್ ಖಾನ್, ಇಂತಹ ಶ್ರೇಷ್ಠ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಸಂತೋಷದಿಂದ ಭಾಗವಹಿಸುವುದಾಗಿ ತಿಳಿಸಿದರು.