ಮರಳು ಲೂಟಿ: ಜೇವರ್ಗಿ ತಾಲೂಕು ಆಡಳಿತ ಕುಂಭಕರ್ಣ ನಿದ್ರೆಯಲ್ಲಿ

KannadaprabhaNewsNetwork | Published : May 28, 2024 1:02 AM

ಸಾರಾಂಶ

ಮುರುಮ್‌ ಅಕ್ರಮವಾಗಿ ಲೂಟಿ ಮಾಡಲಾಗುತ್ತಿದೆ. ಕ್ರಮ ಕೈಗೊಳ್ಳಬೇಕದ್ದ ತಾಲೂಕು ಆಡಳಿತ, ತಹಸೀಲ್ದಾರ್‌ ಅಕ್ರಮಕೋರರ ಜೊತೆಗೇ ಕೈ ಜೋಡಿಸಿದ್ದಾರೆ. ಹೀಗಾಗಿ ಜೇವರ್ಗಿ ತಾಲೂಕು ಆಡಳಿತ ಕುಂಭಕರ್ಣ ನಿದ್ರೆಯಲ್ಲಿದೆ ಎಂದಿರುವ ಆಂದೋಲಾ ಸಿದ್ದಲಿಂಗ ಶ್ರೀಗಳು ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಹೋರಾ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪಭ ವಾರ್ತೆ ಕಲಬುರಗಿ

ಜಿಲ್ಲೆಯ ಜೇವರ್ಗಿ ತಾಲೂಕಿನ ಹಾಲಗಡ್ಲಾ- ಅವರಾದ ಸರಕಾರಿ ಜಮೀನಿನಲ್ಲಿ ನಿತ್ಯ ಲಕ್ಷಾಂತರ ರುಪಾಯಿ ಮೌಲ್ಯದ ಮುರುಮ್‌ ಅಕ್ರಮವಾಗಿ ಲೂಟಿ ಮಾಡಲಾಗುತ್ತಿದೆ. ಕ್ರಮ ಕೈಗೊಳ್ಳಬೇಕದ್ದ ತಾಲೂಕು ಆಡಳಿತ, ತಹಸೀಲ್ದಾರ್‌ ಅಕ್ರಮಕೋರರ ಜೊತೆಗೇ ಕೈ ಜೋಡಿಸಿದ್ದಾರೆ. ಹೀಗಾಗಿ ಜೇವರ್ಗಿ ತಾಲೂಕು ಆಡಳಿತ ಕುಂಭಕರ್ಣ ನಿದ್ರೆಯಲ್ಲಿದೆ ಎಂದಿರುವ ಆಂದೋಲಾ ಸಿದ್ದಲಿಂಗ ಶ್ರೀಗಳು ತಕ್ಷಣ ಕ್ರಮ ಜರುಗಿಸದೆ ಹೋದಲ್ಲಿ ಹೋರಾ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2022 ರಿಂದಲೇ ಈ ಬಗ್ಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಲಾಗಿತ್ತು, ಈಚೆಗೆ ಮೇ 15 ರಂದೂ ಸಹ ದೂರು ನೀಡಿ ಕ್ರಮಕ್ಕೆ ಕೋರಲಾಗಿತ್ತು. ಸ್ಥಳೀಯ ಕಂದಾಯ ಅಧಿಕಾರಿಗಳೂ ಅಕ್ರಮದ ವರದಿ ನೀಡಿದ್ದಾರೆ. ಹೀಗಿದ್ದರೂ ಜೇವರ್ಗಿಯ ಈಗಿನ ತಹಸೀಲ್ದಾರ್‌ ಕ್ರಮಕ್ಕೆ ಮುಂದಾಗಿಲ್ಲ, ಇದರಿಂದಾಗಿ ಅವರೇ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವ ಶಂಕೆ ಬಲಗೊಳ್ಳುತ್ತಿದೆ ಎಂದು ಶ್ರೀಗಳು ದೂರಿದರು.

ಜೇವರ್ಗಿಯಲ್ಲಿ ಭೀಮಾ ನದಿಯಲ್ಲಿನ ಅಕ್ರಮ ಮರಳನ್ನೂ ಲೂಟಿಕೋರರು ಹೀಗೆಯೇ ಬೆನ್ನು ಹತ್ತಿ ಸುಲಿಗೆ ಮಾಡಿದ್ದರು. ಹೋರಾಟದಿಂದ ಅದು ಇದೀಗ ಸ್ಥಗಿತಗೊಂಡಿದೆ. ಅದು ಸ್ಘಗಿತಗೊಂಡ ಬೆನ್ನಲ್ಲೇ ಮುರುಮ್‌ ಲೂಟಿ ಸಾಗಿದೆ. ಇದರಿಂದಾಗಿ ನಿಸರ್ಗದ ಸಂಪತ್ತಿನ ಲೂಟಿ ನಿರಂತರ ಸಾಗಿದೆ ಎಂದು ಶ್ರೀಗಳು ಆತಂಕ ಹೊರಹಾಕಿದರು.

ಜೇವರ್ಗಿಯ ಈಗಿನ ತಹಸೀಲ್ದಾರ್‌ ಮಲ್ಲಣ್ಣ ಯಲಗೋಡು ಇವರು ತಾಲೂಕಿನಲ್ಲಿಯೇ ಪಿಡಿಓ ಆಗಿದ್ದು ಪರೀಕ್ಷೆಗಳನ್ನು ಬರೆದು ಇದೀಗ ತಹಸೀಲ್ದಾರ್‌ ಎಂದು ಬಂದಿದ್ದಾರೆ. ಮುಂಚೆ ಪೊಲೀಸ್‌ ಇಲಾಖೆಯಲ್ಲಿದ್ದಾಗ ರೀಲ್ಸ್‌ ಮಾಡಲು ಹೋಗಿ ಅನೇಕ ಫಜೀತಿಗಳನ್ನು ಕಂಡವರು. ಪೊಲೀಸ್‌ ಇಲಾಖೆಯಲ್ಲಿದ್ದಾಗ ರೀಲ್‌ ಮಾಡಲು ಹೋಗಿ ಸಿಕ್ಕುಬಿದ್ದು ಸೇವೆಯಿಂದ ಅಮಾನತುಗೊಂಡಿದ್ದರು. ಇದೀಗ ಕಂದಾಯ ಇಲಾಖೆಗೆ ಬಂದು ಜೇವರ್ಗಿಗೆ ವಕ್ಕರಿಸಿದ್ದಾರೆ. ಇಲ್ಲಿನ ಶಾಸಕರಾದ ಡಾ. ಅಜಯ್‌ ಸಿಂಗ್‌ ಅವರಿಗೆ ಅದ್ಹೇಗೆ ಈ ರೀಲ್ಸ್‌ ಮಾಡುವವರನ್ನೇ ತಮ್ಮ ಕ್ಷೇತ್ರಕ್ಕೆ ಕರೆತರುವ ಮನಸ್ಸಾಯಿತೋ? ಎಂದು ಅಚ್ಚರಿ ಹೊರಹಾಕಿದರು.

ತಹಶೀಲ್ದಾರರ ಹಿನ್ನೆಲೆ ಶಾಸಕರಿಗೂ ಗೊತ್ತಿದೆ, ಆದಾಗ್ಯೂ ಇಂತಹ ರೀಲ್‌ ಮಾಸ್ಟರ್‌ ಅವರನ್ನೇ ಕಂದಾಯ ಆಡಳಿತಕ್ಕೆ ತಾಲೂಕಿಗೆ ತಂದರೆ ತಾಲೂಕಿನ ಅಭಿವೃದ್ಧಿ ದೇವರೇ ಬಲ್ಲ ಎಂದು ಶ್ರೀಗಳು ಆತಂಕ ಹೊರಹಾಕಿದರು.

ತಾವು ಮುರುಮ್‌ ಲೂಟಿ, ಅಕ್ರಮದ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಮ್ಮ ಬೆಂಬಲಿಗರಲ್ಲಿ ಒಬ್ಬರಾಗ ಕಟ್ಟಿ ಸಂಗಾವಿಯ ಎಂಕೆ ಮಾಲೀಪಾಟೀಲ್‌ ಇವರು ದೂರು ಸಲ್ಲಿಸಿದ್ದಾರೆ. ಹಾಲಗಡ್ಲಾದ ಸ ನಂ 60 ಹಾಗೂ ಅವರಾದ್‌ನ 226 ಸರ್ವೇ ನಂಬರ್‌ನಲ್ಲಿ ಈ ಅಕ್ರಮ ನಡೆದಿದೆ. ಇದರಿಂದ ನಿಸರ್ಗ ಸಂಪತ್ತಿನ ಕೊಳ್ಳೆ ಹೊಡೆಲಾಗುತ್ತಿದೆ. ಇದು ನಿಲ್ಲದೆ ಹೋದಲ್ಲಿ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶ್ರೀರಾಮ ಸೇನೆಯ ಮುಖಂಡರಾದ ಹುಲ್ಲೇಶ ಕುಮಾರ್‌ ಹಾಗೂ ದೂರುದಾರರಾದ ಮಲ್ಲಣಗೌಡ ಪೊಲೀಸ್‌ ಪಾಟೀಲ್‌ ಹಾಜರಿದ್ದರು.

Share this article