ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಕೆಎಫ್‌ಡಿ ಅಬ್ಬರ ಹೆಚ್ಚಿದೆ. 2019ರಲ್ಲಿ ಸಾಗರದಲ್ಲಿ ತಾಲೂಕಿನ ಅರಳಗೋಡುನಲ್ಲಿ ಕೆಎಫ್‌ಡಿ ಸ್ಫೋಟಗೊಂಡಿತ್ತು. 2018ರ ನವೆಂಬರ್‌ನುಂದ 2019ರ ಜೂನ್‌ವರೆಗೆ ಅರಳಗೋಡಿನಲ್ಲಿ ಭಾರೀ ಪ್ರಕರಣದ ಪ್ರಕರಣಗಳು ಕಂಡಿಬಂದಿದ್ದವು. ಅದೇ ವರ್ಷ ಬರೊಬ್ಬರಿ 15 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು.
ಈ ವರ್ಷ 24 ಪ್ರಕರಣ ಪತ್ತೆ:ಜಿಲ್ಲೆಯಲ್ಲಿ ಕಳೆದ ವರ್ಷ 17 ಕೆಎಫ್‌ಡಿ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಜನವರಿಯಿಂದ ಫೆ.4ರವರೆಗೆ 24 ಪ್ರಕರಣಗಳು ವರದಿಯಾಗಿವೆ. ಒಂದು ತಿಂಗಳ ಅವಧಿಯಲ್ಲೇ ಇಷ್ಟೊಂದು ಪ್ರಕರಣಗಳು ಕಾಣಿಸಿಕೊಂಡಿರುವುದು ಕಾಡಂಚಿನ ಗ್ರಾಮದ ಜನರಲ್ಲಿ ಕೆಎಫ್‌ಡಿ ಆತಂಕ ಮನೆ ಮಾಡಿದೆ.
ವ್ಯಾಕ್ಸಿನ್ ಪೂರೈಕೆ ಆಗಿಲ್ಲ:
ಜಿಲ್ಲೆಯಲ್ಲಿ ಸಾಮಾನ್ಯವಾಗಿ ನವೆಂಬರ್‌ನಿಂದ ಮಳೆಗಾಲ ಆರಂಭ ಆಗುವವರೆಗೂ ಮಂಗನ ಕಾಯಿಲೆ ಪ್ರಕರಣ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಇದರ ಆರ್ಭಟ ಹೆಚ್ಚು. ಆದರೆ, ಕಳೆದೆರಡು ವರ್ಷದಿಂದ ಜನವರಿಯಲ್ಲಿ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಇದರ ನಡುವೆ ನವಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲಾರಂಭದಲ್ಲಿಯೇ ನೆರೆ ಜಿಲ್ಲೆ ಚಿಕ್ಕಮಗಳೂರಿನಲ್ಲಿ ವ್ಯಕ್ತಿಗೆ ಕೆಎಫ್‌ಡಿ ಪತ್ತೆಯಾಗಿತ್ತು.
ಹಲವು ದಶಕದಿಂದ ಈ ಕಾಯಿಲೆ ಭಾದಿಸುತ್ತಿದ್ದರೂ ಈವರೆಗೆ ಕಾಯಿಲೆಗೆ ಮದ್ದು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ಕೆಎಫ್ ಡಿ ವ್ಯಾಕ್ಸಿನೇಶನ್ ಹಾಕಲಾಗುತ್ತದೆ. ಜೊತೆಗೆ ಮೈಗೆ ಹಚ್ಚಿಕೊಳ್ಳಲು ಡಿಎಂಪಿ ಆಯಿಲ್ ಅನ್ನು ನೀಡಲಾಗುತ್ತದೆ. ಈ ವ್ಯಾಕ್ಸಿನ್ ಪಡೆಯುವುದರಿಂದ ಈ ಕಾಯಿಲೆಯಿಂದ ಸ್ವಲ್ಪಮಟ್ಟಿನ ರಕ್ಷಣೆ ಸಿಗುತ್ತದೆ. ಹೀಗಾಗಿ, ಆರೋಗ್ಯ ಇಲಾಖೆ ನವಂಬರ್ ನಿಂದಲೇ ಕಾಡಂಚಿನ ಜನರಿಗೆ ಈ ವ್ಯಾಕ್ಸಿನ್ ನೀಡುತ್ತದೆ. ಕೆಲವು ವರ್ಷಗಳ ಕಾಲ ಬೂಸ್ಟರ್ ಡೋಸ್ ಕೂಡ ನೀಡಲಾಗುತ್ತದೆ. ಈಗ ವ್ಯಾಕ್ಸಿನ್ ನೀಡದಿರುವುದರಿಂದ 2019ರ ನೆನಪು ಮತ್ತೆ ಮರಕಳಿಸುವ ಆತಂಕ ಜನರಲ್ಲಿದೆ.
ಕಾಡಿನಲ್ಲಿ ಇರುವ ಉಣುಗು ಈ ರೋಗ ಹರಡಲು ಕಾರಣ. ಇದು ಮಂಗಗಳ ಮೂಲಕ ಜನರಿಗೆ ಹರಡುತ್ತದೆ. ಕಾಡಿಗೆ ಜನರು ಮತ್ತು ಜಾನುವಾರುಗಳು ತೆರಳಿದ ವೇಳೆ ಉಣುಗಿನ ಮೂಲಕ ದೇಹ ಪ್ರವೇಶಿಸಿ, ಮಾರಣಾಂತಿಕ ರೋಗ ಉಂಟು ಮಾಡುತ್ತದೆ. 1957ರಲ್ಲಿ ಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ ಮೃತ ಮಂಗವೊಂದರ ಶರೀರದಲ್ಲಿ ಈ ವೈರಾಣು ಗುರುತಿಸಲಾಯಿತು. ಹೀಗಾಗಿ, ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಕರೆಯಲಾಗುತ್ತಿದೆ.
ಅಷ್ಟೇ ಅಲ್ಲದೇ, ಈ ಸಂಬಂಧ ಪ್ರತಿಭಟನೆಗಳು ಸಹ ನಡೆದಿದ್ದವು. ವಕೀಲ ಕೆ.ಪಿ.ಶ್ರೀಪಾಲ್ ಹಾಗೂ ಹಲವು ಮುಖಂಡರನ್ನ ಒಳಗೊಂಡ ಕೆಎಫ್‌ಡಿ ಜನಜಾಗೃತಿ ಒಕ್ಕೂಟ ಯುವತಿಯ ಸಾವು ಅಮಾನುಷ ಎಂದು ಗಂಭೀರವಾಗಿ ಆರೋಪಿಸಿತ್ತು. ಅಲ್ಲದೇ, ರಿಪೋರ್ಟ್ಗಳನ್ನು ಮುಚ್ಚುಮರೆ ಮಾಡಿ ತಿದ್ದಲಾಗುತ್ತಿದೆ ಎಂಬ ಆರೋಪ ಮಾಡಿದ್ದ ಸಂಘಟನೆ ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್ ಅವರಿಗೆ ಮನವಿಯನ್ನೂ ನೀಡಿತ್ತು.
2019 ರಲ್ಲಿ ಜಿಲ್ಲೆಯಲ್ಲಿ 341 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 15 ಮಂದಿ ಕೆಎಫ್‌ಡಿಯಿಂದ ಸಾವನ್ನಪ್ಪಿದ್ದು ದೃಢಪಟ್ಟಿತ್ತು. 2020 ರಲ್ಲಿ 184 ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಸಾವನ್ನಪ್ಪಿದ್ದರು. 2021ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಕೆಎಫ್‌ಡಿಗೆ ಬಲಿಯಾಗಿದ್ದರು. 2022ರಲ್ಲಿ 12 ಪ್ರಕರಣಗಳು ದಾಖಲಾಗಿದ್ದು, 2023ರಲ್ಲಿ 14 ಪ್ರಕರಣ ದಾಖಲಾಗಿದ್ದವು.
- - - ಬಾಕ್ಸ್-3 ಹೊಸನಗರ ಸಂಪೆಕಟ್ಟೆ ಜನ ಹೇಳೋದೇನು?ಆರೋಗ್ಯ ಇಲಾಖೆಯವರು ಬಂದು ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲೂ ಹೊರಗೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಜೀವನ ನಡೆಯಬೇಕು ಎಂದರೆ ದನ-ಕರು, ತೋಟ ನೋಡಿಕೊಂಡಿರಬೇಕು. ದನ- ಕರುಗಳಿಗೆ ಮೇವು ತರಲು ಹೋಗಲೇಬೇಕು. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳ ಸಂಖ್ಯೆ 20 ದಾಟಿರುವುದು ಆತಂಕ ಮೂಡಿಸಿದೆ. ಲಸಿಕೆ ಕೂಡುವ ಬಗ್ಗೆ ಇನ್ನೂ ಯಾರು ಏನು ಹೇಳಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಹೊಸನಗರದ ಸಂಪೆಕಟ್ಟೆ ನಿವಾಸಿಗಳು ಒತ್ತಾಯಿಸಿದ್ದಾರೆ.- - - ಕೋಟ್
ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಕೆಎಫ್‌ಡಿ ಪ್ರಕರಣಗಳು ತಗ್ಗಿವೆ. ಜಿಲ್ಲೆಯಲ್ಲಿ ಜನವರಿಯಿಂದ ಕೆಎಫ್‌ಡಿ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ, ಆರೋಗ್ಯ ಇಲಾಖೆಯಿಂದ ಮುನ್ನಚ್ಚರಿಕೆ ಕ್ರಮ ವಹಿಸಲಾಗಿದೆ. ಜ್ವರ ಕಾಣಿಸಿಕೊಂಡ ವ್ಯಕ್ತಿಯ ಮೇಲೆ ನಿಗಾ ಇಟ್ಟು, ಮೂರು ದಿನದ ಬಳಿಕವೂ ಜ್ವರ ಇದ್ದರೆ ಕೂಡಲೇ ಅಂತವರ ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯ ಕೆಎಫ್‌ಡಿ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ- ಡಾ.ರಾಜೇಶ್ ಸುರಗಿಹಳ್ಳಿ, ಡಿಎಚ್‌ಒ, ಶಿವಮೊಗ್ಗ
- - -