ಗಜೇಂದ್ರಗಡ: ಪಟ್ಟಣದ ಬಣಗಾರ ಓಣಿಯ ನಿವಾಸಿ ವಿದ್ಯಾರ್ಥಿನಿ ಖುಷಿ ಲಕ್ಷ್ಮಣಸಾ ರಂಗ್ರೇಜಿ (೧೫) ಆತ್ಮಹತ್ಯೆ ಸಂಶಯಾಸ್ಪದವಾಗಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮೃತ ವಿದ್ಯಾರ್ಥಿನಿಯ ಶವ ಸಂಸ್ಕಾರದ ಮೆರವಣಿಗೆ ನಡೆಸಿದ ಘಟನೆ ಗುರುವಾರ ನಡೆಯಿತು.
ಬಳಿಕ ಶವವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ರಾತ್ರಿ ಹಿಂದುಪರ ಸಂಘಟನೆಗಳ ಮುಖಂಡರು ವಿದ್ಯಾರ್ಥಿನಿ ಆತ್ಮಹತ್ಯೆ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.
ಗುರುವಾರ ಮರಣೋತ್ತರ ಪರೀಕ್ಷೆ ಬಳಿಕ ಮೃತ ವಿದ್ಯಾರ್ಥಿನಿ ಮನೆಯಿಂದ ಹಿಂದೂಪರ ಸಂಘಟನೆ ಮುಖಂಡರು ಹಾಗೂ ಎಸ್.ಎಸ್.ಕೆ ಸಮಾಜದವರು ವಿದ್ಯಾರ್ಥಿನಿ ಮೃತದೇಹ ಅಂತ್ಯ ಸಂಸ್ಕಾರ ತೆರಳುವ ಮೆರವಣಿಗೆಯು ಕಾಲಕಾಲೇಶ್ವರ ವೃತ್ತ ತಲುಪುತ್ತಿದ್ದಂತೆ ಕೆಲವರು ರಸ್ತೆ ತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಲು ಮುಂದಾದಾಗ ಪಿಎಸ್‌ಐ ಸೋಮನಗೌಡ ಗೌಡ್ರ ನಿರಾಕರಿಸಿದರು. ಹೀಗಾಗಿ ಕೆಲ ಸಮಯ ಪೊಲೀಸರು ಹಾಗೂ ಸಮಾಜದ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಯಿತು. ಬಳಿಕ ಸಿಪಿಐ ಎಸ್.ಎಸ್. ಬೀಳಗಿ ಅವರಿಗೆ ಆತ್ಮಹತ್ಯೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಮನವಿ ನೀಡಿದ ಬಳಿಕ ಅಲ್ಲಿಂದ ತೆರಳಿ ಪಟ್ಟಣದ ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲಾಯಿತು.ಈ ಘಟನೆ ಹಿನ್ನೆಲೆಯಲ್ಲಿ ಎಸ್.ಎಸ್.ಕೆ ಸಮಾಜದ ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ವಿದ್ಯಾರ್ಥಿನಿ ಶವದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ನಮ್ಮ ಸಮಾಜದ ವಿದ್ಯಾರ್ಥಿನಿಯರು ಆತ್ಮಹತ್ಯೆಯಂತ ನಿರ್ಧಾರಕ್ಕೆ ಬರಬಾರದು ಹಾಗೂ ವಿದ್ಯಾರ್ಥಿನಿಯರನ್ನು ರೇಗಿಸುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸಮಾಜದವರು ಶವ ಸಂಸ್ಕಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಮೆರವಣಿಗೆ ನಡೆಸಿಲ್ಲ ಎಂದು ಎಸ್.ಎಸ್.ಕೆ ಸಮಾಜದ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಪ್ರತಿಕ್ರಿಯೆ ನೀಡಿದರು.