- ಒಳಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿಗೆ ಪಾದಯಾತ್ರೆ

- - -

ಹರಿಹರ: ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಒಂದು ವಾರದಿಂದ ನಡೆದುಕೊಳ್ಳುವ ರೀತಿ, ಈಗ ನಡೆಯುತ್ತಿರುವ ನೀತಿಯ ಬೆಳವಣಿಗೆ ಗಮನಿಸಿದರೆ ಇದರ ವಿರುದ್ಧ ಮಠಾಧೀಶರರು ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಬಂದೊದಗಿದೆ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಶ್ರೀ ನುಡಿದರು.

ಇಲ್ಲಿಗೆ ಸಮೀಪದ ಬೈಪಾಸ್ ಬಳಿಯ ಪ್ರೊ. ಬಿ.ಕೃಷ್ಣಪ್ಪ ಸಮಾಧಿ ಸ್ಥಳ ಮೈತ್ರಿವನದಿಂದ ಬುಧವಾರ ಶ್ರೀ ಅದಿಜಾಂಬವ ಮಹಾ ಸಂಸ್ಥಾನ ಮಠ, ಕೋಡಿಹಳ್ಳಿ, ಷಡಕ್ಷರಿ ಮುನಿ ದೇಶೀಕೇಂದ್ರ ಸ್ವಾಮೀಜಿ ಒಳಮೀಸಲಾತಿ ಜಾರಿಗಾಗಿ ಹಮ್ಮಿಕೊಂಡಿರುವ ಹರಿಹರದಿಂದ ಬೆಂಗಳೂರು ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೊದಲು ಸದಾಶಿವ ಆಯೋಗ ಬಂತು, ನಂತರ ಮಾಧುಸ್ವಾಮಿ ಉಪ ಸಮಿತಿ ವರದಿ ಬಂತು, ಅದೂ ತಿರಸ್ಕಾರವಾಯಿತು. ತದನಂತರ ಸರ್ಕಾರವೇ ಸಮೀಕ್ಷೆ ಮಾಡಲು ಮುಂದಾಯಿತು. ಅದಕ್ಕೆ ₹130 ಕೋಟಿ ಖರ್ಚು ಮಾಡಿ ವರದಿ ತರಸಿತ್ತು. ಆ ವರದಿಯಲ್ಲೂ ಸಾಮಾಜಿಕ ನ್ಯಾಯದಡಿ ಒಳ ಮೀಸಲಾತಿ ಕೊಡಲು ವರದಿ ಸ್ಪಷ್ಟವಾಗಿತ್ತು. ಇದು ಕೆಲವರಿಗೆ ಸಹಿಸಿಕೋಳ್ಳೋಕೆ ಆಗಲಿಲ್ಲ. ಏನೇ ಅಗಲಿ ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದಡಿ ಒಳಮೀಸಲಾತಿ ದೊರೆಯಲಿ ಎಂದರು.


3 ಬಾರಿ ಆಯೋಗ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.27ರಂದು ಈ ಪಾದಯಾತ್ರೆ ಬೆಂಗಳೂರು ತಲುಪುವುದರೊಳಗೆ ಸೂಕ್ತ ನಿರ್ಧಾರವನ್ನು ಪಾದಯಾತ್ರಿಗಳಿಗೆ ಮುಟ್ಟಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ಪಾದಯಾತ್ರೆ ಬೆಂಬಲಿಸಿದ್ದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಅನಾದಿ ಕಾಲದಿಂದಲೂ ತುಳಿತಕ್ಕೆ ಒಳಗಾಗಿರುವ ಮಾದಿಗ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ಒಳಮೀಸಲಾತಿ ನೀಡಲು ಸರ್ಕಾರ ತಕ್ಷಣವೇ ಮುಂದಾಗಬೇಕು. ಬಜೆಟ್ ಚರ್ಚೆಯಲ್ಲಿ ಈ ಕುರಿತು ಸರ್ಕಾರ ಅಂತಿಮ ನಿರ್ಧಾರ ತಿಳಿಸಬೇಕೆಂದು ಆಗ್ರಹಿಸಿದರು.

ಗದಗಿನ ಸದ್ಧರ್ಮ ಪೀಠದ ಶಿವಮುನಿ ಶ್ರೀ, ರೋಣದ ಸವಡಿ ಮರುಳಸಿದ್ದೇಶ್ವರ ಮಠದ ಮರುಳ ಸಿದ್ದೇಶ್ವರ ಶ್ರೀ, ಕೊಪ್ಪಳದ ಕುಕನೂರು ಮರುಳಸಿದ್ದೇಶ್ವರ ಪುಣ್ಯಾಶ್ರಮದ ಗದ್ದಿಗೆಪ್ಪಜ್ಜನವರು, ಹಂಪಿ ಮಾತಂಗ ಪೀಠದ ಪೂರ್ಣಾನಂದ ಭಾರತಿ ಸ್ವಾಮಿಜಿ, ಹಿರೇಸಿಂದೋಗಿ ಕೋಟೆಯ ಮರುಳಸಿದ್ದೇಶ್ವರ ಮಠದ ನಾಗರಾಜ ಸ್ವಾಮಿಜಿ, ಎಚ್.ವಿಶ್ವನಾಥ್, ಎಚ್.ನಿಜಗುಣ, ಸುರೇಶ್‌ ಕುಣಿಬೆಳಕೆರೆ, ಕಲಾವಿದ ಹೆಗ್ಗೇರಿ ರಂಗಪ್ಪ, ಜಿ.ಬಿ. ಬಸವರಾಜಪ್ಪ, ಎಂ.ಬಿ. ಅಣ್ಣಪ್ಪ, ಎಚ್.ದೇವೆಂದ್ರಪ್ಪ, ಶಿವಪ್ಪ, ಎಸ್.ಕೇಶವ, ಎಂ.ಎಸ್. ಆನಂದಕುಮಾರ, ಸುಧಾಕರ, ಜಿ.ರಾಕೇಶ್, ಬೆಳ್ಳೂಡಿ ವಿರೂಪಾಕ್ಷಪ್ಪ, ಪರಮೇಶ ಇತರರಿದ್ದರು.

- - -

-22HRR.04:

ಒಳಮೀಸಲಾತಿ ಜಾರಿಗಾಗಿ ಪ್ರೊ. ಬಿ.ಕೃಷ್ಣಪ್ಪ ಸಮಾಧಿ ಸ್ಥಳ ಮೈತ್ರಿವನದಿಂದ ಹಮ್ಮಿಕೊಂಡಿರುವ ಬೆಂಗಳೂರು ಪಾದಯಾತ್ರೆಗೆ ಬಸವಮೂರ್ತಿ ಮಾದರ ಚನ್ನಯ್ಯ ಶ್ರೀ ಚಾಲನೆ ನೀಡಿ ಮಾತನಾಡಿದರು.