ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್: ಕೇರಳದಲ್ಲಿ ರಕ್ಷಣೆ, ಇಬ್ಬರು ವಶಕ್ಕೆ

KannadaprabhaNewsNetwork |  
Published : Nov 21, 2026, 02:45 AM IST
ಡೀನ್‌ ಡಾ. ಶಾನವಾಝ್‌ ಮಾಣಿಪ್ಪಾಡಿ | Kannada Prabha

ಸಾರಾಂಶ

ನಾಟೆಕಲ್ಲಿನ ಮೆಡಿಕಲ್‌ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮನೆಮಂದಿ ಒತ್ತಾಯಪೂರ್ವಕವಾಗಿ ವಾಹನದೊಳಕ್ಕೆ ಹಾಕಿ ಕೊಂಡೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಘಟನೆ ಸಂಬಂಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳದಿಂದ ವಿದ್ಯಾರ್ಥಿನಿಯನ್ನು ಕುಟುಂಬಸ್ಥರಿಂದ ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಉಳ್ಳಾಲ: ನಾಟೆಕಲ್ಲಿನ ಮೆಡಿಕಲ್‌ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮನೆಮಂದಿ ಒತ್ತಾಯಪೂರ್ವಕವಾಗಿ ವಾಹನದೊಳಕ್ಕೆ ಹಾಕಿ ಕೊಂಡೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಘಟನೆ ಸಂಬಂಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳದಿಂದ ವಿದ್ಯಾರ್ಥಿನಿಯನ್ನು ಕುಟುಂಬಸ್ಥರಿಂದ ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಕಾಲೇಜು ಆವರಣದಿಂದ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕರೆದೊಯ್ದ ಆರೋಪದಡಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ವಿಚಾರಣೆ ವೇಳೆ ವಿದ್ಯಾರ್ಥಿನಿ ಹೆತ್ತವರೊಂದಿಗೆ ಹೋಗಲು ನಿರಾಕರಿಸಿದ್ದಾಳೆ.

ಬೆಳ್ತಂಗಡಿ ಮೂಲದ ಮುಸ್ಲಿಂ ವಿದ್ಯಾರ್ಥಿನಿಗೆ ಮಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಾಗಲಕೋಟೆ ಮೂಲದ ಹಿಂದೂ ಸಮುದಾಯದ ವಿದ್ಯಾರ್ಥಿಯೊಂದಿಗೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಕುಟುಂಬಸ್ಥರ ಗಮನಕ್ಕೆ ಬಂದಿದ್ದು, ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.

ಕುಟುಂಬಸ್ಥರ ವಿರೋಧದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರೂ ತರಗತಿಗಳಿಗೆ ನಿಯಮಿತವಾಗಿ ಹಾಜರಾಗುತ್ತಿರಲಿಲ್ಲ ಎನ್ನಲಾಗಿದೆ. ಅಲ್ಲದೆ, ಕುಟುಂಬಸ್ಥರ ವಿರುದ್ಧ ವಿದ್ಯಾರ್ಥಿನಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು ಎಂಬ ಮಾಹಿತಿಯೂ ಲಭ್ಯವಾಗಿದೆ.

ಗುರುವಾರ ವಿದ್ಯಾರ್ಥಿನಿಯ ಕುಟುಂಬದ ಐವರು ಸದಸ್ಯರು ಕಾಲೇಜಿಗೆ ಆಗಮಿಸಿ, ಆಕೆಯ ವಿರೋಧದ ನಡುವೆಯೇ ಬಲವಂತವಾಗಿ ಜೀಪಿನಲ್ಲಿ ಕರೆದೊಯ್ದಿದ್ದರು. ಅಪಹರಣ ಕುರಿತ ವಿಡಿಯೋ ಸಂಚಲನ ಮೂಡಿಸುತ್ತಿದ್ದಂತೆ ಪೊಲೀಸ್‌ ಕಮೀಷನರ್‌ ತನಿಖೆಗೆ ಆದೇಶಿಸಿದ್ದಾರೆ. ಅದರಂತೆ ಉಳ್ಳಾಲ ಪೊಲೀಸರು ಕೇರಳದಲ್ಲಿದ್ದ ವಿದ್ಯಾರ್ಥಿನಿಯನ್ನು ಸಂಜೆ ವೇಳೆ ವಾಪಸ್ಸು ಕರೆತಂದು , ಆಕೆ ಮನೆಮಂದಿ ಜೊತೆಗೆ ತೆರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಂತ್ವನ ಕೇಂದ್ರಕ್ಕೆ ದಾಖಲಿಸುವ ಮಾಹಿತಿ ನೀಡಿದ್ದಾರೆ.ಕೇರಳದಿಂದ ವಿದ್ಯಾರ್ಥಿನಿ ರಕ್ಷಣೆ: ಕೇರಳದಲ್ಲಿರುವ ಸಂಬಂಧಿಕರ ಮನೆಯಿಂದ ಯುವತಿಯನ್ನು ಪೊಲೀಸರು ರಕ್ಷಿಸಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಈ ವೇಳೆ ತಾನು ಕುಟುಂಬದವರೊಂದಿಗೆ ತೆರಳಲು ಇಚ್ಛಿಸುವುದಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಕರೆತರಲಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.ತಪ್ಪಿಲ್ಲ: ಕಾಲೇಜು ಡೀನ್‌

ವೈದ್ಯಕೀಯ ವಿದ್ಯಾರ್ಥಿನಿಯನ್ನು ಮನೆಮಂದಿ ಕರೆದುಕೊಂಡು ಹೋಗಲು ಬಂದಾಗ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಆಕೆಯ ಜತೆ ಮಾತುಕತೆ ನಡೆಸಿ ಕರೆದುಕೊಂಡು ಹೋಗಿದ್ದಾರೆ. ಮನೆಮಂದಿ ಆಕೆಯನ್ನು ಕರೆದುಕೊಂಡು ಹೋಗುವುದರಲ್ಲಿ ತಪ್ಪಿಲ್ಲ. ಘಟನೆಯನ್ನು ಅಪಹರಣವೆಂದು ಬಿಂಬಿಸುವುದು ಸರಿಯಲ್ಲ ಎಂದು ಕಣಚೂರು ವೈದ್ಯಕೀಯ ಕಾಲೇಜು ಡೀನ್‌ ಡಾ. ಶಾನವಾಝ್‌ ಮಾಣಿಪ್ಪಾಡಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾಲೇಜು ಹಾಸ್ಟೆಲ್‌ ನಲ್ಲಿ ಆಕೆ ಇಲ್ಲದಿರುವುದನ್ನು ಗಮನಿಸಿ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣದ ಸತ್ಯಾಸತ್ಯತೆ ತಿಳಿಯದೇ ಅಪಹರಣವೆಂದು ಬಿಂಬಿಸುವುದು ಸರಿಯಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ತೆಗೆದುಹಾಕುವಂತೆಯೂ ಮನವಿ ಮಾಡಿದರು.ಖಂಡನೆ: ಹಾಡಹಗಲೇ ಮಂಗಳೂರಿನ ಕಾಲೇಜು ಆವರಣದಿಂದ ವಿದ್ಯಾರ್ಥಿನಿಯೊಬ್ಬಳನ್ನು ಹಲವು ವ್ಯಕ್ತಿಗಳು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದಿರುವುದು ಆಘಾತಕಾರಿ ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಹಚ್ಚಬೇಕು ಮತ್ತು ಯುವತಿಯ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಆಗ್ರಹಿಸಿದ್ದಾರೆ.ಘಟನೆಯಲ್ಲಿ ಭಾಗಿಯಾದದವರನ್ನು ಕೂಡಲೇ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ