ಕನ್ನಡಪ್ರಭ ವಾರ್ತೆ ವಿಜಯಪುರ
ಆಕಾಶ ಕಲ್ಲವ್ವಗೋಳ ಹಾಗೂ ಸುದೀಪ ಅಲಿಯಾಸ್ ಸುಭಾಷ ಬಗಲಿ ಗಾಯಗೊಂಡ ಆರೋಪಿಗಳು. ಆರೋಪಿಗಳು ಸೇರಿದಂತೆ ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ನಗರದ ಎಸ್‌ಎಸ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಕಂಟ್ರಿ ಪಿಸ್ತೂಲ್‌ನಿಂದ ಬೆನ್ನಿಗೆ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಹೊಡೆದು ಸುಶೀಲ ಕಾಳೆ(39) ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳು ಬೈಕ್‌ನಲ್ಲಿ ಹೊರಟಾಗ ಅವರನ್ನು ಬಂಧಿಸಲು ಗಾಂಧಿಚೌಕ್ ಠಾಣೆ ಪೊಲೀಸರು ತೆರಳಿದ್ದರು. ಆಗ ಪೊಲೀಸರು ದುಷ್ಕರ್ಮಿಗಳನ್ನು ಬೆನ್ನತ್ತಿದ್ದ ವೇಳೆ ನಗರದ ಹೊರವಲಯದ ಇಟ್ಟಂಗಿಹಾಳ ಗ್ರಾಮದ ಬಳಿ ಆರೋಪಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಕಂಟ್ರಿ ಪಿಸ್ತೂಲ್‌ನಿಂದ ದಾಳಿ ಮಾಡಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಸಿಪಿಐ ಪ್ರದೀಪ ತಳಕೇರಿ ಅವರು ಆರೋಪಿಗಳಾದ ಆಕಾಶ ಹಾಗೂ ಸುದೀಪ ಅಲಿಯಾಸ್ ಸುಭಾಷ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ರಾಜು ನಾಯಕ ಎಂಬ ಓರ್ವ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದು, ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಒಂದು ಬೈಕ್, ಒಂದು ಕಂಟ್ರಿಮೇಡ್ ಪಿಸ್ತೂಲ್ ಹಾಗೂ ಮೂರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.ರೌಡಿಶೀಟರ್ ಆಗಿದ್ದ ಸುಶೀಲ:
ನಗರದಲ್ಲಿ ಸೋಮವಾರ ನಡೆದಿದ್ದ ಸುಶೀಲ ಕಾಳೆ ಎಂಬಾತನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲೆಂದು ಹೋಗಿದ್ದ ವೇಳೆ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ನಮ್ಮ ಪೊಲೀಸರು ಸಹ ಗುಂಡು ಹಾರಿಸಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ವೇಳೆ ಆರೋಪಿಗಳ ಬಳಿಯಿದ್ದ ಒಂದು ಕಂಟ್ರಿ ಪಿಸ್ತೂಲ್ ಹಾಗೂ ನಂಬರ್ ಪ್ಲೇಟ್ ಇಲ್ಲದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಬೆಳಗ್ಗೆ 10.30ಕ್ಕೆ ಬ್ಯಾಂಕ್‌ಗೆ ಎಂದು ಹೋಗಿದ್ದ ನನ್ನ ಮಗನ ಮೇಲೆ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಯಾರಮೇಲು ನಮಗೆ ಸಂಶಯವೇ ಇಲ್ಲ. ಆದರೂ ಯಾಕೆ ಕೊಲೆ ಮಾಡಿದ್ದಾರೋ ಮಾಹಿತಿಯೇ ನಮಗೆ ಸಿಕ್ಕಿಲ್ಲ. ನನ್ನ ಮಗ ಜಗಳಗಂಟನೇ ಅಲ್ಲ. ಈತನ ಜೊತೆಗಾರರೆಲ್ಲರೂ ಒಳ್ಳೆಯವರೇ ಇದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂದು ವಿನಂತಿಸುತ್ತೇನೆ ಎಂದು ಕೊಲೆಯಾದ ಸುಶೀಲ ತಾಯಿ ಸುಚಿತ್ರಾ ಕಾಳೆ ತಿಳಿಸಿದ್ದಾರೆ.