ಬೆಮೆಲ್ ಸಂಸ್ಥೆ ಬೆಳೆಯಲು ಕೆಜಿಎಫ್ ಘಟಕದ ಪಾತ್ರ ಹೆಚ್ಚಿನದು: ಅನಿಲ್ ಜೇರತ್

KannadaprabhaNewsNetwork | Published : May 15, 2025 1:38 AM
14ಕೆಜಿಎಫ್‌1 | Kannada Prabha

ಬೆಮೆಲ್‌ನ ೬೧ನೇ ಸಂಸ್ಥಾಪನಾ ದಿನಾಚಾರಣೆಯ ಅಂಗವಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು, ಎಚ್‌ಎಫ್‌ಯು ಸುನಾಮಿ ತಂಡ ಪಂದ್ಯಾವಳಿಯಲ್ಲಿ ಜಯಶಾಲಿಯಾಯಿತು. ಪ್ರವೀಣ್ ಚೆನ್ನಪ್ಪ ಅವರ ಕ್ರಿಕೆಟ್ ಸಾಧನೆಗಾಗಿ ನೆನಪಿನ ಕಾಣಿಕೆ ನೀಡಲಾಯಿತು,

ಕನ್ನಡಪ್ರಭ ವಾರ್ತೆ ಕೆಜಿಎಫ್

ಬೆಮೆಲ್ ಸಂಸ್ಥೆಯು ದೇಶದ ಪ್ರಮುಖ ಗಣಿಗಾರಿಕೆ ಸಂಸ್ಥೆಯಾಗಿ ಬೆಳೆಯಲು ಪ್ರಮುಖವಾಗಿ ೬೧ ವರ್ಷಗಳ ಹಿಂದೆ ಕೆಜಿಎಫ್ ಘಟಕ ತನ್ನ ತಾಯಿ ಸ್ಥಾನದಲ್ಲಿ ನಿಂತಿರುವುದಾಗಿ ಬೆಮೆಲ್‌ನ ಹಣಕಾಸು ನಿರ್ದೇಶಕ ಅನಿಲ್ ಜೇರತ್ ತಿಳಿಸಿದರು.

ಕೆಜಿಎಫ್‌ನ ಬಿಇಎಂಎಲ್ ಇಎಂ ಘಟಕದಲ್ಲಿ ಹಮ್ಮಿಕೊಂಡಿದ್ದ ಬೆಮೆಲ್ ನ ೬೧ನೇ ಸಂಸ್ಥಾಪನಾ ದಿನ ಉದ್ಘಾಟಿಸಿ ಅವರು ಮಾತನಾಡಿ, ದೇಶದ ಸಮಗ್ರ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ‍್ಯಕ್ರಮದಲ್ಲಿ ಭೂ ಬೆಂಬಲ ವಾಹನಗಳನ್ನು ಪೂರೈಸುವ ಮೂಲಕ ಬೆಮೆಲ್ ಪ್ರಮುಖ ಪಾತ್ರ ವಹಿಸುತ್ತಿರುವುದಾಗಿ ತಿಳಿಸಿದರು.

ಕಂಪನಿಯ ಯಶಸ್ಸಿಗೆ ಕಾರ್ಮಿಕರ ವೈಯಕ್ತಿಕ ಕೊಡುಗೆಯ ಮಹತ್ವವನ್ನು ಒತ್ತಿ ಹೇಳಿದರು. ೬೦ ವರ್ಷ ಕಾರ್ಮಿಕರ ನಿವೃತ್ತಿ ವಯಸ್ಸು, ಆದರೆ ನಾವು ನಮ್ಮ ೬೧ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದೇವೆ, ಈಗ ನಮಗೆ ಬೆಮೆಲ್ ಸಂಸ್ಥೆ ಹೊಸ ಆರಂಭದಂತಿದೆ ಎಂದು ಅವರು ಉಲ್ಲೇಖಿಸಿದರು. ಪ್ರತಿಯೊಂದು ಕೊಡುಗೆಗೂ ತನ್ನದೇ ಆದ ಮೌಲ್ಯವಿದೆ ಮತ್ತು ನೌಕರರು ತಮ್ಮನ್ನು ತಾವು ಮಿತಿಗೊಳಿಸಿಕೊಳ್ಳದಂತೆ ಪ್ರೋತ್ಸಾಹಿಸಿದರು. ತಪ್ಪುಗಳಿಂದ ಕಲಿಯುವುದು, ದೇಶಿಕರಣ, ಗುಣಮಟ್ಟದ ಉತ್ಪನ್ನಗಳು ಮತ್ತು ಸಕಾಲಿಕ ವಿತರಣೆಯು ನಮ್ಮ ಧ್ಯೇಯವಾಗಿದೆ ಎಂದು ಜೆರತ್ ಹೇಳಿದರು.

ಕೆಜಿಎಫ್ ಘಟಕ ಎಲ್ಲಾ ಘಟಕಗಳಿಗೆ ತಾಯಿಯಿದ್ದಂತೆ:

ಕಂಪನಿಯ ಕಾರ್ಯಾಚರಣೆಗಳಲ್ಲಿ ಕೇಂದ್ರ ಪಾತ್ರದಿಂದಾಗಿ ಕೆಜಿಎಫ್ ಘಟಕವನ್ನು ಎಲ್ಲಾ ಸಂಕೀರ್ಣಗಳ ತಾಯಿ ಎಂದು ಕರೆದರು. ಇತರರೊಂದಿಗೆ ಸ್ಪರ್ಧಿಸುವ ಬದಲು ಸ್ವಯಂ ಸುಧಾರಣೆ ಮತ್ತು ಹೊಸತನದತ್ತ ಗಮನಹರಿಸಬೇಕೆಂದು ಅವರು ಉದ್ಯೋಗಿಗಳಿಗೆ ಕರೆ ನೀಡಿದರು.

ಶ್ರೇಷ್ಠತೆಯ ಪರಂಪರೆ:

ಕೆಜಿಎಫ್ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರಹ್ಮಣ್ಯಂ ಮಾತನಾಡಿ, ಕೆಜಿಎಫ್ ಘಟಕದ ಬೆಳವಣಿಗೆ ಮತ್ತು ಭವಿಷ್ಯದ ಯೋಜನೆಗಳನ್ನು ತಿಳಿಸಿದರು. ಕಂಪನಿಯ ಪರಂಪರೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಪ್ರಯತ್ನಗಳನ್ನು ಶ್ಲಾಘಿಸಿದರು.

ಎಸ್‌ಬಿಯು ಹೆಡ್ ಮೈನಿಂಗ್ ಮತ್ತು ಕನ್ಸ್ಟ್ರಕ್ಷನ್ ನ ಯೋಗಾನಂದ ಮಾತನಾಡಿ, ವಿಮಾನ ಎಳೆಯುವ ಟ್ರ್ಯಾಕ್ಟರ್, ವಿಮಾನ ಶಸ್ತ್ರಾಸ್ತ್ರ ಲೋಡಿಂಗ್ ಟ್ರಾಲಿ, ಬಹುಪಯೋಗಿ ಶಸ್ತ್ರಾಸ್ತ್ರ ಲೋಡರ್‌ಗಳು ಮತ್ತು ಕ್ರ್ಯಾಶ್‌ ಫೈರ್ ಟೆಂಡರ್‌ನಂತಹ ಭೂ ಬೆಂಬಲ ಸಾಧನಗಳ ಉನ್ನತಮಟ್ಟದ ಉಪಕರಣಗಳ ತಯಾರಿಕೆಯಲ್ಲಿ ಬೆಮೆಲ್‌ನ ಸಾಧನೆಗಳು ಮತ್ತು ಸ್ವದೇಶಿಕರಣಕ್ಕೆ ಅದರ ಬದ್ಧತೆಯನ್ನು ವಿವರಿಸಿದರು.

ಬೆಮೆಲ್‌ನ ೬೧ನೇ ಸಂಸ್ಥಾಪನಾ ದಿನಾಚಾರಣೆಯ ಅಂಗವಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು, ಎಚ್‌ಎಫ್‌ಯು ಸುನಾಮಿ ತಂಡ ಪಂದ್ಯಾವಳಿಯಲ್ಲಿ ಜಯಶಾಲಿಯಾಯಿತು. ಪ್ರವೀಣ್ ಚೆನ್ನಪ್ಪ ಅವರ ಕ್ರಿಕೆಟ್ ಸಾಧನೆಗಾಗಿ ನೆನಪಿನ ಕಾಣಿಕೆ ನೀಡಲಾಯಿತು, ಎಚ್ ಆ್ಯಂಡ್ ಪಿಎಸ್‌ಬಿಯುನ ಮುಖ್ಯಸ್ಥ ಯೋಗಾನಂದ, ಎಚ್.ಆರ್. ಮುಖ್ಯಸ್ಥೆ ನೈನಾ ಸಿಂಗ್ ಮತ್ತು ಸಂಘದ ಅಧ್ಯಕ್ಷರಾದ ಒ.ರಾಮಚಂದ್ರಾರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಹಣಕಾಸು ನಿರ್ದೇಶಕ ಅನಿಲ್ ಜೇರತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಇತರ ಹಿರಿಯ ಅಧಿಕಾರಿಗಳು ಮತ್ತು ಉದ್ಯೋಗಿಗಳು ಭಾಗವಹಿಸಿದ್ದರು.