)
ರಾಂ ಅಜೆಕಾರು ಕಾರ್ಕಳ
ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ–ಕ್ಯಾಸನೂರ್ ಫಾರೆಸ್ಟ್ ಡಿಸೀಸ್) ಹರಡುವ ಆತಂಕದ ಹಿನ್ನೆಲೆಯಲ್ಲಿ ಮಲೆನಾಡು ತಪ್ಪಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ.
ಕಾಡಂಚಿನ ಗ್ರಾಮಗಳಲ್ಲಿ ವಿಶೇಷ ನಿಗಾ ವಹಿಸಲಾಗಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು, ಮುದ್ರಾಡಿ, ಕಬ್ಬಿನಾಲೆ, ಮುನಿಯಾಲು, ಬಲ್ಲಾಡಿ ಚಾರ್, ಕುಚ್ಚೂರು, ಮುಟ್ಲುಪಾಡಿ ಹಾಗೂ ಕಾರ್ಕಳ ತಾಲೂಕಿನ ಮರ್ಣೆ, ಕೆರುವಾಶೆ, ಮಾಳ, ಶಿರ್ಲಾಲು, ಈದು, ನೂರಾಲ್ಬೆಟ್ಟು ಮೊದಲಾದ ಕಾಡಂಚಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.ಈ ಬಾರಿ ಅಂಡಾರು ಭಾಗಗಳಲ್ಲಿ ಮಂಗಗಳು ಮೃತಪಟ್ಟಿದ್ದು ಅದರಲ್ಲಿ ಮಂಗವೊಂದರಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ ಎನ್ನಲಾಗಿದೆ. ಆದರೆ ಇದುವರೆಗೂ ಮನುಷ್ಯರಲ್ಲಿ ಸೋಂಕು ಹರಡಿರುವ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕೆಯಾಗಿ ಈ ವರ್ಷ ಮೊದಲಿನಿಂದಲೇ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ತೀರ್ಥಹಳ್ಳಿಯಲ್ಲಿ ಯುವಕರೊಬ್ಬರು ಮಂಗನ ಕಾಯಿಲೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆಗುಂಬೆಗೆ ಆಗಮಿಸುವ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಮಂಗಗಳಿಗೆ ಆಹಾರ ನೀಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಮೃತಪಟ್ಟ ಮಂಗಗಳಿಂದ ದೂರವಿರುವಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಅರಣ್ಯ ವೀಕ್ಚಕರಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕಾಡು ಪ್ರದೇಶಗಳಿಗೆ ತೆರಳುವವರು ದೀಪದ ಎಣ್ಣೆ ಹಚ್ಚಿಕೊಳ್ಳಬೇಕು. ಉದ್ದನೆ ತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸಿ ದೇಹ ಸಂಪೂರ್ಣ ಮುಚ್ಚುವ ಬಟ್ಟೆಗಳನ್ನು ಬಳಸುವುದು ಸೂಕ್ತ. ಸತ್ತ ಅಥವಾ ಅಸ್ವಸ್ಥ ಕೋತಿಗಳು ಹಾಗೂ ಇತರ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಬೇಕು. ಸತ್ತ ಮಂಗ ಕಂಡುಬಂದರೆ ತಕ್ಷಣ ಗ್ರಾಮ ಸಮಿತಿ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಅಂಡಾರು ಭಾಗಗಳಲ್ಲಿ ಮಂಗಗಳು ಮೃತಪಟ್ಟಿದ್ದು, ಅದರಲ್ಲಿ ಮಂಗವೊಂದರಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ. ಈವರೆಗೂ ಮನುಷ್ಯರಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಜ್ವರ ಕಂಡುಬಂದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು.