ಕನ್ನಡಪ್ರಭ ವಾರ್ತೆ ಮಂಡ್ಯ
ಅಕ್ರಮ ದಾಖಲೆಗಳ ಸೃಷ್ಟಿ ಹೊಸದೇನಲ್ಲ. ೧೯೯೦ರಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಜಿಲ್ಲೆಯಲ್ಲೇ ನಾಗಮಂಗಲ ತಾಲೂಕಿನಲ್ಲಿ ಅತಿ ಹೆಚ್ಚು ೪೫೦೦ ಹೆಕ್ಟೇರ್ ಸರ್ಕಾರಿ ಭೂಮಿ ಇದೆ. ಈ ಪ್ರಕರಣವನ್ನು ಪೊಲೀಸರಿಂದ ಬೇಧಿಸಲಾಗದು. ಲೋಕಾಯುಕ್ತ ಪೊಲೀಸರು ಆಳಕ್ಕಿಳಿದು ತನಿಖೆ ನಡೆಸುವ ಸಾಧ್ಯತೆ ಕಡಿಮೆ. ಹಾಗಾಗಿ ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಪಡಿಸಿದರು.
ಸರ್ಕಾರಿ ಭೂಮಿ ಮೇಲೆ ಕಣ್ಣಿಟ್ಟಿರುವ ಈ ಪ್ರಕರಣದ ಕಿಂಗ್‌ಪಿನ್‌ಗಳು ಹಾಸನ-ಬೆಂಗಳೂರು ಹೆದ್ದಾರಿ, ಹಾಸನ-ತುಮಕೂರು ಹೆದ್ದಾರಿ ಹಾಗೂ ಜಲಸೂರು-ಮಾಗಡಿ ಹೆದ್ದಾರಿ ಪಕ್ಕದ ಪ್ರದೇಶಗಳನ್ನೇ ಆಯ್ದುಕೊಂಡಿರುವುದು ವಿಶೇಷವಾಗಿದೆ. ಪಟ್ಟಣದಿಂದ ಮೂರು ಕಿ.ಮೀ. ವ್ಯಾಪ್ತಿಯೊಳಗೆ ದರಖಾಸ್ತು ಜಮೀನು ಮಂಜೂರು ಮಾಡುವುದಕ್ಕೆ ಸಮಿತಿಗೆ ಅಧಿಕಾರವೇ ಇಲ್ಲ. ಆದರೂ ಜಮೀನು ಮಂಜೂರಾಗಿದೆ ಎಂದು ಆರೋಪಿಸಿದರು.ಒಬ್ಬೊಬ್ಬರ ಹೆಸರಿಗೆ ೩೦ ರಿಂದ ೪೦ ಎಕರೆ ಜಮೀನನ್ನು ಮಂಜೂರು ಮಾಡಿದ್ದಾರೆ. ಮೂಲ ಕಡತಗಳೇ ತಿದ್ದುಪಡಿಯಾಗಿವೆ. ಸಚಿವ ಎನ್.ಚಲುವರಾಯಸ್ವಾಮಿ ಅವರ ಆಶೀರ್ವಾದವಿಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ. ಇದಕ್ಕೆಲ್ಲಾ ಅವರೇ ನೇರ ಹೊಣೆಯಾಗಿದ್ದಾರೆ. ಅರಣ್ಯ ಜಮೀನೆಲ್ಲವನ್ನೂ ಲೂಟಿ ಹೊಡೆದಿದ್ದಾರೆ. ಇದಕ್ಕೆಲ್ಲಾ ಚಲುವರಾಯಸ್ವಾಮಿ ಅವರೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
೧೯೯೦ರಿಂದ ಇಲ್ಲಿಯವರೆಗೆ ಎಷ್ಟೆಷ್ಟು ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಲಾಗಿದೆ. ಇದರ ಸೂತ್ರಧಾರರು ಯಾರು, ಎಷ್ಟು ಜನರಿಗೆ ಅಕ್ರಮವಾಗಿ ಜಮೀನು ಮಂಜೂರಾಗಿದೆ ಎಂಬೆಲ್ಲಾ ಅಂಶಗಳ ಕುರಿತಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅವರಿಂದಲೇ ಭರಿಸಬೇಕು ಎಂದು ಒತ್ತಡ ಹೇರಿದರು.
ಮನ್‌ಮುಲ್‌ನಲ್ಲಿ ನಡೆಯುತ್ತಿದ್ದ ಹಾಲು-ನೀರು ಹಗರಣವನ್ನು ಜೆಡಿಎಸ್‌ನವರೇ ಬಯಲಿಗೆ ತಂದರು. ಆಗ ವೀರಾವೇಶದಿಂದ ಕುಣಿದಾಡಿದ ಕಾಂಗ್ರೆಸ್ಸಿಗರು ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೌನಕ್ಕೆ ಶರಣಾದರು. ಆ ಪ್ರಕರಣದ ತನಿಖೆಯನ್ನು ಮುಂದುವರೆಸಲೇ ಇಲ್ಲ. ಈಗಲೂ ಬಿಎಂಸಿಗಳಲ್ಲೇ ಹಾಲಿಗೆ ನೀರನ್ನು ಬೆರೆಸಲಾಗುತ್ತಿದೆ. ಸರ್ಕಾರದಿಂದ ಹಾಲಿಗೆ ನೀಡುವ ೫ ರು. ಸಹಾಯಧನ ಕಾಂಗ್ರೆಸ್ ಬೆಂಬಲಿಗರ ಸಂಬಂಧಿಕರಿಗೆ ಸೇರುತ್ತಿದೆ ಎಂದು ಆಪಾದಿಸಿದರು.