ನನ್ನೆಲ್ಲ ಅವಕಾಶ ಕಿತ್ತುಕೊಂಡ ಖರ್ಗೆ ಕುಟುಂಬ: ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork |  
Published : Feb 25, 2026, 02:15 AM IST
ಛಲವಾದಿ ನಾರಾಯಣಸ್ವಾಮಿ | Kannada Prabha

ಸಾರಾಂಶ

ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಾರಿ ಗೆದ್ದಿರುವ ಪ್ರಸಾದ ಅಬ್ಬಯ್ಯ, ಎ. ನಾರಾಯಣಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಶಿವಣ್ಣ ಇನ್ನಿತರ ದಲಿತ ಮುಖಂಡರನ್ನು ವಂಚಿಸಲಾಗಿದೆ. ಮೂರು ಬಾರಿ ಗೆದ್ದಿರುವ ಪ್ರಿಯಾಂಕ ಖರ್ಗೆ ಮೂರೂ ಬಾರಿ‌ಯೂ ಸಚಿವರಾಗಿರುವುದು ಇದಕ್ಕೆ ಸಾಕ್ಷಿ ಎಂದು ಖರ್ಗೆ ಕುಟುಂಬದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.

ಧಾರವಾಡಳ:

ನಾನೂ ಸೇರಿದಂತೆ ಹಲವು ದಲಿತ ಮುಖಂಡರ ಅವಕಾಶಗಳನ್ನು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಕಿತ್ತುಕೊಂಡಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಅವಕಾಶವಾದಿ ಎಂದು‌ ಕರೆದ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಈ ರೀತಿ ಉತ್ತರಿಸಿದರು.

ನನ್ನ ಎಲ್ಲ ಅವಕಾಶಗಳನ್ನು ನುಂಗಿದ್ದು ಖರ್ಗೆ ಕುಟುಂಬ. ನಾಲ್ಕು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ ದುಡಿದಿದ್ದು, ನ್ಯಾಯಯುತವಾಗಿ ಸಿಗಬೇಕಿದ್ದ ಎಲ್ಲ ಅವಕಾಶಗಳನ್ನು ಖರ್ಗೆ ಕುಟುಂಬ ತಪ್ಪಿಸಿದೆ. ನಾನು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿರುವುದು ಅವಕಾಶವಾದ ಎಂದು ಹೇಳುವುದಾದರೆ, ನಿಮಗೇನು ಯೋಗ್ಯತೆ ಇದೆ? ನಿಮ್ಮ ತಂದೆ 60 ವರ್ಷ ರಾಜಕಾರಣದಲ್ಲಿ ಇದ್ದಾರೆ. ಈ ರಾಜ್ಯದಲ್ಲಿ ಒಬ್ಬ ದಲಿತರನ್ನು ಬೆಳೆಸಿದ ನಿದರ್ಶನ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಾರಿ ಗೆದ್ದಿರುವ ಪ್ರಸಾದ ಅಬ್ಬಯ್ಯ, ಎ. ನಾರಾಯಣಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಶಿವಣ್ಣ ಇನ್ನಿತರ ದಲಿತ ಮುಖಂಡರನ್ನು ವಂಚಿಸಲಾಗಿದೆ. ಮೂರು ಬಾರಿ ಗೆದ್ದಿರುವ ಪ್ರಿಯಾಂಕ ಖರ್ಗೆ ಮೂರೂ ಬಾರಿ‌ಯೂ ಸಚಿವರಾಗಿರುವುದು ಇದಕ್ಕೆ ಸಾಕ್ಷಿ. ಕಲಬುರ್ಗಿಯಲ್ಲಿ‌ ಖರ್ಗೆ ಅವರ ಒಡನಾಡಿ ಆಗಿದ್ದ ಧರ್ಮಸಿಂಗ್ ಅವರ ಮಗನನ್ನು‌ ಹತ್ತಿಕ್ಕಲಾಗಿದೆ ಎಂದು ಹರಿಹಾಯ್ದರು.

ಯಾವ ದಲಿತತ್ವ ಗೊತ್ತಿದೆ ನಿಮಗೆ? ದಲಿತರ ಹೆಸರು ಹೇಳುತ್ತೀರಿ. ಲಕ್ಷಾಂತರ ಕೋಟಿ ಆಸ್ತಿ ಮಾಡಿದ್ದೀರಿ ಎಂದು ಜನರು ಮಾತನಾಡುತ್ತಾರೆ. ಅದು ಎಲ್ಲಿಂದ ಬಂತು? ಇಂದು ಮೈಸೂರು, ಚಾಮರಾಜನಗರ, ಕಲಬುರಗಿ ಎಲ್ಲೆಡೆ ನಿಮ್ಮ ಫೋಟೋ ಇಟ್ಟುಕೊಂಡು ಮೆಟ್ಟಿನ ಪೂಜೆ ಮಾಡುತ್ತಿದ್ದಾರೆ. ಮೊದಲು ಅದಕ್ಕೆ ಉತ್ತರ ಕೊಡಿ ಎಂದು ಛಲವಾದಿ ಕಿವಿಮಾತು ಹೇಳಿದರು.

ಹಿಂದೂಗಳ ಮೇಲಿನ ದೌರ್ಜನ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುತ್ವ ಈ ದೇಶದ ಅಸ್ಮಿತೆ. ಹಾಗಂತ, ಬೇರೆ ಧರ್ಮದವರನ್ನು ನಿಂದಿಸುವುದಾಗಲಿ ಅಥವಾ ವಿರೋಧಿಸುವ ಕೆಲಸ ಮಾಡಿಲ್ಲ. ಕೆಲವು ಸಲ ಹಿಂದುತ್ವದ ವಿರುದ್ಧ, ಹಿಂದೂಗಳ ವಿರುದ್ಧ ಕೆಲವು ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ, ಕಾಂಗ್ರೆಸ್ ನಿಲುವಿದೆ. ಕಾಂಗ್ರೆಸ್ ತತ್ವಗಳು ಮೊದಲಿನಿಂದಲೂ ಹಾಗೇ ಇವೆ. ಸಮಾಜ, ದೇಶವನ್ನು ಒಡೆದು ಆಳಿದರೆ ನಮ್ಮ ಮತ ಬ್ಯಾಂಕ್ ಸ್ಥಿರವಾಗಿರುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಆ ಕಾರಣದಿಂದ ನಾವು ಇನ್ನಷ್ಟು ಶ್ರದ್ಧೆಯಿಂದ, ಹೋರಾಟವನ್ನು ಜನಪರವಾಗಿ ಮಾಡಬೇಕು‌ ಎಂಬುದನ್ನು ನಾನು ಒಪ್ಪುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳು ಜಡ; ಅಖಂಡ ಬಳ್ಳಾರಿಯ ಪ್ರವಾಸೋದ್ಯಮಕ್ಕೆ ಬರ !
ಗ್ರಾಮ ಸಹಾಯಕರಿಗೂ ನಿವೇಶನ ನೀಡಲು ಮನವಿ