ಕುಟುಂಬವೊಂದರ ಓಲೈಕೆಗಾಗಿ ಖರ್ಗೆ ಹಗುರ ಮಾತು: ಶ್ರೀರಾಮುಲು

KannadaprabhaNewsNetwork |  
Published : Apr 24, 2026, 12:45 AM IST
ಶ್ರೀರಾಮುಲು | Kannada Prabha

ಸಾರಾಂಶ

ಪ್ರಧಾನಿಯನ್ನು ಭಯೋತ್ಪಾದಕ ಎಂದು ಹೇಳಿ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ.

ಬಳ್ಳಾರಿ: ಒಂದು ಕುಟುಂಬದ ಓಲೈಕೆಗಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯನ್ನು ಭಯೋತ್ಪಾದಕ ಎಂದು ಹೇಳಿ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ನಿಜವಾದ ಭಯೋತ್ಪಾದಕ ಯಾರು ಎಂಬುದನ್ನು ಕಾಂಗ್ರೆಸ್ಸಿನವರು ಸ್ಪಷ್ಟಪಡಿಸಬೇಕು. ಭಯೋತ್ಪಾದಕರಿಗೆ ಸನ್ಮಾನ ಮಾಡಿದ ಕಾಂಗ್ರೆಸ್ಸಿನವರಿಗೆ ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದರು.

ಅತ್ಯಂತ ಹಿರಿಯರು ಹಾಗೂ ರಾಜಕೀಯ ಅನುಭವಿಗಳಾಗಿರುವ ಮಲ್ಲಿಕಾರ್ಜುನ ಖರ್ಗೆ ಸಣ್ಣಖರ್ಗೆಯಂತೆ (ಪ್ರಿಯಾಂಕ್ ಖರ್ಗೆ) ಮಾತನಾಡುವುದು ಸರಿಯಲ್ಲ. ಸಣ್ಣ ಖರ್ಗೆಗೆ ತಿಳಿವಳಿಕೆಯಿಲ್ಲದೇ ಮಾತನಾಡುತ್ತಾನೆ. ಆದರೆ, ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರು ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಮಹಿಳಾ ವಿರೋಧಿ ಎಂಬುದು ಸಾಬೀತಾಗಿದೆ. ಮಹಿಳಾ ಮೀಸಲಾತಿಗೆ ಒಪ್ಪದ ಕಾಂಗ್ರೆಸ್ ಈ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಕಾಂಗ್ರೆಸ್‌ಗೆ ಮಹಿಳೆ ಎಂದರೆ ಗಾಂಧಿ ಕುಟುಂಬ ಮಾತ್ರ ಎಂದುಕೊಂಡಿದೆ. ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡುವ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಮಹಿಳೆಯರನ್ನು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ, ಸಂಘಟನೆಗಾಗಿ ಕಳೆದ 50 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿದ ಯಡಿಯೂರಪ್ಪ ಅವರಿಗೆ ಮೇ 9ರಂದು ಚಿತ್ರದುರ್ಗದಲ್ಲಿ ಸನ್ಮಾನ ಮಾಡಲಾಗುತ್ತಿದೆ. ಗೃಹ ಸಚಿವ ಅಮಿತ್‌ ಶಾ ಸಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಶ್ರೀರಾಮುಲು ತಿಳಿಸಿದರು.

ಪಕ್ಷದ ಜಿಲ್ಲಾ ಪ್ರಮುಖರಾದ ಎಸ್. ಗುರುಲಿಂಗನಗೌಡ, ಶ್ರೀನಿವಾಸ ಮೋತ್ಕರ್, ವೆಂಕಟರಮಣರೆಡ್ಡಿ, ಹನುಮಂತ ಗುಡಿಗಂಟಿ, ವೇಮಣ್ಣ, ಹನುಮಂತಪ್ಪ, ಉಜ್ವಲಾ ಸುದ್ದಿಗೋಷ್ಠಿಯಲ್ಲಿದ್ದರು.

-

ಸರ್ಕಾರಿ ಜಾಗ ಅತಿಕ್ರಮಿಗಳ ಪಟ್ಟಿ ಬಿಡುಗಡೆ ಮಾಡುವೆ:

ನಗರದ ವಿವಿಧೆಡೆ ಅತಿಕ್ರಮಣಗೊಂಡಿರುವ ಸರ್ಕಾರಿ ಜಾಗ ತೆರವುಗೊಳಿಸುತ್ತಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಗುಡಿಸಲು ಕಟ್ಟಿಕೊಂಡಿರುವ ಕೆಲವು ಬಡವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಏಕಾಏಕಿ ತೆರವು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಶ್ರೀರಾಮುಲು ಹೇಳಿದರು.

ನಲ್ಲಚರವು ಪ್ರದೇಶದ ಬಳಿ ಕೆಲವರು ಒಂದೊಂದು ಎಕರೆ ಅತಿಕ್ರಮಿಸಿದ್ದಾರೆ. ಯಾವುದೇ ಪಕ್ಷವಿರಲಿ, ಯಾರೇ ಇರಲಿ, ಅತಿಕ್ರಮಿತ ಎಲ್ಲ ಜಾಗವನ್ನು ತೆರವುಗೊಳಿಸಬೇಕು. ಬಳ್ಳಾರಿ ನಗರದಲ್ಲಿ ನನ್ನನ್ನು ಸೇರಿ ಕಾಂಗ್ರೆಸ್‌, ಬಿಜೆಪಿ ಯಾವುದೇ ಪಕ್ಷದ ಮುಖಂಡರು ಒತ್ತುವರಿ ಮಾಡಿದರೂ ತೆರವು ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ, ಮುಂದಿನ ವಾರ ಭೂ ಒತ್ತುವರಿ ಮಾಡಿರುವವರ ಪಟ್ಟಿ ಬಿಡುಗಡೆ ಮಾಡುವೆ ಎಂದು ಶ್ರೀರಾಮುಲು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಿಂದ ನಾಳೆಯಿಂದ ಐದು ದಿನ ಇನ್‌ಕಾಮೆಕ್ಸ್‌
ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆಗೈದು ಗೆದ್ದ ಬಡ ಮಕ್ಕಳು !