ಹಲಗೂರು:

ಗುಂಡಾಪುರದ ಬೆಟ್ಟ ದರಸಮ್ಮನ ದೊಡ್ಡ ಜಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತಮಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಮಾ.4ರಂದು ಆರಂಭಗೊಂಡ ಜಾತ್ರಾ ಮಹೋತ್ಸವ ಜಿಲ್ಲೆ, ರಾಜ್ಯಾದ್ಯಂತ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಮಂಗಳವಾರ ಸಂಜೆ ಕರಗದ ಮನೆಯಲ್ಲಿ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳು ನೆರವೇರಿದವು. ದೇವರಗುಡ್ಡರು ಹೆಬ್ಬಾರೆಯನ್ನು ಹೊತ್ತು ಗ್ರಾಮದ ಮನೆಗಳಿಗೆ ಹೋದಾಗ ಗೃಹಿಣಿಯರು ಹೆಬ್ಬಾರೆಗೆ ಪೂಜೆ ಸಲ್ಲಿಸಿದರು.

ದೇವಿಗೆ ಪರದೇಶಿ ಕುಣಿತ ಎಂದರೆ ಬಹು ಅಚ್ಚುಮೆಚ್ಚು. ಬಾಳೆವನ್ನಿಗ ಗ್ರಾಮಸ್ಥರು ಅರಿದ ಬಟ್ಟೆಗಳನ್ನು ತೊಟ್ಟು ಗೋಣಿಚೀಲದಿಂದ ಬಟ್ಟೆಗಳನ್ನು ಮಾಡಿಕೊಂಡು ಕರಡಿ, ಹುಲಿ, ಹೆಣ್ಣಿನ ವೇಷಗಳನ್ನು ತೊಟ್ಟು ತೆಂಗಿನ ಗುದ್ದಮಟ್ಟೆಯಿಂದ ತಯಾರಿಸಿದ ಬಂದೂಕವನ್ನು ಹಿಡಿದು ಜೊತೆಯಲ್ಲಿ ಬೇವಿನಸೊಪ್ಪನ್ನು ಹಿಡಿದುಕೊಂಡು ಕುಣಿದು ಕುಪ್ಪಳಿಸಿದರು.

ಕಳಸ ಹೊತ್ತ ಮುತ್ತೈದೆಯರು ಹರಕೆ ಹೊತ್ತುಕೊಂಡಿದ್ದ ಬಾಯಿ ಬೀಗದವರು ಬೇವಿನ ಸೊಪ್ಪು, ಗಂಧದಕಡ್ಡಿ ಹಿಡಿದು ದೇವರ ಜೊತೆಯಲ್ಲಿ ಮೂರು ಬಸಪ್ಪಗಳು ನಡುವೆ ಬೆಟ್ಟದ ತಪ್ಪಲಿನಲ್ಲಿರುವ ಬೆಟ್ಟದರಸಮ್ಮನ ಸನ್ನಿಧಿಗೆ ಕರಗ ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತಾದಿಗಳು ಆಗಮಿಸಿದರು. ಮುತ್ತೈದೆಯರು ತಂಬಿಟ್ಟಿನ ಆರತಿ ಎತ್ತಿ ಪೂಜೆ ಸಲ್ಲಿಸಿದರು.


ಈ ವೇಳೆ ಭಕ್ತರು ಪಂಜಿನ ಸೇವೆ ಹಾಗೂ ತಮ್ಮ ದನಕರುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸಿದರು. ಹಲಗೂರು, ಗುಂಡಾಪುರ, ಕೆಂಪಯ್ಯನ ದೊಡ್ಡಿ, ನಂದಿಪುರ, ಹೆಚ್.ಬಸಾಪುರ, ದಳವಾಯಿ ಕೋಡಿಹಳ್ಳಿ, ದೇವಿರಹಳ್ಳಿ, ಬಾಳೆಹೊನ್ನಿಗ, ಹಗಾದೂರು, ಬಸವನಹಳ್ಳಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹೆಚ್ಚು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಾತ್ರೆ ದಿನ ಹರಕೆ ಹೊತ್ತ ಭಕ್ತರು ಎತ್ತಿನಗಾಡಿಯಲ್ಲಿ ಬೆಲ್ಲದ ಪಾನಕ, ಮಜ್ಜಿಗೆ ಮಾಡಿಕೊಂಡು ಬಂದು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಹಂಚಿ ಬಿಸಿಲಿನ ತಾಪವನ್ನು ನೀಗಿಸಿದರು. ಮುತ್ತೈದೆಯರು ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಹೆಸರುಬೇಳೆ, ಪಾನಕ ನೀಡಿದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ ದೇವರ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದರು. ಅರ್ಚಕರಾದದ ವೀರತ್ತಪ್ಪ ರಮೇಶ್, ಮಹಾದೇವಪ್ಪ, ಪುಟ್ಟಮಲ್ಲಪ್ಪ, ಚಂದ್ರು ಸೇರಿದಂತೆ ಇತರರು ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಮತ್ತು ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಬಿಗಿ ಬಂದೂಬಸ್ತ್ ಮಾಡಿದ್ದರು.