ಈಶ್ವರವನದಲ್ಲಿ ಅಳಿವಿನಂಚಿನ ಮರಗಳ ಮಾರಣಹೋಮ

KannadaprabhaNewsNetwork |  
Published : Nov 14, 2024, 12:53 AM ISTUpdated : Nov 14, 2024, 12:54 AM IST
ಪೊಟೊ: 13ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಈಶ್ವರವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಎಂ.ವಿ.ನಾಗೇಶ್ ಮಾತನಾಡಿದರು. | Kannada Prabha

ಸಾರಾಂಶ

ಸವಳಂಗ ರಸ್ತೆಯ ಅಬ್ಬಲಗೆರೆಯ ಈಶ್ವರವನದಲ್ಲಿ ನೂರಾರು ಜಾತಿಯ ಅಳಿವಿನಂಚಿನ ಮರಗಳನ್ನು ಮೆಸ್ಕಾಂ ಸಿಬ್ಬಂದಿಗಳು ಅನಧಿಕೃತವಾಗಿ ಮಾರಣಹೋಮ ಮಾಡಿದ್ದಾರೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಎಂ.ವಿ. ನಾಗೇಶ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸವಳಂಗ ರಸ್ತೆಯ ಅಬ್ಬಲಗೆರೆಯ ಈಶ್ವರವನದಲ್ಲಿ ನೂರಾರು ಜಾತಿಯ ಅಳಿವಿನಂಚಿನ ಮರಗಳನ್ನು ಮೆಸ್ಕಾಂ ಸಿಬ್ಬಂದಿಗಳು ಅನಧಿಕೃತವಾಗಿ ಮಾರಣಹೋಮ ಮಾಡಿದ್ದಾರೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಎಂ.ವಿ. ನಾಗೇಶ್ ಆರೋಪಿಸಿದ್ದಾರೆ.

ಬುಧವಾರ ಈಶ್ವರವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಕೃತಿ ಆರಾಧನೆಯ ಪ್ರತೀಕವಾಗಿ ಪ್ರತಿವರ್ಷ ಶಿವರಾತ್ರಿಯಂದು ಸಾವಿರಾರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಾಪಾಡಿಕೊಳ್ಳುವುದರ ಮಹತ್ವ ಕುರಿತು ಜನಜಾಗೃತಿ ಮೂಡಿಸುವ ಸತ್ಕಾರ್ಯಗಳನ್ನು ಮಾಡುತ್ತ ಬರಲಾಗುತ್ತಿದೆ ಎಂದರು.ಪ್ರಕೃತಿಯ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಜೀವನ, ಶಾಲಾ ಮಕ್ಕಳಿಗೆ ಪರಿಸರ ಶಿಕ್ಷಣ ಬೋಧನೆ, ಪ್ರಕೃತಿ ಪೂರಕ ಹಬ್ಬಗಳ ಆಚರಣೆಯ ಮಹತ್ವ ಸಾರುವ ಕೆಲಸಗಳನ್ನು ಮಾಡುತ್ತಿರುವುದು ಈಶ್ವರವನದ ಹೆಗ್ಗಳಿಕೆಯಾಗಿದೆ. ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಸಾರ್ವಜನಿಕರಿಗಿಂತ ಸರ್ಕಾರಗಳ ಹಾಗೂ ಅಂಗಸಂಸ್ಥೆಗಳ ಪಾತ್ರ ಮಹತ್ವ ಪಡೆಯುತ್ತದೆ ಎಂದು ಹೇಳಿದರು.

ಮೆಸ್ಕಾಂ ಈ ಸಾಮಾಜಿಕ ಹೊಣೆಗಾರಿಕೆಯಲ್ಲಿ ತನ್ನ ಬೇಜವಾಬ್ದಾರಿತನ ತೋರಿದ್ದರ ಪರಿಣಾಮ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಅಳಿವಿನಂಚಿನ ಮರಗಳು ನಾಶವಾಗಿವೆ. ವಿದ್ಯುತ್ ತಂತಿಗಳಿಗೆ ಸಮೀಪ ಬೆಳೆದಿರುವ ರೆಂಬೆ ಕೊಂಬೆಗಳನ್ನು ಟ್ರಿಮ್ ಮಾಡುವ ನೆಪದಲ್ಲಿ ಬುಡ ಸಮೇತ ಕಡಿತಲೆ ಮಾಡಿರುವ ಮೆಸ್ಕಾಂ ಸಿಬ್ಬಂದಿಯ ಹೊಣೆಗೇಡಿತನಕ್ಕೆ ಮರಗಳ ಮಾರಣಹೋಮ ಆಗಿ ಹೋಗಿದೆ ಎಂದು ಖಂಡಿಸಿದರು.

ನವೆಂಬರ್ 12ರಂದು ಈಶ್ವರವನದ ಮುಂಭಾಗದ ರಸ್ತೆ ಬದಿಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮರಗಳನ್ನು ನೆಲಸಮ ಮಾಡಿರುವುದಲ್ಲದೇ, ಅಕ್ರಮವಾಗಿ ಈಶ್ವರವನದ ಒಳಗೆ ಪ್ರವೇಶ ಮಾಡಿ, ವಿದ್ಯುತ್ ತಂತಿ ಹಾದು ಹೋಗಿರುವ ಕಂಬಗಳಿಂದ ಅತಿ ದೂರದಲ್ಲಿರುವ ಮರಗಳನ್ನೂ ಕಡಿದಿರುವುದು ಮೆಸ್ಕಾಂ ಸಿಬ್ಬಂದಿಯ ಹಾಗೂ ಆದೇಶ ಮಾಡಿದ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಈ ಕಾರ್ಯ ನಿರ್ವಹಿಸಲು ಅಗತ್ಯ ಸಲಕರಣೆಗಳ ಉಪಯೋಗ ಮಾಡಿಕೊಳ್ಳದೇ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿದರು.

ಈ ಕಡಿತಲೆಗೆ ಒಳಗಾದ ಮರಗಳಲ್ಲಿ ಬಿಲ್ವಾರಾ, ಬೇವು, ಸಪ್ತಪರ್ಣಿ, ನುಗ್ಗೆ, ಸಾಗುವಾನಿ, ಹೊಂಗೆ ಇತ್ಯಾದಿ ಜಾತಿಯ ಮರಗಳಿದ್ದು, ಬಿದಿರಿನ ಕಡಿತಲೆಗೆ ಅರಣ್ಯ ಇಲಾಖೆಯ ನಿಷೇಧವಿದ್ದರೂ ಬಿದಿರು ಕುಡಿಗಳನ್ನು ಕಡಿದು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ. ಇಲಾಖಾ ನಿಯಮದನ್ವಯ ವಿದ್ಯುತ್ ತಂತಿಗಳ ಬಳಿ ಚಾಚಿಕೊಂಡಿರುವ ಟೊಂಗೆಗಳನ್ನು ಮಾತ್ರ ಕಡಿಯಲು ಅವಕಾಶವಿದೆ. ಆದರೂ ಇವರು ಅಳಿವಿನಂಚಿನ ಮರಗಳೆಂದೂ ಲೆಕ್ಕಿಸದೇ ನೆಲ ಮಟ್ಟದವರೆಗೂ ಕಡಿದಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದು, ಮೆಸ್ಕಾಂ ವಿರುದ್ದ ಮೊಕದ್ದಮೆ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ನಾಗರಾಜ ಶೆಟ್ಟರ್, ಜನಾರ್ಧನ್ ಪೈ, ಪರಿಸರ ರಮೇಶ್, ಶರಣ್ಯ ನಾಗೇಶ್ ಉಪಸ್ಥಿತರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ