ಗ್ರಾಮ ಆರೋಗ್ಯ ಕಾರ್ಯಕ್ರಮಗಳ ಕುರಿತು ಅಧ್ಯಯನ, ಕಲಿಕಾ ಪ್ರವಾಸ
ಹರಿಹರ ತಾಲೂಕಿನ ಕುಣೆಬೆಳಕೆರೆ ಗ್ರಾಮ ಪಂಚಾಯಿತಿ ಹಾಗೂ ದಾವಣಗೆರೆ ತಾಲೂಕಿನ ಮುದಹದಡಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಕೆಎಚ್‌ಪಿಟಿ (ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್) ರಾಜ್ಯ ತಂಡದ ವತಿಯಿಂದ ಗ್ರಾಮ ಆರೋಗ್ಯ ಕಾರ್ಯಕ್ರಮಗಳ ಚಟುವಟಿಕೆಗಳ ಕುರಿತಾಗಿ ಕಲಿಕಾ ಪ್ರವಾಸ ಹಾಗೂ ಅಧ್ಯಯನ ನಡೆಸಲಾಯಿತು.
ಹರಿಹರ ತಾಲೂಕಿನ ಕುಣೆಬೆಳಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯತ್ ಕಾರ್ಯಪಡೆ ಸಭೆ ವೀಕ್ಷಣೆ, ಕ್ರಿಯಾ ಯೋಜನೆ ಮಾದರಿ, ಸಭೆಯಲ್ಲಿ ನಡೆಸುವ ಚರ್ಚೆಗಳ ಅಧ್ಯಯನ ತಂಡ ಮಾಹಿತಿ ಪಡೆಯಿತು.ಗ್ರಾಮ ಆರೋಗ್ಯ ಕಾರ್ಯಕ್ರಮ ಕುರಿತಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ನವ್ಯಾ, ಪಿಎಚ್‌ಸಿಒ ಸೌಮ್ಯಾ ರೆಡ್ಡಿ, ಅಕ್ಷತಾ ಆರೋಗ್ಯ ಜಾಗೃತಿ ಹಾಗೂ ಕಾರ್ಯಕ್ರಮ ರೂಪು ರೇಷೆ ಕುರಿತಾಗಿ ಮಾಹಿತಿ ನೀಡಿದರು. ಕುಣೆಬೆಳಕೆರೆ ಗ್ರಾಮ ಪಂಚಾಯತ್ ಕಾರ್ಯಪಡೆ ವತಿಯಿಂದ ಎರಡು ವರ್ಷಗಳಿಂದ ಗ್ರಾಮ ಆರೋಗ್ಯ ಕಾರ್ಯಕ್ರಮ ಆಯೋಜನೆ ಹಾಗೂ ಯಶಸ್ವಿಗೊಳಿಸಿ ಬಂದಿರುವ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದರು. ಸಿಬ್ಬಂದಿ ಮಂಜಪ್ಪ, ಗ್ರಾಮ ಪಂಚಾಯತ್ ಕಾರ್ಯಪಡೆ ಸಮಿತಿ ವತಿಯಿಂದ ಗ್ರಾಮ ಆರೋಗ್ಯ ಕಾರ್ಯಕ್ರಮ ಕುರಿತು ನಿರ್ವಹಿಸುತ್ತಿರುವ ದಾಖಲೀಕರಣ ಕುರಿತಾಗಿ, 2.0 ದಾಖಲು ಮಾಡುತ್ತಿರುವ ಕುರಿತು ಮಾಹಿತಿ ನೀಡಿದರು
ಅಧ್ಯಯನ ತಂಡದೊಂದಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಆರೋಗ್ಯ ಸಿಬ್ಬಂದಿಗಳು, ಕಾರ್ಯದರ್ಶಿ ನೋಡಲ್ ಅಧಿಕಾರಿಗಳು ಅಗತ್ಯ ಮಾಹಿತಿಗಳ ಕುರಿತು ಚರ್ಚಿಸಿದರು. ಅನಿಸಿಕೆ ಅಭಿಪ್ರಾಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.