ಸಚಿವ ಎಸ್ಸೆಸ್ಸೆಂಗೆ ಮಂಜುನಾಥ ಗಡಿಗುಡಾಳ್ ಆಗ್ರಹ । ರಾಜ್ಯಮಟ್ಟದ ಪಿಯು ಕಾಲೇಜುಗಳ ಪಂದ್ಯಾವಳಿಗೆ ಮೇಯರ್ ವಿನಾಯಕ ಚಾಲನೆ
ಕನ್ನಡಪ್ರಭ ವಾರ್ತೆ ದಾವಣಗೆರೆಕ್ರೀಡಾಪಟುಗಳ ಊರಾದ ದಾವಣಗೆರೆಯಲ್ಲಿ ಖೋ ಖೋ, ಕಬಡ್ಡಿಯಂತಹ ದೇಸೀ ಕ್ರೀಡೆಗಳಿಗೂ ಪ್ರೋತ್ಸಾಹದ ಅಗತ್ಯವಿದ್ದು, ಸುಸಜ್ಜಿತ ಒಳಾಂಗಣ ಖೋ ಖೋ ಕ್ರೀಡಾಂಗಣ ನಿರ್ಮಾಣಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನರಿಗೆ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳ ಪರ ಒತ್ತಾಯಿಸುವೆ ಎಂದು ಪಾಲಿಕೆ ಸದಸ್ಯ ಜಿ.ಎಸ್.ಮಂಜುನಾಥ ಗಡಿಗುಡಾಳ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಖೋ ಖೋ ಪಂದ್ಯಾವಳಿ 2023-24ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಸೀ ಕ್ರೀಡೆಗಳ ಉಳಿಸಿ, ಬೆಳೆಸುವ ಅಗತ್ಯವಿದೆ. ಇಲ್ಲಿಯೂ ಕಬಡ್ಡಿ, ಖೋ ಖೋ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧಿಸಿದ ಕಿರಿಯ, ಹಿರಿಯ ಕ್ರೀಡಾಪಟುಗಳಿದ್ದಾರೆ. ಇಂತಹ ಕ್ರೀಡೆಗಳಿಗೆ ಪೂರಕ ಸೌಲಭ್ಯ ಕಲ್ಪಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕಿದೆ. ಈ ನಿಟ್ಟಿನಲ್ಲಿ ಒಳಾಂಗಣ ಖೋ ಖೋ ಅಂಕಣ ನಿರ್ಮಾಣದ ಬಗ್ಗೆ ಸಚಿವರ ಬಳಿ ವೈಯಕ್ತಿಕವಾಗಿ, ಕ್ರೀಡಾಪಟುಗಳ ಪರವಾಗಿ ಮನವಿ ಮಾಡುವೆ ಎಂದು ಭರವಸೆ ನೀಡಿದರು.ಸಸಿಗೆ ನೀರೆರೆಯುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದ ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್ ಮಾತನಾಡಿ, ಸ್ವತಃ ನಾನೂ ಒಬ್ಬ ಕುಸ್ತಿಪಟುವಾಗಿದ್ದು, ದೇಸೀ ಕ್ರೀಡೆಯ ಬಗ್ಗೆ ತುಂಬಾ ಅಭಿಮಾನ ಹೊಂದಿರುವವನು. ನಿತ್ಯ ಗರಡಿ ಮನೆಯಲ್ಲಿ ತಾಲೀಮು ಮಾಡಿ, ಅಖಾಡದಲ್ಲಿ ಕುಸ್ತಿ ಆಡುತ್ತಿದ್ದವನು. ಯಾವುದೇ ಕ್ರೀಡೆಯಾದರೂ ನಿರಂತರ ಶ್ರದ್ಧೆ, ಸತತ ಅಭ್ಯಾಸ ಅತ್ಯಗತ್ಯ. ದೇಶೀ ಕ್ರೀಡೆಗಳಲ್ಲಿ ಖೋ ಖೋ ಸಹ ಒಂದಾಗಿದ್ದು, ಚುರುಕುತನ, ದೈಹಿಕ ಸಾಮರ್ಥ್ಯದ ಆಟ ಇದಾಗಿದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕ್ರೀಡಾ ಘನತೆ ಎತ್ತಿ ಹಿಡಿದು ಉನ್ನತ ಸಾಧನೆ ಮಾಡಿ ಎಂದು ಕ್ರೀಡಾಪಟುಗಳಿಗೆ ಹಾರೈಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಟಿ.ಕರಿಸಿದ್ದಪ್ಪ ಮಾತನಾಡಿ, ದೀಪಾವಳಿ ಹಬ್ಬದ ಸಂಭ್ರಮದ ಜೊತೆಗೆ ದಾವಣಗೆರೆಯಲ್ಲಿ ಖೋ ಖೋ ಕ್ರೀಡಾಕೂಟದ ಹಬ್ಬವೂ ನಡೆದಿದೆ. ಶ್ರೀ ಸಿದ್ಧಗಂಗಾ ಪಿಯು ಕಾಲೇಜಿನ ಸಹಯೋಗದಲ್ಲಿ ಇಂದಿನಿಂದ 2 ದಿನ ನಡೆಯುವ ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯದ 33 ಜಿಲ್ಲೆಗಳಿಂದ ಸುಮಾರು 800ಕ್ಕೂ ಹೆಚ್ಚು ಕ್ರೀಡಾಪಟುಗಳು, ತಂಡದ ವ್ಯವಸ್ಥಾಪಕರು, ತೀರ್ಪುಗಾರರು, ಸಾವಿರಾರು ಮಂದಿ ಸೇರಿದ್ದಾರೆ ಎಂದರು.ರಾಜ್ಯ ವಿವಿಗಳ ಪ್ರಾಧ್ಯಾಪಕರ ಸಂಘಟನೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್.ಮುರುಗೇಂದ್ರಪ್ಪ, ಮಾಜಿ ಮೇಯರ್ ಎಸ್.ಟಿ.ವೀರೇಶ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಕಾರ್ಯದರ್ಶಿ ಡಾ.ಡಿ.ಎಸ್.ಜಯಂತ್, ಪ್ರಾಚಾರ್ಯರಾದ ವಾಣಿಶ್ರೀ, ಸದಾಶಿವ ಹೊಳ್ಳ, ಪಾಲಾಕ್ಷಿ, ಟಿ.ಆರ್.ಬಸವರಾಜ ಇತರರಿದ್ದರು. ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಪರಮೇಶ್ವರಪ್ಪ, ಕೆ.ಎಂ.ಮಾರವಳ್ಳಿ, ಜಗನ್ನಾಥ, ಟಿ.ಆರ್.ಬಸವರಾಜ, ಎಸ್.ಗೋಪಾಲರನ್ನು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದಿಂದ ಸನ್ಮಾನಿಸಲಾಯಿತು. ಆರ್.ಪ್ರದೀಪಕುಮಾರ, ಸಂತೋಷ್ ಕಾರ್ಯಕ್ರಮ ನಡೆಸಿಕೊಟ್ಟರು.
ಪಥ ಸಂಚಲನ, ಕ್ರೀಡಾ ಜ್ಯೋತಿ ಹಸ್ತಾಂತರರಾಜ್ಯದ 33 ಜಿಲ್ಲೆಗಳಿಂದ 33 ಬಾಲಕರ, 33 ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ತಂಡಗಳಿಂದ ಆಕರ್ಷಕ ಪಥ ಸಂಚಲನ, ವಿವಿಧ ಜಿಲ್ಲೆಯ ತಂಡಗಳ ನಾಯಕರ ಪರಿಚಯ ನಡೆಯಿತು. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕ್ರೀಡಾ ಜ್ಯೋತಿ ಸಹಿತ ಧಾವಿಸಿದರು. ನಂದಿಕೋಲಿನ ನೃತ್ಯದ ಜೊತೆಗೆ ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಲಾಯಿತು. ದೈಹಿಕ ಶಿಕ್ಷಕ ಪುಟ್ಟಸ್ವಾಮಿ ನೇತೃತ್ವದಲ್ಲಿ ಮೇಯರ್ ವಿನಾಯಕ ಪೈಲ್ವಾನ್ ಧ್ವಜಾರೋಹಣ ನೆರವೇರಿಸಿ, ಕ್ರೀಡಾಕೂಟಕ್ಕೆ, ತಂಡಗಳಿಗೆ ಶುಭ ಹಾರೈಸಿದರು. ಜಿದ್ದಾಜಿದ್ದಿನಿಂದ ಕೂಡಿದ್ದ ಹಗಲು ಹೊತ್ತಿನ ಪಂದ್ಯಗಳ ಜೊತೆಗೆ ಸಂಜೆಯಿಂದ ಹೊನಲು ಬೆಳಕಿನಲ್ಲಿ ನಡೆಯುವ ಪಂದ್ಯಗಳು ಖೋ ಖೋ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿವೆ. ................