ಕನ್ನಡಪ್ರಭ ವಾರ್ತೆ ಬಂಟ್ವಾಳ
ತುಳುನಾಡಿನ ಕಾರಣಿಕ ಸ್ಥಾನ ಪಣೋಲಿಬೈಲು ಕ್ಷೇತ್ರದಲ್ಲಿ ಭಾನುವಾರ ರಾತ್ರಿ ನಡೆದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆಯ ಕೋಲದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರು ಹೇಳಿಕೊಂಡಿದ್ದ ಹರಕೆಯ ಕೋಲ ಇದಾಗಿತ್ತು.ತನ್ನ ಆಮಂತ್ರಣದ ಮೇರೆಗೆ ಸ್ಪೀಕರ್ ಖಾದರ್ ಕೋಲದಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಶಾಂತ್ ಕಾಜವ ಅವರು ‘ಕನ್ನಡಪ್ರಭ’ಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಹರಕೆ ಕೋಲದ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಖಾದರ್ ಅವರೇ ಹೇಳಿಕೊಂಡಿದ್ದ ಹರಕೆ ಎಂದು ತಪ್ಪು ಸಂದೇಶ ರವಾನೆಯಾಗುತ್ತಿದೆ, ಜೊತೆಗೆ ಮುಸ್ಲಿಂ ನಾಯಕರಿಂದ ಖಾದರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಗಳು ವ್ಯಕ್ತವಾಗಿದೆ. ಆದರೆ ಇದೆಲ್ಲ ಸತ್ಯಕ್ಕೆ ದೂರವಾಗಿದ್ದು, ನಾನು ಮನಸ್ಸಿನಲ್ಲಿ ಹೇಳಿಕೊಂಡಿದ್ದ ಹರಕೆಯನ್ನು ಈಡೇರಿಸಿದ್ದಕ್ಕೆ ವೈಯಕ್ತಿಕ ನೆಲೆಯಲ್ಲಿ ಪಣೋಲಿಬೈಲಿನಲ್ಲಿ ಹರಕೆ ಕೋಲ ನೆರವೇರಿಸಿದ್ದೇನೆ ಎಂದು ಕಾಜವ ತಿಳಿಸಿದ್ದಾರೆ.ಬಂಟ್ವಾಳ ತಾಲೂಕು ಸಾಲೆತ್ತೂರಿನ ವ್ಯಕ್ತಿಯೊಬ್ಬರು ಯು.ಟಿ. ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ‘ಕೊರಗಜ್ಜನ ಭಕ್ತ ಯು.ಟಿ ಖಾದರ್ ನನ್ನು ಮುಸ್ಲಿಮರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗಿತ್ತೆ ಎಂದು ಯು.ಟಿ.ಖಾದರ್ ನಡವಳಿಕೆ ಆಕ್ಷೇಪಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
16ರಂದು ಬಜೆಟ್ ಮಂಡನೆ ನಿರೀಕ್ಷೆಫೆ.12ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ಫೆ. 23ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಫೆ.12ರಂದು ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದು, ಫೆ.16ರಂದು ಬಜೆಟ್ ಮಂಡನೆಯ ನಿರೀಕ್ಷೆ ಇದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಫೆ.12ರಿಂದ 15ರ ವರೆಗೆ ಜಂಟಿ ಅಧಿವೇಶನ ನಡೆಯಲಿದೆ. ರಾಜ್ಯಪಾಲರ ಭಾಷಣ ಬಳಿಕ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ. ನಂತರ ಬಜೆಟ್ ಮಂಡನೆಯಾಗಿ ಬಜೆಟ್ ಮೇಲಿನ ಚರ್ಚೆ ಮುಂದುವರಿಯಲಿದೆ ಎಂದರು.ಶಾಸಕರಿಗೆ, ಪತ್ರಕರ್ತರಿಗೆ ತರಬೇತಿ:ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಫೆ.9ರಂದು ಬೆಂಗಳೂರಿನ ಐಐಎಂನಲ್ಲಿ ಎಲ್ಲ ಶಾಸಕರಿಗೆ ಹಾಗೂ ಪತ್ರಕರ್ತರಿಗೆ ಒಂದು ದಿನದ ವಿಶೇಷ ತರಬೇತಿ ಆಯೋಜಿಸಲಾಗಿದೆ. ಶಾಸಕರಿಗೆ ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಅಲ್ಲದೆ ಈ ಬಾರಿ ಬಜೆಟ್ ಅಧಿವೇಶನದ ವರದಿಗಾರಿಕೆ ಬಗ್ಗೆಯೂ ಪತ್ರಕರ್ತರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿದೆ ಎಂದರು.ಈ ತರಬೇತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್, ಕೃಷ್ಣ ಭೈರೇ ಗೌಡ, ನಿವೃತ್ತ ಐಎಎಸ್ ಅಧಿಕಾರಿ ಎಎಸ್‌ಎ ಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.ಈ ಸಂದರ್ಭ ಶಾಸಕರಿಗೆ ಸಂವಿಧಾನ ಕ್ವಿಜ್ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದರು. ಬೆಳಗ್ಗೆ 9 ರಿಂದಲೇ ಕಲಾಪಕ್ಕೆ ಚಿಂತನೆ, ದಿನಕ್ಕೊಂದು ಮೆನುಮುಂದಿನ ದಿನಗಳಲ್ಲಿ ವಿಧಾನ ಮಂಡಲ ಕಲಾಪವನ್ನು ಬೆಳಗ್ಗೆ 10ರಿಂದ 11 ಗಂಟೆ ನಡುವೆ ಆರಂಭಿಸುವ ಬದಲು ಅದಕ್ಕೆ ನಿರ್ದಿಷ್ಟ ಸಮಯದ ಚೌಕಟ್ಟು ವಿಧಿಸುವ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಚಿಂತನೆ ನಡೆಸುತ್ತಿದ್ದಾರೆ.ಶಾಸಕರು ಬೆಳಗ್ಗೆ 8 ಗಂಟೆಗೆ ಕಲಾಪಕ್ಕೆ ಸಿದ್ಧವಾಗಿರುತ್ತಾರೆ. ಆದರೆ ಕಲಾಪ ಆರಂಭಕ್ಕೆ ನಿಗದಿತ ಸಮಯದ ಚೌಕಟ್ಟು ಇಲ್ಲದೇ ಇರುವುದು ಹಲವು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಕಲಾಪಕ್ಕೆ ಹೊರಟು ಸಿದ್ಧವಾದ ಶಾಸಕರು ಊರಿನ ಜನರ ಕಚೇರಿ ಕೆಲಸಕ್ಕೆ ನೆರವಾಗುತ್ತಾರೆ, ಹಾಗಾಗಿ ವಿಧಾನಸೌಧ, ವಿಕಾಸ ಸೌಧ ಎಂದು ಸುತ್ತಾಡುತ್ತಾರೆ. ಅಧಿಕಾರಿಗಳ ಬಳಿ ತೆರಳಿ ಕೆಲಸ ಮಾಡಿಸಿಕೊಟ್ಟು ಕಲಾಪಕ್ಕೆ ಹಾಜರಾಗುವಾಗ ವಿಳಂಬವಾಗುತ್ತದೆ. ಮುಖ್ಯವಾಗಿ ಬೆಳಗ್ಗಿನ ತಿಂಡಿ ಅವಧಿ ಬಳಿಕ ಕಲಾಪದಲ್ಲಿ ಭಾಗವಹಿಸುವ ಶಾಸಕರ ಮೂಡ್ ಕೂಡ ಹೊರಟುಹೋಗುವ ಸಾಧ್ಯತೆ ಇರುತ್ತದೆ. ಈ ಎಲ್ಲ ಕಾರಣಗಳಿಂದ ಬೆಳಗ್ಗೆ 9 ಗಂಟೆಗೇ ಕಲಾಪ ಆರಂಭಿಸಲು ಸ್ಪೀಕರ್ ಖಾದರ್ ಚಿಂತನೆ ನಡೆಸುತ್ತಿದ್ದಾರೆ.ದಿನಕ್ಕೊಂದು ಉಪಹಾರ:ಕಲಾಪದಲ್ಲಿ ಭಾಗವಹಿಸಲು ಶಾಸಕರಿಗೆ ಉತ್ಸಾಹ ಮೂಡಿಸಲು ದಿನಕ್ಕೊಂದು ಉಪಹಾರ ಮೆನುವಿಗೆ ವ್ಯವಸ್ಥೆ ಮಾಡಲಾಗುತ್ತಿದೆ.ಬೆಳಗ್ಗೆ 8ರಿಂದ 9 ಗಂಟೆ ವರೆಗೆ ಶಾಸಕರಿಗೆ ವಿಧಾನಸೌಧದಲ್ಲೇ ಉಪಹಾರ ವ್ಯವಸ್ಥೆ ಇರುತ್ತದೆ. ಈ ಬಾರಿಯಿಂದ ಅಧಿವೇಶನಪೂರ್ತಿ ದಿನಕ್ಕೊಂದು ಹೊಟೇಲ್‌ನ ತಿಂಡಿ ಸವಿಯುವ ಅವಕಾಶ ಶಾಸಕರಿಗೆ ಸಿಗಲಿದೆ. ಬಳಿಕ ಕೂಡಲೇ ಅಧಿವೇಶನ ಶುರುವಾಗುವುದರಿಂದ ಶಾಸಕರ ಗೈರು ಕಡಿಮೆ ಮಾಡಬಹುದು ಎಂಬುದು ಸ್ಪೀಕರ್ ಲೆಕ್ಕಾಚಾರ.