ಚನ್ನರಾಯಪಟ್ಟಣ: ಕೋಟೆ ಭಾಗದಲ್ಲಿರುವ ಶ್ರೀ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ ಆರಾಧನಾ ಮಹೋತ್ಸವ ಆಗಸ್ಟ್ ೮ ರಿಂದ ೧೨ ರವರೆಗೆ ಜರುಗಲಿದೆ ಎಂದು ಶ್ರೀಮಠದ ಅಧ್ಯಕ್ಷ ಸಿ.ವಿ. ರಾಜಪ್ಪ ತಿಳಿಸಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಆರಾಧನಾ ಮಹೋತ್ಸವ ಭಕ್ತರ ಸಹಕಾರದಲ್ಲಿ ನಡೆಯುತ್ತಿದೆ. ಆ.೮ರಂದು ಶುಕ್ರವಾರ ರಾಯರಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಸಂಜೆ ವಿವೇಕ ಜಾಗೃತ ಬಳಗದಿಂದ ಭಜನಾ ಕಾರ್ಯಕ್ರಮ. ಆ.೯ರ ಶನಿವಾರ ಪಂಚಾಮೃತ ಅಭಿಷೇಕ, ಗೋಪೂಜೆ, ಧಾನ್ಯಪೂಜೆ, ಧ್ವಜಾರೋಹಣ ಕಾರ್ಯಕ್ರಮಗಳು, ಸಂಜೆ ವೆಂಕಟೇಶ್ವರ ಭಜನಾ ಮಂಡಳಿಯಿಂದ ಭಜನೆ, ಆ.೧೦ರಂದು ಪೂರ್ವಾರಾಧನೆ ಪಂಚಾಮೃತ ಅಭಿಷೇಕ, ಪಾದಪೂಜೆ, ಓಂಕಾರೇಶ್ವರ ಭಜನಾ ಮಂಡಳಿಯಿಂದ ಭಜನೆ, ಸಂಜೆ ವಿಧುಷಿ ಶೈಲಜಾ ಅವರ ಶಿಷ್ಯೆ ಜಾಹ್ನವಿ ಅವರಿಂದ ನೃತ್ಯ ಕಾರ್ಯಕ್ರಮ, ಡೋಲ್ ಯೋಗ ನರಸಿಂಹ ತಂಡದಿಂದ ನಾದಸ್ವರ ನಡೆಯಲಿದೆ. ಆ.೧೧ರಂದು ಮಧ್ವಾರಾಧನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕ ಅನ್ನ ಸಂತರ್ಪಣೆಯೂ ನಡೆಯಲಿದೆ ಎಂದರು.
ಶ್ರೀ ಮಠದ ಪದಾಧಿಕಾರಿಗಳಾದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡರು, ಕೋಶಾಧಿಕಾರಿ ರಾಘವೇಂದ್ರ, ನಿರ್ದೇಶಕರಾದ ರಾಜಪ್ಪ, ಶ್ರೀ ಹರಿ, ದೀಪಕ್, ಸುನಿಲ್ ಹಾಗೂ ಶ್ರೀಮಠದ ಅರ್ಚಕರಿದ್ದರು.