ಶಿರಸಿ:
ನಮ್ಮ ಯುವ ಜನತೆಯ ಬುದ್ಧಿಮತ್ತೆ ವಿದೇಶಿಯರ ಪಾಲಾಗಬಾರದು. ಕಲಿತ ಯುವ ಜನತೆ ವಿದೇಶಗಳತ್ತ ಮುಖ ಮಾಡುವ ಬದಲು ದೇಶದ ಅಭಿವೃದ್ಧಿಗೆ ಶ್ರಮಿಸುವಂತಾಗಬೇಕು ಎಂದು ಉದ್ಯಮಿ ಡಾ. ವಿಜಯ ಸಂಕೇಶ್ವರ ಹೇಳಿದರು.ನಗರದ ನೆಮ್ಮದಿ ಕುಟೀರದಲ್ಲಿ ಶನಿವಾರ ಆಯೋಜಿಸಿದ್ದ "ಧನ್ಯವಾದ " ದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವೃತ್ತಿ ನಿಷ್ಠೆ, ಪ್ರಾಮಾಣಿಕ ಪ್ರಯತ್ನವಿದ್ದಲ್ಲಿ ಯಶಸ್ಸು ಸಾಧ್ಯವಿದೆ. ಜೀವನದಲ್ಲಿ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಗುರಿ ಇಟ್ಟುಕೊಂಡು ಅರ್ಥಪೂರ್ಣವಾದ ಜೀವನ ನಡೆಸಬೇಕು. ಯಾವುದೇ ಕೆಲಸ ಮಾಡುವಾಗಲೂ ಒಂದು ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಕೊನೆಯುಸಿರಿರುವ ವರೆಗೂ ಕಾಯಕದಲ್ಲಿ ತೊಡಗಿಕೊಂಡಿರ ಬೇಕು. ಜನರ ಸೇವೆಯನ್ನು ಮಾಡುತ್ತೇನೆ ಎಂಬ ಛಲವಿರಬೇಕು ಎಂದರು. ನಾನು ಸಂಸದನಾಗಿದ್ದ ಸಮಯದಲ್ಲಿ ಅನೇಕ ಮುಕ್ತಿಧಾಮಗಳಿಗೆ ಅನುದಾನವನ್ನು ನೀಡುವ ಸೌಭಾಗ್ಯ ಸಿಕ್ಕಿತ್ತು. ನಮ್ಮ ವಿಆರ್‌ಎಲ್ ಕಂಪನಿ ವತಿಯಿಂದ ವಿದ್ಯಾ ನಗರ ರುದ್ರಭೂಮಿ ಅಭಿವೃದ್ಧಿ ಸಮಿತಿಗೆ ಹಣ ಬಿಡುಗಡೆ ಅವಕಾಶ ಸಿಕ್ಕಿದೆ. ಇಂತಹ ಪುಣ್ಯ ಕೆಲಸಕ್ಕೆ ಅವಕಾಶ ಸಿಕ್ಕಿರುವುದಕ್ಕೆ ನಮ್ಮ ಸಂಸ್ಥೆಯ ಪರವಾಗಿ ಧನ್ಯವಾದಗಳು ಎಂದರು.ಶಿರಸಿ, ಯಲ್ಲಾಪುರ, ಸಾಗರದ ಭಾಗದ ಜನರು ಬಹಳ ಪ್ರಾಮಾಣಿಕ, ಬುದ್ಧಿವಂತ ಹಾಗೂ ಪರಿಶ್ರಮಿಗಳು. ಆದರೆ ಈಗೀಗ ಜನರು ಇಲ್ಲಿನ ಆಸ್ತಿಗಳನ್ನು ಮಾರಿ ಹೊರದೇಶಗಳಿಗೆ ಹೋಗುತ್ತಿರುವುದು ನೋಡಿದರೆ ಬೇಸರವಾಗುತ್ತದೆ. ಮುಂದಿನ ಭವಿಷ್ಯ ಕತ್ತಲಿನಲ್ಲಿದೆ. ನಮ್ಮ ದೇಶಕ್ಕಾಗಿ ನಾವು ದುಡಿಯಬೇಕು. ನಮ್ಮ ಶ್ರಮ ನಮ್ಮ ಬುದ್ಧಿಮಟ್ಟವನ್ನು ಬೇರೆ ದೇಶಕ್ಕೆ ಸಮರ್ಪಣೆ ಮಾಡಬಾರದು. ಮುಂದಿನ ಪೀಳಿಗೆ ಉಜ್ವಲವಾಗಲು ನಮ್ಮ ಶ್ರಮ ದೇಶಕ್ಕೆ ಅವಶ್ಯಕ ಎಂದರು.
ಸನ್ಮಾನ ಸ್ವೀಕರಿಸಿದ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನೆಮ್ಮದಿ ಕುಟೀರಕ್ಕೆ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ₹60 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಆ ಅನುದಾನವು ಕೈ ಸೇರಲು ಸಾಕಷ್ಟು ಶ್ರಮ ಪಡಬೇಕಾಯಿತು ಎಂದರು.ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಶೀನಾಥ್ ಮೂಡಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ಪಿ. ಹೆಗಡೆ ವೈಶಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.