ಕಿಲ್ಲಾರಹಟ್ಟಿ ತಾಂಡಾ: ನಿಯಂತ್ರಣಕ್ಕೆ ಬಂದ ಜ್ವರ, ಸ್ವಚ್ಛತೆ ಶುರು

KannadaprabhaNewsNetwork |  
Published : Jun 21, 2025, 12:49 AM IST
ಪೋಟೊ20ಕೆಎಸಟಿ1: ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದಲ್ಲಿ ಜ್ವರ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಿಸುವದು ಬ್ಲೀಚಿಂಗ್ ಪೌಡರ ಸಿಂಪರಣೆಯ ಕಾರ್ಯ ಭರದಿಂದ ಸಾಗಿದೆ.20ಕೆಎಸಟಿ1ಎ: ಕಿಲ್ಲಾರಹಟ್ಟಿ ತಾಂಡಾದಲ್ಲಿ  ಸ್ಥಾಪಿಸಲಾದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ. | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದಲ್ಲಿ ಐದಾರು ದಿನಗಳಿಂದ ಅನೈರ್ಮಲ್ಯದ ವಾತಾವರಣದಿಂದ 40ಕ್ಕೂ ಅಧಿಕ ಜನರಿಗೆ ಜ್ವರ, ಮೈಕೈ ನೋವು ಸೇರಿದಂತೆ ಶಂಕಿತ ಡೆಂಘೀ ಜ್ವರದ ಲಕ್ಷಣಗಳು ಕಂಡು ಬಂದಿದ್ದವು. 30ಕ್ಕೂ ಅಧಿಕ ಜನರಿಗೆ ರಕ್ತ ತಪಾಸಣೆ ಮಾಡಿದಾಗ ಗುರುವಾರ ಓರ್ವರಿಗೆ ಡೆಂಘೀ ದೃಢ ಪಟ್ಟಿತ್ತು.

ಕುಷ್ಟಗಿ:

ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದಲ್ಲಿ 40ಕ್ಕೂ ಅಧಿಕ ಜನರಿಗೆ ಕಾಣಿಸಿಕೊಂಡಿದ್ದ ಜ್ವರ ನಿಯಂತ್ರಣಕ್ಕೆ ಬಂದಿದ್ದು, ತಾಂಡಾದಲ್ಲಿ ಚರಂಡಿ ಸ್ವಚ್ಛಗೊಳಿಸಿ ಫಾಗಿಂಗ್‌, ಬ್ಲೀಚಿಂಗ್‌ ಫೌಡರ್‌ ಸಿಂಪಡಿಸಲಾಗುತ್ತಿದೆ. ಈ ಮೂಲಕ ಡೆಂಘೀ ಪ್ರಕರಣ ಉಲ್ಬಣಿಸದಂತೆ ಗ್ರಾಮ ಪಂಚಾಯಿತಿ ಕ್ರಮಕೈಗೊಂಡಿದೆ. ಶುಕ್ರವಾರ ಮೂವರಿಗೆ ಜ್ವರ ಕಾಣಿಸಿಕೊಂಡಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. 12 ಜನರಿಗೆ ಚಿಕಿತ್ಸೆ ಪಡೆದುಕೊಂಡಿದ್ದು ಗುಣಮುಖರಾಗುತ್ತಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುದೇನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ತಾತ್ಕಾಲಿಕವಾಗಿ ಆರಂಭಿಸಿರುವ ಕ್ಲಿನಿಕ್‌ನಲ್ಲಿ ಜನರಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ. ಅತ್ತ ಕಿಲ್ಲಾರಹಟ್ಟಿಯ ಗ್ರಾಮ ಪಂಚಾಯಿತಿ ಸಿಬ್ಬಂದಿ ತಾಂಡದ ಪ್ರತಿ ಓಣಿಗೆ ಹೋಗಿ ಸ್ವಚ್ಛತೆಯಲ್ಲಿ ತೊಡಗಿದ್ದಾರೆ.

ಐದಾರು ದಿನಗಳಿಂದ ತಾಂಡಾದಲ್ಲಿ ಅನೈರ್ಮಲ್ಯದ ವಾತಾವರಣದಿಂದ 40ಕ್ಕೂ ಅಧಿಕ ಜನರಿಗೆ ಜ್ವರ, ಮೈಕೈ ನೋವು ಸೇರಿದಂತೆ ಶಂಕಿತ ಡೆಂಘೀ ಜ್ವರದ ಲಕ್ಷಣಗಳು ಕಂಡು ಬಂದಿದ್ದವು. 30ಕ್ಕೂ ಅಧಿಕ ಜನರಿಗೆ ರಕ್ತ ತಪಾಸಣೆ ಮಾಡಿದಾಗ ಗುರುವಾರ ಓರ್ವರಿಗೆ ಡೆಂಘೀ ದೃಢ ಪಟ್ಟಿತ್ತು. ಇದರಿಂದ ಇಡೀ ತಾಂಡಾದ ಜನರು ಆತಂಕಗೊಂಡಿದ್ದರು. ಗುರುವಾರ ತಾಂಡಾಕ್ಕೆ ಜಿಲ್ಲಾ ಸರ್ವೆಲೆನ್ಸ್‌ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದರು. ಅನಾರೋಗ್ಯದ ಲಕ್ಷಣ ಕಂಡು ಬಂದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿವಳಿಕೆ ಮೂಡಿಸಿದ್ದರು. ಜತೆಗೆ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಿದ್ದರಿಂದ ಮುದೇನೂರು ಆರೋಗ್ಯ ಕೇಂದ್ರದ ಸಿಬ್ಬಂದಿ ತಾತ್ಕಾಲಿಕ ಕ್ಲಿನಿಕ್‌ ತೆರೆದು ಜನರ ಆರೋಗ್ಯ ತಪಾಸಣೆ ಮಾಡಿ ಔಷಧಿ ವಿತರಿಸಿದ್ದರು. ಹೀಗಾಗಿ ಜ್ವರದ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ.

ಸ್ವಚ್ಛತೆಗೆ ಮುಂದಾದ ಗ್ರಾಪಂ:

ತಾಂಡದಲ್ಲಿ ಡೆಂಘೀ, ಜ್ವರದ ಪ್ರಕರಣ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಿಲ್ಲಾರಹಟ್ಟಿಯ ಗ್ರಾಮ ಪಂಚಾಯಿತಿ, ತಾಂಡಾದ ರಸ್ತೆಯಲ್ಲಿ ನಿಂತಿರುವ ನೀರು, ತ್ಯಾಜ್ಯ ಸ್ವಚ್ಛಗೊಳಿಸಿದೆ. ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್‌ ಮಾಡಿ ಬ್ಲೀಚಿಂಗ್‌ ಫೌಡರ್‌ ಸಿಂಪಡಿಸಿದೆ. ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸಹ ಶುಚಿಗೊಳಿಸಲಾಗಿದೆ.

ಮುಂದುವರಿದ ಲಾರ್ವಾ ಸರ್ವೇ:

ಮುಂಜಾಗ್ರತಾ ಕ್ರಮವಾಗಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಅಧಿಕಾರಿಗಳು ಶುಕ್ರವಾರವೂ ಮನೆ-ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇ ಕೈಗೊಂಡು ಜನರಿಗೆ ಸ್ವಚ್ಛತೆ ಹಾಗೂ ನೀರಿನ ಬಗ್ಗೆ ಜಾಗೃತಿ ಮೂಡಿಸಿದರು.ಕಿಲ್ಲಾರಹಟ್ಟಿ ತಾಂಡಾದಲ್ಲಿ ಉಲ್ಬಣಗೊಂಡಿರುವ ಜ್ವರದ ನಿಯಂತ್ರಣಕ್ಕಾಗಿ ಅನೈರ್ಮಲ್ಯ ವಾತಾವರಣ ಶುಚಿಗೊಳಿಸುವ ಜತೆಗೆ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿ ಬ್ಲೀಚಿಂಗ್ ಫೌಡರ್‌ ಹಾಕಿಸಲಾಗಿದೆ.

ಶಂಕ್ರಪ್ಪ ಮಂಕಣಿ ಪಿಡಿಒ ಕಿಲ್ಲಾರಹಟ್ಟಿ ಗ್ರಾಪಂಜ್ವರ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದು ತಾತ್ಕಾಲಿಕ ಚಿಕಿತ್ಸಾ ಕೇಂದ್ರದ ಮೂಲಕ ರೋಗಿಗಳಿಗೆ ಔಷಧಿ ವಿತರಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ಸ್ವಚ್ಛತಾ ಕಾರ್ಯ ಆರಂಭವಾಗಿದೆ.

ಡಾ. ಗುರುನಗೌಡ ಪಾಟೀಲ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಮುದೇನೂರು

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ